“ಆ ದಿನಗಳು’ ಖ್ಯಾತಿಯ ಚೇತನ್ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಚಿತ್ರರಂಗದ ಬಹುತೇಕರಿಗೆ ಗೊತ್ತಿದೆ. ಆದರೆ, ಯಾವಾಗ ಎಂಬುದು ಗೊತ್ತಿರಲಿಲ್ಲ. ಅವರ ಮದುವೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 2ರ ಸಂಜೆ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ಚೇತನ್ ಮೇಘಾ ಅವರನ್ನು ವಿವಾಹವಾಗುತ್ತಿದ್ದಾರೆ. ಇವರ ಮದುವೆ ಯಾವುದೇ ಆಡಂಬರವಿಲ್ಲದೆ, ತುಂಬಾ ಸರಳವಾಗಿ ನಡೆಯಲಿದೆ.
ಚೇತನ್ ಹಾಗು ಮೇಘಾ ಮದುವೆಯಲ್ಲಿ ಸಾಕಷ್ಟು ವಿಶೇಷತೆಗಳಿವೆ. ಅಂದು ವಚನ-ಸೂಫಿ ಗಾಯನ, ಸಿದ್ಧಿ ನೃತ್ಯ, ಲಂಬಾಣಿ ನೃತ್ಯ, ಕೊರಗ ನೃತ್ಯ, ಪ್ರತಿಜ್ಞೆ, ಮನದ ಮಾತಿನ ಜೊತೆಯಲ್ಲಿ ಪುಸ್ತಕ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಇನ್ನು, ಇವರ ಮದುವೆಯ ಆಮಂತ್ರಣ ಪತ್ರಿಕೆ ವಿಶೇಷವಾಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆ ಅಂದಮೇಲೆ, ಎಲ್ಲವೂ ಭರ್ಜರಿಯಾಗಿಯೇ ಇರುತ್ತೆ. ಅದರಲ್ಲೂ ಆಮಂತ್ರಣ ಪತ್ರಿಕೆಗಾಗಿಯೇ ಲಕ್ಷಗಟ್ಟಲೆ ಖರ್ಚು ಮಾಡುವವರೂ ಇದ್ದಾರೆ.
ಆದರೆ, ನಟ ಚೇತನ್ ಮದುವೆ ಪತ್ರಿಕೆ ನೋಡಿದವರಿಗೆ ನಿಜಕ್ಕೂ ಹೆಮ್ಮೆ ಮತ್ತು ಅಚ್ಚರಿ ಗ್ಯಾರಂಟಿ. ಅಂದಹಾಗೆ, ಚೇತನ್ ಮತ್ತು ಮೇಘಾ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮಣ್ಣಿನಲ್ಲಿ ಬಿತ್ತಿದರೂ ಅದು ಚಿಗುರೊಡೆಯುತ್ತೆ ಎಂಬುದು ವಿಶೇಷ. ಹೌದು, ಸರಳ ಮತ್ತು ಆಕರ್ಷ ವಾ ಗಿರುವ ಆಮಂತ್ರಣ ಪತ್ರಿಕೆ ಯನ್ನು ಕೆಳಗೆ ಬೀಳಿಸಿದರೂ, ಅದು ಚಿಗುರೊಡೆಯುತ್ತೆ. ಆ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಬೀಜವನ್ನು ಹುದುಗಿಸಿಡಲಾಗಿದೆ.
ಆ ಆಮಂತ್ರಣ ಪತ್ರಿಕೆ ಓದಿ ಎಸೆದರು ಅದು ಅಲ್ಲೆ ಚಿಗುರೊಡೆಯುತ್ತೆ. ಪರಿಸರ ಕಾಳಜಿ ಇರುವ ಚೇತನ್, ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿಯೂ ಪರಿಸರ ಕಾಳಜಿ ಮೆರೆದಿರುವುದು ಗಮನ ಸೆಳೆಯುತ್ತದೆ. ಆ ಮದುವೆ ಪತ್ರಿಕೆಯಲ್ಲಿ “ನಿಮ್ಮ ಶುಭ ಹಾರೈಕೆಯೇ ನಮಗೆ ಹೂ ಗುಚ್ಚ ಮತ್ತು ಉಡುಗೊರೆಯಾಗಿರಲಿ’ ಎಂದು ಬರೆಯಲಾಗಿದ್ದು, ಬೀಜವನ್ನು ಹುದುಗಿಕೊಂಡಿ ವ ಪರಿಸರ ಸ್ನೇಹಿ ಈ ಆಹ್ವಾನ ಪತ್ರವನ್ನು ಮಣ್ಣಲ್ಲಿ ಬಿತ್ತಿ ಚಿಗುರೊಡೆಯುತ್ತದೆ ಎಂಬುದನ್ನೂ ಬರೆಯಲಾಗಿದೆ.
ಇನ್ನು, ಆಮಂತ್ರಣ ಪತ್ರಿಕೆ ಪರಿಸರ ಸ್ನೇಹಿ ಜೊತೆಗೆ ಸುಂದರ ಕಸೂತಿ ಕೂಡ ಗಮನ ಸೆಳೆಯುತ್ತಿದೆ. ಅದೇನೆ ಇರಲಿ, ಆಮಂತ್ರಣ ಪತ್ರಿಕೆ ಜೊತೆ ಸಸಿ ಕೊಡುವುದು ಸಹಜವಾಗಿತ್ತು. ಆದರೆ, ಚೇತನ್ ಒಂದು ಹೆಜ್ಜೆ ಮುಂದೆ ಹೋಗಿ, ಆಮಂತ್ರಣ ಪತ್ರಿಕೆಯಲ್ಲೇ ಬೀಜ ಹುದುಗಿಸಿ ಪರಿಸರ ಪ್ರೀತಿ ತೋರಿದ್ದಾರೆ.