Advertisement

ಮಾಜಿ ಕ್ರಿಕೆಟಿಗ, ಉತ್ತರ ಪ್ರದೇಶದ ಸಚಿವ ಚೇತನ್‌ ಚೌಹಾಣ್‌ ಸ್ಥಿತಿ ಗಂಭೀರ

05:07 PM Aug 15, 2020 | keerthan |

ಲಕ್ನೊ: ಭಾರತದ ಮಾಜಿ ಆರಂಭಕಾರ, ಎರಡು ಬಾರಿಯ ಲೋಕಸಭಾ ಸದಸ್ಯ, ಹಾಲಿ ಉತ್ತರಪ್ರದೇಶ ಸರಕಾರದ ಸಚಿವರಾಗಿರುವ ಚೇತನ್‌ ಚೌಹಾಣ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಗುರ್ಗಾಂವ್‌ ಆಸ್ಪತ್ರೆ ಮೂಲಗಳು ಹೇಳಿವೆ.

Advertisement

ಜುಲೈಯಲ್ಲಿ ತಗುಲಿದ ಕೋವಿಡ್-19 ಸೋಂಕಿನಿಂದ 72 ವರ್ಷದ ಚೇತನ್‌ ಚೌಹಾಣ್‌ ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಈಗ ಕಿಡ್ನಿ ವೈಫ‌ಲ್ಯ ಎದುರಾಗಿದ್ದು, ರಕ್ತದೊತ್ತಡದ ಸಮಸ್ಯೆಯೂ ಕಾಡುತ್ತಿದೆ. ಇದರಿಂದ ಅವರಿಗೆ ಜೀವರಕ್ಷಕ ಸಾಧನವನ್ನು ಅಳವಡಿಸಲಾಗಿದೆ ಎಂದು ಗುರ್ಗಾಂವ್‌ನ “ಮೇದಾಂತ ಹಾಸ್ಪಿಟಲ್‌’ನ ವೈದ್ಯರು ತಿಳಿಸಿದ್ದಾರೆ. ಕೋವಿಡ್ ಪಾಸಿಟಿವ್‌ ಬಂದಾಗ ಚೌಹಾಣ್‌ ಅವರನ್ನು ಲಕ್ನೋದ “ಸಂಜಯ್‌ ಗಾಂಧಿ ಪಿಜಿಐ ಹಾಸ್ಪಿಟಲ್‌’ಗೆ ದಾಖಲಿಸಲಾಗಿತ್ತು. ಅಲ್ಲಿಂದ ಗುರ್ಗಾಂವ್‌ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ಪ್ರಸ್ತುತ ಉತ್ತರಪ್ರದೇಶ ಸರಕಾರದಲ್ಲಿ ಚೇತನ್‌ ಚೌಹಾಣ್‌ ಸೈನಿಕ ಕಲ್ಯಾಣ, ಗೃಹರಕ್ಷಕ ದಳ, ಸಾರ್ವಜನಿಕ ಸಂಪರ್ಕ ಖಾತೆ ಮತ್ತು ನಾಗರಿಕ ರಕ್ಷಣಾ ಸಚಿವರಾಗಿದ್ದಾರೆ. ಕಳೆದ ವರ್ಷದ ತನಕ ರಾಜ್ಯದ ಕ್ರೀಡಾ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದರು.

ಗಾವಸ್ಕರ್‌ ಜತೆಗಾರ

1969-1978ರ ಅವಧಿಯಲ್ಲಿ 40 ಟೆಸ್ಟ್‌ ಪಂದ್ಯಗಳನ್ನಾಡಿದ್ದ ಚೇತನ್‌ ಚೌಹಾಣ್‌ 31.57ರ ಸರಾಸರಿಯಲ್ಲಿ 2,084 ರನ್‌ ಗಳಿಸಿದ್ದಾರೆ. ಆದರೆ ಇವರ ಶತಕದ ಕನಸು ಮಾತ್ರ ಈಡೇರಲಿಲ್ಲ. 97 ರನ್‌ ಸರ್ವಾಧಿಕ ಗಳಿಕೆಯಾಗಿದೆ.

Advertisement

70ರ ದಶಕದಲ್ಲಿ ಸುನೀಲ್‌ ಗಾವಸ್ಕರ್‌-ಚೇತನ್‌ ಚೌಹಾಣ್‌ ಭಾರತದ ಯಶಸ್ವಿ ಆರಂಭಿಕ ಜೋಡಿಯಾಗಿತ್ತು. ಇಬ್ಬರೂ ಸೇರಿ ಮೊದಲ ವಿಕೆಟಿಗೆ ಮೂರು ಸಾವಿರಕ್ಕೂ ಅಧಿಕ ರನ್‌ ಪೇರಿಸಿದ್ದರು. ಇದರಲ್ಲಿ 10 ಶತಕದ ಜತೆಯಾಟಗಳು ಸೇರಿವೆ. 7 ಏಕದಿನ ಪಂದ್ಯಗಳನ್ನೂ ಆಡಿರುವ ಚೌಹಾಣ್‌, 153 ರನ್‌ ಗಳಿಸಿದ್ದಾರೆ.

ಮಹಾರಾಷ್ಟ್ರ ಮತ್ತು ದಿಲ್ಲಿ ಪರ ರಣಜಿ ಟ್ರೋಫಿ ಪಂದ್ಯಗಳನ್ನಾಡಿದ ಚೇತನ್‌ ಚೌಹಾಣ್‌ 1981ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next