Advertisement

ಚೇರು: ಮುಚ್ಚುವ ಭೀತಿಯಲ್ಲಿ ನಕ್ಸಲ್‌ ಬಾಧಿತ ಪ್ರದೇಶದ ಶಾಲೆ

11:54 AM Jun 20, 2024 | Team Udayavani |

ಸುಬ್ರಹ್ಮಣ್ಯ: ಸರಕಾರಿ ಶಾಲೆಗೆ ಶಿಕ್ಷಕರನ್ನು ನೇಮಿಸಿ ಎಂದು ಪೋಷಕರು, ಊರವರು ಆಗ್ರಹಿಸಿದರೂ ಸ್ಪಂದನೆ ಸಿಗದೆ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕಿದ್ದರ ಪರಿಣಾಮ ನಕ್ಸಲ್‌ ಬಾಧಿತ ಪ್ರದೇಶದ
ಚೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದು ಈ ವರ್ಷ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದೆ.

Advertisement

ಈ ಶಾಲೆಗೆ ಪ್ರಕೃತ ಯಾವುದೇ ಮಕ್ಕಳ ದಾಖಲಾತಿ ನಡೆದಿಲ್ಲ. ಇಲ್ಲಿದ್ದ ಮಕ್ಕಳನ್ನು ಬೇರೆ ಸರಕಾರಿ ಹಾಗೂ ಖಾಸಗಿ ಶಾಲೆಗೆ ಪೋಷಕರು ಕಳುಹಿಸಿದ್ದಾರೆ.

ಕಳೆದ ವರ್ಷ 13 ಮಕ್ಕಳು
2022-23ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ ಸುಮಾರು 13 ಮಕ್ಕಳು ಕಲಿಯುತ್ತಿದ್ದರು. ಅದರಲ್ಲಿ ಈ ವರ್ಷ 5 ನೇ ತರಗತಿಯಲ್ಲಿ ಮೂವರು ವಿದ್ಯಾರ್ಥಿಗಳು 6ನೇ ತರಗತಿಗೆ ಬೇರೆ ಶಾಲೆಗೆ ಸೇರ್ಪಡೆಗೊಂಡಿದ್ದು, ಉಳಿದ ವಿದ್ಯಾರ್ಥಿಗಳನ್ನು ಸುಬ್ರಹ್ಮಣ್ಯದ ಸರಕಾರಿ ಹಾಗೂ ಬೇರೆ ಖಾಸಗಿ ಶಾಲೆಗಳಿಗೆ ಸೇರ್ಪಡೆ ಮಾಡಲಾಗಿದೆ.

ವರ್ಗಾವಣೆ ಪ್ರಮಾಣ ಪತ್ರಕ್ಕೂ ಶಾಲೆಗೆ ಅರ್ಜಿ ಬಂದಿದೆ. ಈ ವರ್ಷ ಒಂದನೇ ತರಗತಿಗೆ ಮಕ್ಕಳು ಇಲ್ಲದೇ ಇರುವುದರಿಂದ ಈ ವರೆಗೆ ಇಲ್ಲಿ ಯಾವುದೇ ತರಗತಿ ನಡೆದಿಲ್ಲ ಎಂದು ತಿಳಿದು ಬಂದಿದೆ.

ಬೇಡಿಕೆಗೆ ಸಿಗದ ಸ್ಪಂದನೆ
ಶಾಲೆಗೆ ಪ್ರಸ್ತುತ 60 ವರ್ಷ ತುಂಬಿದೆ. ಇಲ್ಲಿ ಕಳೆದ ಹಲವು ವರ್ಷಗಳಿಂದ ಶಿಕ್ಷಕರ ಕೊರತೆ ಉಂಟಾಗಿತ್ತು. ಶಿಕ್ಷಕರ ನೇಮಕ್ಕೆ ವಿವಿಧ ರೀತಿಯಲ್ಲಿ ಒತ್ತಾಯಗಳನ್ನು ಮಾಡಲಾಗಿದ್ದರೂ ಇಲಾಖೆಯಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಇಲ್ಲಿದ್ದ ಖಾಯಂ ಶಿಕ್ಷಕರು ಕೆಲವು ವರ್ಷಗಳ ಹಿಂದೆ ವರ್ಗಾವಣೆ ಪಡೆದು ತೆರಳಿದ್ದು. ಕಳೆದ ವರ್ಷದಿಂದ ಹತ್ತಿರದ ಶಾಲೆಯ ಶಿಕ್ಷಕರೋರ್ವರು ಪ್ರಭಾರ ಮುಖ್ಯ ಶಿಕ್ಷಕರಾಗಿ ವಾರದ ಕೆಲವು ದಿನ ಕರ್ತವ್ಯದಲ್ಲಿದ್ದರೆ, ಇಬ್ಬರು ಅತಿಥಿ ಶಿಕ್ಷಕರು
ಕರ್ತವ್ಯ ನಿರ್ವಹಿಸಿದ್ದರು. ಇದೀಗ ಬೇಡಿಕೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುವುದಿಲ್ಲ. ಅವರ ಶೈಕ್ಷಣಿಕ ಭವಿಷ್ಯ ಮುಖ್ಯ ಎಂದುಕೊಂಡು ಬೇರೆ ಶಾಲೆಗೆ ಸೇರಿಸಿದ್ದಾರೆ.

Advertisement

ನಕ್ಸಲ್‌ ಬಾಧಿತ ಪ್ರದೇಶ
ಬಿಳಿನೆಲೆ ಗ್ರಾಮ ನಕ್ಸಲ್‌ ಭೇಟಿ ನೀಡಿದ ಗ್ರಾಮವಾಗಿದ್ದು, ಚುನಾವಣೆ ಸಂದರ್ಭದಲ್ಲೂ ನಕ್ಸಲ್‌ ಭೇಟಿ ನೀಡಿದ ಗ್ರಾಮವೆಂದೂ ಉಲ್ಲೇಖೀಸಲ್ಪಡುತ್ತಿದೆ. ಚೇರು ಪ್ರದೇಶದ ಅರಣ್ಯದಂಚಿನ ಮನೆಯೊಂದಕ್ಕೆ ನಕ್ಸಲರ ತಂಡ ಭೇಟಿ ನೀಡಿದ ಘಟನೆ ನಡೆದಿತ್ತು.
ಹತ್ತು ವರ್ಷಗಳ ಹಿಂದೆಯೂ ಇಲ್ಲಿ ನಕ್ಸಲರ ಸಂಚಾರ ಕಂಡುಬಂದಿತ್ತು. ಊರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಊರಿನ ಜನತೆಗೆ ಧೈರ್ಯ ತುಂಬಬೇಕಿದ್ದ ಸರಕಾರ, ಅಧಿಕಾರಿಗಳು, ಜನಪ್ರತಿನಿದಿಗಳು ಜನತೆಯ ಬೇಡಿಕೆಗೆ ಮನ್ನಣೆ ನೀಡದೇ ಇರುವುದರಿಂದ ಸರಕಾರಿ ಶಾಲೆ ಮುಚ್ಚುವ ಸ್ಥಿತಿ ಬಂದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಮುಂದೆ ನಿರ್ಧಾರ ತೆಗೆದುಕೊಳ್ಳುತ್ತೇವೆ

ಚೇರು ಶಾಲೆಯಲ್ಲಿ ಆರು ಮಕ್ಕಳಿದ್ದರು. ಅವರು ಇದೀಗ ಬೇರೆ ಬೇರೆ ಶಾಲೆಗೆ ಸೇರ್ಪಡೆಗೊಂಡಿದ್ದಾರೆ. ಈಗಲೂ ಅಲ್ಲಿ
ನಮ್ಮ ಶಿಕಕ್ಷಕರಿದ್ದಾರೆ. ಜೂನ್‌ 30ರ ವರೆಗೆ ದಾಖಲಾತಿಗೆ ಅವಕಾಶ ಇದೆ. ಈಗಲೇ ಯಾವುದೇ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಯಾವುದೇ ದಾಖಲಾತಿ ನಡೆಯದೇ ಇದ್ದಲ್ಲಿ ಮುಂದೆ ನಿರ್ಧಾರ ತೆಗೆದುಕೊಳ್ಳುತ್ತೇವೆ.
-ಲೋಕೇಶ್‌,
ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು
ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next