Advertisement

ಉಡುಪಿ ನಗರದೊಳಗೂ ಬಸ್‌ ಸರ್ಕಸ್‌! ಬೆಳಗ್ಗೆ , ಸಂಜೆ ವಿದ್ಯಾರ್ಥಿಗಳ ಗೋಳಾಟ

05:34 PM Jun 14, 2024 | Team Udayavani |

ಉಡುಪಿ: ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದ ಉಡುಪಿ, ಮಣಿಪಾಲ ಜಾಗತಿಕವಾಗಿಯೂ ಗಮನ ಸೆಳೆಯುತ್ತಿದೆ. ಇಲ್ಲಿನ ಬಸ್‌ ವ್ಯವಸ್ಥೆ ಜಗತ್ತಿನಲ್ಲೇ  ಬೆಸ್ಟ್‌ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಾನಾ ಕಾರಣಗಳಿಗಾಗಿ ಬಸ್‌ ವ್ಯವಸ್ಥೆ ವಿದ್ಯಾರ್ಥಿಗಳ ಎಲ್ಲ ಅಗತ್ಯತೆಗಳನ್ನು ಪೂರೈ ಸುವ ಮಟ್ಟಕ್ಕೆ ಬೆಳೆದಿಲ್ಲ. ಅಚ್ಚರಿ ಎಂದರೆ ನಗರಸಭೆಯ ಬಹುತೇಕ ವಾರ್ಡ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ ಕಾಲೇಜಿಗೆ ಹೋಗಿ, ಬರಲು ಬೇಕಾದ ವ್ಯವಸ್ಥೆ ಇಲ್ಲ.

Advertisement

ನಗರ ಕೇಂದ್ರದಲ್ಲೇ ಬಸ್‌ನಲ್ಲಿ ಸಂಚಾರ ಮಾಡಲು ವಿದ್ಯಾರ್ಥಿಗಳು ಸಾಕಷ್ಟು ಸಾಹಸಪಡಬೇಕಾದ ಪರಿಸ್ಥಿತಿಯಿದೆ. ನಗರದ ಕೆಲವು ವಾರ್ಡ್‌ಗಳಲ್ಲಿ ಸರಕಾರಿ/ ಖಾಸಗಿ ಬಸ್‌ ಓಡಿಸಲು ಪರವಾನಿಗೆ ಇದ್ದರೂ ಬಸ್‌  ಗಳು ಓಡುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ದೂರು. ಒಂದು ವೇಳೆ ಬಸ್‌ ವ್ಯವಸ್ಥೆ ಇದ್ದರೂ ಸೀಮಿತವಾಗಿರುವ ಒಂದೇ ಬಸ್‌ನಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು,
ಒದ್ದಾಡಿಕೊಂಡೇ ಕಾಲೇಜಿಗೆ ಹೋಗಬೇಕಾಗಿದೆ.

ಪ್ರಮುಖ ಕಾಲೇಜುಗಳಿಗೆ ಕನೆಕ್ಟಿವಿಟಿ ಕೊರತೆ!
ಉಡುಪಿ, ಮಣಿಪಾಲ, ಸಂತೆಕಟ್ಟೆ ಭಾಗದಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಅವುಗಳಿಗೆ ಕೇಂದ್ರ ಬಸ್‌ ನಿಲ್ದಾಣ ಹೊರತುಪಡಿಸಿದರೆ ಬೇರೆ ಭಾಗದಿಂದ ಪರ್ಯಾಯ ಸಂಪರ್ಕಗಳ ಕೊರತೆ ಇದೆ. ಮಹಾತ್ಮಾ ಗಾಂಧಿ ಮೆಮೋರಿಯಲ್‌ ಕಾಲೇಜು, ಪೂರ್ಣಪ್ರಜ್ಞಾ ಕಾಲೇಜು, ಸರಕಾರಿ ಮಹಿಳಾ ಕಾಲೇಜು, ಬಾಲಕಿಯರ ಪದವಿಪೂರ್ವ ಕಾಲೇಜು, ವಿದ್ಯೋದಯ ಪದವಿಪೂರ್ವ ಕಾಲೇಜು, ಜ್ಞಾನಸುಧಾ, ಮಾಹೆ ವಿ.ವಿ. ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳು, ವೃತ್ತಿಪರ ಕೌಶಲ
ತರಬೇತಿ ಸಂಸ್ಥೆ, ಐಟಿಐ, ಡಿಪ್ಲೊಮಾ ಕಾಲೇಜು. ಸಂತೆಕಟ್ಟೆ ಮಿಲಾಗ್ರಿಸ್‌, ಮೌಂಟ್‌ರೋಸರಿ, ತೆಂಕನಿಡಿಯೂರು ಪದವಿ, ಸ್ನಾತಕೋತ್ತರ ಪದವಿ, ಪದವಿಪೂರ್ವ ಕಾಲೇಜು ಜತೆಗೆ ವಿವಿಧ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸಿಂಗ್‌ ಶಿಕ್ಷಣವು ಪ್ರಮುಖವಾಗಿದೆ.

ಮಣಿಪಾಲ ಭಾಗಕ್ಕೆ ಬರುವ ವಿದ್ಯಾರ್ಥಿಗಳಿಗೆ ಉಡುಪಿಯಿಂದ ನೇರ ಬಸ್‌ನಲ್ಲೇ ಬರಬೇಕು. ಒಂದು ವೇಳೆ ಸಂತೆಕಟ್ಟೆ ಭಾಗದವರು ಮಣಿ ಪಾಲಕ್ಕೆ ಬರಬೇಕಾದವರೂ ಉಡುಪಿಗೆ ಸುತ್ತು ಹೊಡೆದೇ ಬರಬೇಕು. ಹಿರಿಯಡಕ ಭಾಗದವರು ತೆಂಕ ನಿಡಿಯೂರಿನ ಕಾಲೇಜಿಗೆ ಹೋಗಬೇಕಾದರೆ ಉಡುಪಿಗೆ ಹೋಗಿಯೇ ಹೋಗಬೇಕು.ಯಾಕೆಂದರೆ ನೇರವಾಗಿ ಸಂಪರ್ಕ ರಸ್ತೆ ಇದ್ದರೂ ಬಸ್‌ಗಳಿಲ್ಲ!

ನಿತ್ಯವೂ ಇದೇ ಗೋಳು
ಬೆಳಗ್ಗೆ 9.30ರೊಳಗೆ ಕಾಲೇಜು ಮುಟ್ಟಬೇಕು. ಇಲ್ಲವಾದರೆ ಮೊದಲ ತರಗತಿ ಮಿಸ್‌ ಆಗುತ್ತದೆ. ನಮ್ಮ ರೂಟ್‌ನಲ್ಲಿ ಒಂದೇ ಬಸ್‌ ಇರುವುದು ಅದು ಬರುವಾಗಲೇ ಭರ್ತಿಯಾಗುತ್ತದೆ. ಒಂದೋ ಫುಟ್‌ ಬೋರ್ಡ್‌ ಮೇಲೆ ನೇತಾಡುತ್ತಾ ಹೋಗಬೇಕು. ಇಲ್ಲವೇ ಬೇರೆಯವರ ಬೈಕ್‌, ಆಟೋ ಕಾಯಬೇಕು. ನಿತ್ಯವೂ ಇದೇ ಗೋಳಾಗಿದೆ. ಕನಿಷ್ಠ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಹೆಚ್ಚುವರಿ ಬಸ್‌ ಒದಗಿಸಬೇಕೆಂದು ಕಾಲೇಜು ವಿದ್ಯಾರ್ಥಿ ಪ್ರವೀಣ್‌ ಕುಮಾರ್‌ ಅಳಲು ತೋಡಿಕೊಂಡರು.

Advertisement

ಸೀಟು ಬಿಡಿ ನಿಲ್ಲಲೂ ಜಾಗವಿಲ್ಲ
ನಗರದ ಕೆಲವು ಪ್ರತಿಷ್ಠಿತ ಕಾಲೇಜುಗಳ ಸಮೀಪ ಸಂಜೆ ಮನೆಗೆ ತೆರಳಲು ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಎದುರು ನೋಡುತ್ತ ನಿಂತಿರುತ್ತಾರೆ. ಎಂಜಿಎಂ, ಪಿಪಿಸಿ ಬಳಿ, ಕರಾವಳಿ ಬೈಪಾಸ್‌, ಸಿಟಿ ಬಸ್‌ ನಿಲ್ದಾಣ, ಸರ್ವಿಸ್‌ ಬಸ್‌ ನಿಲ್ದಾಣ, ಸಂತೆಕಟ್ಟೆ, ಆದಿ ಉಡುಪಿ ಬಳಿ ಬಸ್‌ ಬಂದೊಡನೆ ಎಲ್ಲರೂ ನೂಕುನಗ್ಗಲಿನಲ್ಲಿ ಬಸ್‌ ಹತ್ತಲು ಸರ್ಕಸ್‌ ಮಾಡುತ್ತಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಸೀಟ್‌ಗಿಂತಲೂ ಮುಖ್ಯ, ಬಸ್‌ನಲ್ಲಿ ನಿಂತುಕೊಳ್ಳಲು ಜಾಗ ಸಿಕ್ಕರೇ ಸಾಕು ಎಂಬ ಮನಸ್ಥಿತಿ. ಎಲ್ಲರೂ ಮನೆಗೆ ಸೇರುವ ತವಕದಲ್ಲಿ ಒಬ್ಬರನ್ನೊಬ್ಬರು ದೂಡಿಕೊಂಡು ಬಸ್‌ ಹತ್ತಿ ಬಿಡುತ್ತಾರೆ.

ಎಲ್ಲೆಲ್ಲಿ ಸಮಸ್ಯೆ ಇದೆ?
ಮಣಿಪಾಲ-ಬುಡ್ನಾರು- ಇಂದಿರಾನಗರ, ಡಯಾನ, ಚಿಟ್ಪಾಡಿ-ಮಿಷನ್‌ಕಾಂಪೌಂಡ್‌ ಮಾರ್ಗವಾಗಿ ಬರುವ ಬಸ್‌ ಇಂದಿರಾ ನಗರಕ್ಕೆ ಬೆಳಗ್ಗೆ 9 ಗಂಟೆಗೆ ಬರುತ್ತಿತ್ತು. ಇದು ಒಂದು ಬಸ್‌ ಮಾತ್ರವಿದ್ದು, ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಬಹಳ ಸಮಸ್ಯೆಯಾಗಿತ್ತು. ಇದೀಗ ಈ ರೂಟ್‌ನಲ್ಲಿ ಇನ್ನೊಂದು 9.10ಕ್ಕೆ (ಇಂದಿರಾನಗರ ಸ್ಟಾಪ್‌) ಇನ್ನೊಂದು ಬಸ್‌ ಬರುತ್ತಿದೆ.
ತೆಂಕನಿಡಿಯೂರು, ಕೊಡವೂರು ಭಾಗದಿಂದ ಉಡುಪಿ ಕಡೆಗೆ ಆಗಮಿಸುವ ಮತ್ತು ಸರಳೇಬೆಟ್ಟು, ಮಂಚಿ, ಅಲೆವೂರು ಕಡೆಯಿಂದ ಆಗಮಿಸುವ ವಿದ್ಯಾರ್ಥಿಗಳು ಸಮರ್ಪಕ ಬಸ್‌ ಸೇವೆ ಇಲ್ಲದೇ ಕಂಗಾಲಾಗಿದ್ದಾರೆ.

ಫುಟ್‌ ಬೋರ್ಡೇ ಗತಿ!
ಸೀಮಿತ ಸಂಖ್ಯೆಯ ಬಸ್‌ಗಳಿರುವ ಪರಿಣಾಮ, ಸದ್ಯಕ್ಕೆ ಇರುವ ರೂಟ್‌ ಬಸ್‌ಗಳಲ್ಲಿ ಹೆಚ್ಚು ವಿದ್ಯಾರ್ಥಿ ಗಳು ಅನಿವಾರ್ಯವಾಗಿ ಸಂಚಾರ ಮಾಡಬೇಕಾಗಿದೆ. ಹಿಂಬಾಗಿಲಿನಲ್ಲಿ ಯುವಕರು ಫುಟ್‌ಬೋರ್ಡ್‌ನಲ್ಲಿಯೇ ನೇತಾಡಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣ ಮಾಡುವುದು ಸಾಮಾನ್ಯವಾಗಿದೆ. ಕೊಂಚ ಎಚ್ಚರ ತಪ್ಪಿದರೂ, ಅಥವಾ ಸಡನ್‌ ಬ್ರೇಕ್‌ ಹಾಕಿದ ಸಂದರ್ಭ, ಹಂಪ್‌ಗಳಲ್ಲಿ ಬಸ್‌ನ ಏರಿಳಿತಕ್ಕೆ ಫುಟ್‌ಬೋರ್ಡ್‌ ನಲ್ಲಿರುವ ವಿದ್ಯಾರ್ಥಿಗಳು ಆಯತಪ್ಪಿ ಬೀಳುವ ಸಾಧ್ಯತೆ
ಹೆಚ್ಚಿದೆ. ನಗರದ ಬಸ್‌ಗಳಲ್ಲಿ ಸಂಜೆ ವೇಳೆ ಈ ದೃಶ್ಯ ಸಾಮಾನ್ಯವಾಗಿರುತ್ತಿದೆ. ಶಾಲೆ, ಕಾಲೇಜು ವಿದ್ಯಾರ್ಥಿನಿಯರು ರಶ್‌ ಇದ್ದರೂ ಮನೆಗೆ ತಲುಪಬೇಕಾದ ಅನಿವಾರ್ಯತೆಯಲ್ಲಿ ಸಂಚಾರ ಮಾಡಬೇಕಾಗಿದೆ.

ಬಸ್‌ ಮಿಸಾದ್ರೆ ಕ್ಲಾಸ್‌ ಮಿಸ್‌
ನಗರದ ಪ್ರಮುಖ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಮುಂಜಾನೆ ಬೇಗ ಎದ್ದು ಸರಿಯಾದ ಸಮಯಕ್ಕೆ ರೆಡಿಯಾಗಬೇಕು. ಒಂದು ವೇಳೆ ಸ್ವಲ್ಪ ಸಮಯ ವ್ಯತ್ಯಾಸವಾದರೂ ಬಸ್‌ ಮಿಸ್ಸಾಗಿ ಮೊದಲ ಕ್ಲಾಸ್‌ ಮಿಸ್ಸಾಗುತ್ತದೆ ಎಂಬ ಅಳಲು ವಿದ್ಯಾರ್ಥಿಗಳದ್ದು.

*ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next