Advertisement
ಬ್ರಹ್ಮಾವರ: ಕೃಷಿ ಆದಾಯದಿಂದ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದಾಗ ಭೂಮಿತಾಯಿಯನ್ನು ಮರೆಯಬಾರದು. ಹಿರಿಯರ ಜಾಗ ಹಡಿಲು ಬಿಡಬಾರದು ಎನ್ನುವ ಸದುದ್ದೇಶದಿಂದ ವೃತ್ತಿಯಲ್ಲಿ ನ್ಯಾಯವಾದಿ, ನೋಟರಿಯಾದರೂ ಮನೋಹರ ಶೆಟ್ಟಿ ಅವರು ಹುಟ್ಟೂರು ಮುಡೂರಿನಲ್ಲಿ 10 ಎಕ್ರೆ ಸುಂದರ ತೋಟ ನಿರ್ಮಿಸಿದ್ದಾರೆ.
Related Articles
ಸುಮಾರು 1,500 ಅಡಿಕೆ ಗಿಡ ಫಲ ಬರಲು ಪ್ರಾರಂಭವಾಗಿದೆ. 220 ತೆಂಗಿನ ಸಸಿ ಉತ್ತಮ ಬೆಳವಣಿಗೆಯಲ್ಲಿದೆ. ಮಧ್ಯದಲ್ಲಿ ಮನೆಗೆ ಬೇಕಾದಷ್ಟು ತರಕಾರಿ ಬೆಳೆಯುತ್ತಾರೆ. ಈ ಸುಂದರ ತೋಟಕ್ಕೆ ಅಜ್ಜಿಯ ನೆನಪಿಗಾಗಿ ರಾಧಮ್ಮ ಶೆಡ್ತಿ ಫಾರ್ಮ್ ಹೆಸರಿಸಿದ್ದಾರೆ.
Advertisement
ಹಡಿಲು ಬಿಡಬೇಡಿಇಂದು ಬಹುತೇಕ ಮಂದಿ ವಿದ್ಯಾವಂತರಾಗಿ ಪೇಟೆ ಸೇರಿದ್ದಾರೆ. ಹಳ್ಳಿಯ ಆಸ್ತಿ ಸಂಪೂರ್ಣ ಹಡಿಲು ಬಿದ್ದಿದೆ. ಉತ್ತಮ ನೌಕರಿಯಲ್ಲಿರುವವರು ಮತ್ತೆ ಕೃಷಿ ಚಟುವಟಿಕೆ ನಡೆಸಬೇಕು ಎಂದು ಮನೋಹರ ಶೆಟ್ಟಿ ಅವರು ಪ್ರೇರೇಪಿಸುತ್ತಾರೆ. ಜತೆಗೆ ನೌಕರರನ್ನು ಮನೆಯವರಂತೆ ಪ್ರೀತಿ, ವಿಶ್ವಾಸದಿಂದ ಕಾಣಬೇಕು ಎನ್ನುತ್ತಾರೆ. ಮನಸ್ಸಿದ್ದರೆ ಮಾರ್ಗ
ಎಷ್ಟೇ ಕಾರ್ಯ ಒತ್ತಡವಿದ್ದರೂ ಮನಸ್ಸಿದ್ದರೆ ಕೃಷಿ ಸಾಧ್ಯ ಎನ್ನುವುದಕ್ಕೆ ಮನೋಹರ ಶೆಟ್ಟಿ ಅವರು ಉತ್ತಮ ನಿದರ್ಶನ. ಕಚೇರಿಯಲ್ಲಿ ಎಷ್ಟೇ ಕರ್ತವ್ಯವಿದ್ದರೂ ಮಧ್ಯಾಹ್ನದ ವೇಳೆ ತೋಟಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಾರೆ. ಹಸಿರಿನ ಕೊಡುಗೆ
ಕೇವಲ ವಾಣಿಜ್ಯ ದೃಷ್ಟಿಯಿಂದ ಅಡಿಕೆ, ತೆಂಗು ಮಾತ್ರ ಬೆಳೆಯಬಾರದು. ವಿಭಿನ್ನ ಮರಗಳನ್ನು ಬೆಳೆಸಬೇಕು. ಸಾಧ್ಯವಾದಷ್ಟು ಹಸಿರು ಬೆಳೆಸಿದರೆ ವಾತಾವರಣ ತಂಪಾಗಿರುತ್ತದೆ ಜತೆಗೆ ನೀರು ನೈಸರ್ಗಿಕವಾಗಿ ಇಂಗುತ್ತದೆ. ಇದುವೇ ನಾವು ಭೂಮಿಗೆ ಕೊಡುವ ಕೊಡುಗೆ ಎನ್ನುತ್ತಾರೆ. ನೀರಿನ ಮಿತ ಬಳಕೆ
ಇರುವ ನೀರನ್ನು ಸಾಧ್ಯವಾದಷ್ಟು ಮಿತವಾಗಿ ಬಳಸಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪೂರ್ತಿ ತೋಟಕ್ಕೆ ಹನಿ ನೀರಾವರಿ ಅಳವಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ನೋಡಿಕೊಂಡು ಇನ್ನೂ 5 ಎಕ್ರೆ ಹಡಿಲು ಭೂಮಿ ಅಭಿವೃದ್ದಿಪಡಿಸುವ ಯೋಜನೆ ಹೊಂದಿದ್ದಾರೆ. ಬೇರೆ ಬೇರೆ ಕಾರಣಗಳನ್ನು ನೀಡಿ ಇಂದು ಕೃಷಿ ಭೂಮಿ ಬಂಜರು ಮಾಡುತ್ತಿದ್ದಾರೆ. ಉದ್ಯೋಗ ನಿಮಿತ್ತ ಪೇಟೆ ಸೇರಿಕೊಂಡಿದ್ದಾರೆ. ಉದ್ಯೋಗದಲ್ಲಿರುವವರೂ, ಪೇಟೆಯಲ್ಲಿರುವವರೂ ಹಳ್ಳಿಯಲ್ಲಿ ಕೃಷಿ ಮಾಡಬಹುದು ಎಂದು ಮನೋಹರ ಶೆಟ್ಟಿ ಅವರು ತೋರಿಸಿಕೊಟ್ಟಿದ್ದಾರೆ. ಇತರರಿಗೆ ಪ್ರೇರಣೆಯಾಗಿದ್ದಾರೆ. ಕಷ್ಟದ ದಿನ ಮರೆಯಬೇಡಿ
ಬೆಳಗ್ಗೆ ಡೈರಿಗೆ ಹಾಲು ನೀಡಿ, ಗದ್ದೆ, ತೋಟ, ದನಗಳನ್ನು ನೋಡಿಕೊಂಡು ಶಾಲೆಗೆ ಹೋದ ಬಾಲ್ಯದ ದಿನಗಳನ್ನು ಮರೆಯಬಾರದು. ಭತ್ತದ ತೆನೆಗಳನ್ನು ಹೆಕ್ಕಿ ಅದರಿಂದ ದೀಪಾವಳಿ ಪಟಾಕಿ ತಂದ ನೆನಪು ಮರೆಯಾಗದು. ಈಗ ಉತ್ತಮ ಸಂಪಾದನೆ ಇರುವಾಗ ಅನಾವಶ್ಯಕ ಖರ್ಚುಗಳಿಗೆ ವ್ಯಯಿಸಿ ಆರೋಗ್ಯ ಕಳೆದುಕೊಳ್ಳುವುದಕ್ಕಿಂತ ಕೃಷಿ ಚಟುವಟಿಕೆಗಳಿಗೆ ವಿನಿಯೋಗಿಸಿ. ಭೂಮಿಯ ಫಲವತ್ತತೆ ಹೆಚ್ಚಿಸಲು ಅಧಿಕ ಒತ್ತನ್ನು ನೀಡಬೇಕು. ಕೃಷಿ ಬಹುತೇಕರಿಗೆ ಜೀವನದ ಆದಾಯದ ಮೂಲವಾಗಿದ್ದು ಸದಾ ನಮ್ಮನ್ನು ಕ್ರೀಯಾಶೀಲ ಚಟುವಟಿಕೆಯತ್ತ ತೋಡಗುವಂತೆ ಮಾಡುತ್ತದೆ.ಇದರಿಂದ ಉತ್ತಮ ಆರೋಗ್ಯ, ನೆಮ್ಮದಿ ಪಡೆಯಬಹುದು. ಭವಿಷ್ಯ ಇರುವುದೇ ಭೂಮಿ, ಕೃಷಿಯಲ್ಲಿ.
-ಎಂ. ಮನೋಹರ ಶೆಟ್ಟಿ
ನ್ಯಾಯವಾದಿ ಹಾಗೂ ಕೃಷಿಕ -ಪ್ರವೀಣ್ ಮುದ್ದೂರು