Advertisement
ಲಂಗರು ಬಿಚ್ಚಿದ ದೋಣಿ ಕಣ್ಣಿಂದ ಕಣ್ಮರೆಯಾದ ನಂತರ ಅವರು ಹಿಂತಿರುಗಿದ ಮೇಲೆಯೇ ಅವರು ಬದುಕಿರುವರೆಂದು ಖಾತರಿಯಾಗುವುದು. ಹಾಗೆ ಮರಳಿ ಬಂದವರು ಅಲ್ಲಿನ ಸುದ್ದಿಗಳನ್ನು ಹೇಳಿದ ಮೇಲೆಯೇ ಲೋಕದ ವಿದ್ಯಮಾನಗಳು ಗೊತ್ತಾಗುವುದು. ಪೋರ್ಚುಗೀಸರನ್ನು ಸೋಲಿಸಿದ ಬ್ರಿಟಿಷರು ಈಗ ನಾಡನ್ನಾಳುತ್ತಿರುವ ದೊರೆಗಳೆಂದೂ, ಬ್ರಿಟಿಷರನ್ನು ಮಣಿಸಿದ ಮೈಸೂರಿನ ಟಿಪ್ಪುಸುಲ್ತಾನನು ಮಂಗಳೂರಿನ ಬಂದರನ್ನು ವಶಪಡಿಸಿಕೊಂಡು ತನ್ನ ಧ್ವಜವನ್ನು ಹಾರಿಸಿರುವೆನೆಂದೂ, ಅವನನ್ನು ಕತ್ತರಿಸಿಕೊಂದ ಬ್ರಿಟಿಷರು ಮತ್ತೆ ಅರಸರಾಗಿರುವೆಂದೂ ಅವರಿಗೂ ಕಣ್ಣೂರಿನ ಅರಕ್ಕಲ್ ರಾಣಿಗೂ ಒಡಂಬಡಿಕೆಯಾಗಿರುವುದರಿಂದ ತಾವೀಗ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿರುವವೆಂದೂ, ಅಂಥ ಬ್ರಿಟಿಷರನ್ನೂ ಮಣಿಸಿದ ಮಹಾತ್ಮಾ ಗಾಂಧಿಯಿಂದಾಗಿ ತಾವೀಗ ಸ್ವತಂತ್ರ ಭಾರತದ ಭಾಗವಾಗಿರುವವೆಂದೂ ಅವರಿಗೆ ಗೊತ್ತಾಗುವುದು ಅವೆಲ್ಲ ನಡೆದು ಬಹಳ ಕಾಲದ ನಂತರ ದ್ವೀಪದಿಂದ ಹೊರಟ ಹಾಯಿದೋಣಿಗಳು ಆ ಸುದ್ದಿಯನ್ನು ಹೊತ್ತುತಂದ ಮೇಲೆಯೇ.
Related Articles
Advertisement
ನಾನು ನಿನ್ನ ರಾಜ ಮಾತನಾಡುತ್ತಿರುವುದು. ಸಾವಿರದ ಮುನ್ನೂರು ವರ್ಷಗಳ ಹಿಂದೆ ನಾನೂ ನಿನ್ನ ಹಾಗೆಯೇ ಕಟ್ಟಿಕೊಂಡವಳ ಮಗ್ಗುಲಲ್ಲಿ ಮಲಗಿಕೊಂಡಿದ್ದೆ. ಅವಳನ್ನು ನಂಬಿಕೊಂಡಿದ್ದೇ ಮೋಸವಾಗಿತ್ತು. ನಿದ್ದೆಯಿಲ್ಲದೆ ಹೊರಳಾಡುತ್ತಿದ್ದೆ. ಅದಕ್ಕೆ ಸರಿಯಾಗಿ ಆಕಾಶದಲ್ಲಿ ಪಶ್ಚಿಮ ದಿಕ್ಕಿನಲ್ಲಿ ನಕ್ಷತ್ರವೊಂದು ತುಂಡಾಗಿ ಬೀಳುವುದನ್ನು ಕಂಡೆ. ಮಲಗಿದ್ದಲ್ಲಿಂದ ಎದ್ದೆ. ನಿಂತಿದ್ದ ಹಾಯಿಹಡಗನ್ನು ಹತ್ತಿದೆ. ಆ ಹಡಗು ಪಶ್ಚಿಮ ದಿಕ್ಕಿಗೆ ಹೊರಟಿತು. ಅದು ಹಲವು ತಿಂಗಳುಗಳ ಬಳಿಕ ನನ್ನನ್ನು ಮಕ್ಕಾ ಪಟ್ಟಣಕ್ಕೆ ತಲುಪಿಸಿತು. ಅಲ್ಲಿ ಪ್ರವಾದಿಗಳು ಇನ್ನೂ ಬದುಕಿದ್ದರು. ಕಂಡವನೇ ಹಾರಿ ಹೋಗಿ ಅವರ ಪಾದಗಳನ್ನು ಚುಂಬಿಸಿದೆ. ಅವರಿಗೆ ಅರ್ಪಿಸಲು ನನ್ನ ಬಳಿ ಶುಂಠಿಯ ಉಪ್ಪಿನಕಾಯಿ ತುಂಬಿದ್ದ ಒಂದು ಭರಣಿ ಮಾತ್ರ ಇತ್ತು. ಅದನ್ನು ಅವರಿಗೆ ಅರ್ಪಿಸಿದೆ. ಅವರು ಅದನ್ನು ಆನಂದದಿಂದ ಸೇವಿಸಿದರು. ತಮ್ಮ ಅನುಯಾಯಿಗಳಿಗೂ ಹಂಚಿದರು. ನನ್ನನ್ನು ಅಪ್ಪಿಕೊಂಡು ನನಗೆ ಹೊಸ ಜನ್ಮ ನೀಡಿದರು. “ನಿನ್ನ ರಾಜ್ಯಕ್ಕೆ ತೆರಳಿ ಸತ್ಯವನ್ನೂ ವಿಶ್ವಾಸವನ್ನೂ ಅವರಲ್ಲಿ ಹರಡು’ ಎಂದು ನನ್ನನ್ನು ವಾಪಾಸು ಹಡಗು ಹತ್ತಿಸಿದರು. ತಮ್ಮ ಕೆಲವು ಶಿಷ್ಯಂದಿರನ್ನೂ ಆ ಹಡಗಿನಲ್ಲಿ ಜೊತೆಗೆ ಕಳಿಸಿದರು. ಆದರೆ, ಪಡೆದವನಿಗೆ ನಾನು ನನ್ನ ರಾಜ್ಯಕ್ಕೆ ಮರಳಿ ಬರುವುದು ಇಷ್ಟವಿರಲಿಲ್ಲ ಅನಿಸುತ್ತದೆ. “ವ್ಯಾಧಿಯೊಂದಕ್ಕೆ ಸಿಲುಕಿ ನಾನು ಮಾರ್ಗ ಮಧ್ಯೆಯೇ ಅಸು ನೀಗಿದೆ. ಅಲ್ಲೇ ನನ್ನನ್ನು ಮಣ್ಣು ಮಾಡಿದರು. ನಾನು ಈಗ ಅಲ್ಲೇ ಇರುವೆ. ಆದರೂ ನನಗೆ ಸಮಾಧಾನವಿಲ್ಲ. ಹಾಗಾಗಿ ನಿನ್ನ ಹಾಗಿರುವ ಮನುಷ್ಯರ ಕನಸಿನಲ್ಲಿ ಬಂದು ಎಬ್ಬಿಸುತ್ತಿರುವೆ. ನೀನೂ ಎದ್ದು ಪಶ್ಚಿಮ ದಿಕ್ಕಿಗೆ ಹೊರಡು. ಸಾಕು ನಿನ್ನ ವ್ಯವಹಾರಗಳು’ ಎಂದಿತಂತೆ ಆ ಧ್ವನಿ.
ಇವರಿಗೆ ಒಂದು ಕ್ಷಣ ಏನೂ ಗೊತ್ತಾಗಲಿಲ್ಲ. ಅವರಾದರೆ ಮಹಾರಾಜರು. ಕನಸಿನಲ್ಲಿ ನಕ್ಷತ್ರಗಳು ತುಂಡಾಗುವುದೂ, ಸೂರ್ಯಚಂದ್ರರು ಒಂದಾಗುವುದೂ ಕಾಣಿಸುತ್ತದೆ. ನಾನಾದರೋ ಆಡುಗಳನ್ನು ಕತ್ತರಿಸಿ, ಮಾಂಸವನ್ನು ಮಾರಿ ಬದುಕುವ ಮನುಷ್ಯ ಜೀವಿ. ಒಣ ಮೀನಿನ ತಲೆಯೂ ನನ್ನ ಕನಸಿನಲ್ಲಿ ಕಾಣಿಸುವುದಿಲ್ಲ. ಅವರಿಗಾದರೆ ಮೋಸ ಮಾಡಲು ಮಹಾರಾಣಿಯೂ ಇದ್ದಳು. ನನ್ನ ಮೊದಲಿನವಳೂ, ಈಗಿನವಳೂ ಅಂತಹ ಮೋಸ ಮಾಡುವಂತಹ ಸುಂದರಿಯರೂ ಅಲ್ಲ. ಆದರೂ ಆ ಮಹಾರಾಜ ನನ್ನ ಕನಸಿನಲ್ಲಿ ಬಂದು ಏಕೆ ಎಬ್ಬಿಸಬೇಕು? ಹಾಗಾದರೆ, ಇದರಲ್ಲೇನೋ ಕರಾಮತ್ತಿರಬೇಕು. ಎಂದು ನಿದ್ದೆಯಿಂದ ಎದ್ದು ಕುಳಿತರಂತೆ. ತೀರಿ ಹೋಗಿ ಸಾವಿರದ ಮುನ್ನೂರು ವರ್ಷವಾದರೂ ಚೇರಮಾನ್ ಮಹಾರಾಜ ಸಯ್ಯದ್ ತಾಜುದ್ದೀನ್ ಎಂಬ ಹೆಸರನ್ನು ಪಡೆದುಕೊಂಡು ಓಮಾನ್ ದೇಶದಲ್ಲಿ ಮಲಗಿದ್ದರೂ ತನ್ನನ್ನು ಹುಡುಕಿಕೊಂಡು ಬಂದು ದ್ವೀಪದ ಪಾಲಾದ ದ್ವೀಪವಾಸಿಗಳಲ್ಲಿ ಆಯ್ದ ಕೆಲವರನ್ನು ಹೀಗೆ ಆಗಾಗ ನಿದ್ದೆಯಿಂದ ತಿವಿದು ಎಬ್ಬಿಸಿ ಮಕ್ಕಾದ ಕಡೆಗೆ ಪಯಣಿಸಲು ಹೇಳಿ ಮಾಯವಾಗುವುದು ನಡೆದೇ ಇದೆಯಂತೆ. ಇಂತಹ ಹಲವು ಕಥೆಗಳನ್ನು ಕೇಳಿದ್ದ ಅವರಿಗೆ ಈ ಬಾರಿ ಆ ರಾಜನು ತನ್ನನ್ನೇ ಎಬ್ಬಿಸಿದ್ದರ ಹಿಂದಿನ ಮರ್ಮವೇನು ಎಂದು ಗೊತ್ತಾಗಲಿಲ್ಲವಂತೆ. ಅದಕ್ಕಾಗಿ ಇರಬಹುದೇ ಎಂಬ ಒಂದು ಸಂಶಯವೂ ಬಂತಂತೆ. ಛೆ, ಇಲ್ಲ. ಅದು ಇರಲಾರದು ಎಂದೂ ಅನಿಸಿತಂತೆ.
“ಏನದು ಸಂಶಯ?’ ಎಂದು ನಾ ಕೇಳಿದ್ದೆ. ಮೊದಲನೆಯ ಪರಿಚಯವಾಗಿದ್ದ ರಿಂದ ಅವರ ಮೊದಲನೆಯ ಮತ್ತು ಎರಡನೆಯ ವಿವಾಹಗಳ ಪೂರ್ತಿ ಕಥೆಯೂ ಗೊತ್ತಿರಲಿಲ್ಲ. ಆನಂತರದ ಮಾತುಕತೆಯಲ್ಲಿ ಮೊದಲನೆಯವಳು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವಳೆಂದೂ, ಎರಡನೆಯವಳು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುವವಳೆಂದೂ ಅವರು ವಿವರಿಸಿದ್ದನ್ನು ಈ ಮೊದಲು ಹೇಳಿದ್ದನಷ್ಟೇ. ಆ ಮೊದಲನೆಯ ವಿವಾಹದಿಂದ ಹೊರನಡೆದ ಪಾಪ ಪ್ರಾಯಶ್ಚಿತ್ತಕ್ಕಾಗಿ ಸಾವಿರದ ಮುನ್ನೂರು ವರ್ಷಗಳ ಹಿಂದೆ ತೀರಿಹೋದ ಮಹಾರಾಜನು ತನ್ನನ್ನು ಮಕ್ಕಾಗೆ ಹೊರಡಲು ತಿವಿದು ಎಬ್ಬಿಸಿರಬಹುದೇ ಎಂಬ ಅನುಮಾನ ಬಂತಂತೆ ಇವರಿಗೆ. ಆದರೆ, ಅದರಲ್ಲೇನೂ ಅವರ ತಪ್ಪಿರಲಿಲ್ಲ. ಹಾಗೆ ನಿಜವಾಗಿ ನೋಡಿದರೆ ಮೋಸವಾಗಿರುವುದು ಮೊದಲ ಹೆಂಡತಿಗಲ್ಲ. ಮೋಸ ಹೋಗಿರುವುದು ನಾನು ಎಂಬುದು ಇವರ ಅನಿಸಿಕೆ.
ಎರಡನೆಯ ಬಾರಿ ಆ ಮಹಾರಾಜ ಕನಸಿನಲ್ಲಿ ಬಂದು ತಿವಿದು ಎಬ್ಬಿಸಿದಾಗ ಇವರು ಇದನ್ನೇ ಹೇಳಿದರಂತೆ. “ಮಹಾರಾಜಾ ಅದರಲ್ಲಿ ನನ್ನದೇನೂ ತಪ್ಪಿಲ್ಲ. ಆ ಮೋಸಗಾರನ ವಂಚನೆಗೆ ಬಲಿಯಾಗಿ ಮೋಸ ಹೋದವನು ನಾನು. ಅವಳದೂ ತಪ್ಪಿಲ್ಲ. ಏನೂ ಅರಿಯದ ಬಾಯಿ ಬಾರದ ಹೆಂಗಸು ಅವಳು. ನನ್ನನ್ನು ನಂಬಿ ಮದುವೆಯಾದಳು. ಆದರೆ, ಬಾಯಿ ಬಾರದ ಹೆಂಗಸನ್ನು ಮೋಸದಿಂದ ನನಗೆ ಕಟ್ಟಿದವನಿಗೆ ಶಿಕ್ಷೆಯಾಗಬೇಕಿತ್ತು. ಅವನಿಗೆ ಶಿಕ್ಷೆಯೂ ಆಗಿ ದೇಶಾಂತರ ಹೊರಟು ಹೋದನು. ಆದರೆ, ಮಹಾರಾಜನಾದ ನೀನು ಪ್ರಾಯಶ್ಚಿತ್ತಕ್ಕಾಗಿ ಮಕ್ಕಾಗೆ ತೆರಳು’ ಎಂದು ಆಜ್ಜಾಪಿಸುತ್ತಿರುವೆ. ಏನಿದರ ಮರ್ಮ ಎಂದು ಕನಸಲ್ಲೇ ಮಹಾರಾಜನ ಜೊತೆ ವಾಗ್ವಾದಕ್ಕೆ ಇಳಿದರಂತೆ.
“ಮೊದಲು ನೀನು ನಾನು ಹೇಳಿದ್ದನ್ನು ಮಾಡು. ಸರಿ-ತಪ್ಪುಗಳ ಲೆಕ್ಕಾಚಾರದ ಹೊಣೆಯನ್ನೂ ಪಡೆದವನಿಗೂ ಅವನ ಪವಿತ್ರ ಪ್ರವಾದಿಗೂ ಬಿಟ್ಟು ನೀನು ಹೊರಡಲು ಸಿದ್ಧನಾಗು’ ಎಂದರಂತೆ. ಆವತ್ತಿನಿಂದ ಇವರು ಮಹಾರಾಜ ಕನಸಲ್ಲಿ ಬಂದಾಗಲೆಲ್ಲ ಎದ್ದು ತಮ್ಮ ಪೆಠಾರಿಯನ್ನು ರೆಡಿ ಮಾಡಿಕೊಂಡು ಮಕ್ಕಾಗೆ ಹೊರಟು ವಾಪಾಸಾಗುವ ದಾರಿಯಲ್ಲಿ ಓಮನ್ ದೇಶದ ಪ್ರಸಿದ್ಧ ಪಟ್ಟಣದಲ್ಲಿರುವ ಮಹಾರಾಜನ ಗೋರಿಯನ್ನೂ ಕಂಡು ಬರುತ್ತಾರೆ. ಪ್ರತಿವರ್ಷವೂ ಅದೇ ಪೆಠಾರಿ. ಪೆಠಾರಿಯೊಳಗೆ ಅದೇ ಕೊಬ್ಬರಿಯ ಹೋಳುಗಳು ಮತ್ತು ದ್ವೀಪದ ಚಕ್ಕರೆ ಉಂಡೆ. ದಾರಿಯುದ್ದಕ್ಕೂ ಹಸಿದವರಿಗೆ ಅದನ್ನು ಹಂಚುತ್ತಾರೆ, ತಮಗೆ ಹಸಿವಾದಾಗ ನೀರು ಕುಡಿದು ಮಲಗುತ್ತಾರೆ. ದೇಶದೇಶಗಳ ವಿಮಾನ ನಿಲ್ದಾಣಗಳಲ್ಲೂ ಇವರ ಕಬ್ಬಿಣದ ಪೆಠಾರಿಗೆ ತೂಕದಿಂದಲೂ ಸುಂಕದಿಂದಲೂ ವಿನಾಯ್ತಿಯಂತೆ. ಏಕೆಂದರೆ, ಅದರೊಳಗಿರುವುದು ಇವರ ಸ್ವಂತ ಉಪಯೋಗಕ್ಕಲ್ಲ. ಬದಲಾಗಿ ಹಸಿದವರಿಗೆ ಹಂಚಲಿಕ್ಕೆ ಎಂಬುದು ಎಲ್ಲ ಸುಂಕದವರಿಗೂ ಗೊತ್ತಿದೆಯಂತೆ. ತೀರಿ ಹೋದ ಆ ಚೇರನ್ ಮಹಾರಾಜನೂ ನಾನಾ ವೇಷಗಳಲ್ಲಿ ಇವರನ್ನು ಹಿಂಬಾಲಿಸಿ ಅಲ್ಲಲ್ಲಿ ಕಾಣಿಸಿಕೊಂಡು ವಿಚಾರಿಸಿಕೊಂಡು ಇದ್ದಕ್ಕಿದ್ದಂತೆ ಮರೆಯಾಗುವರಂತೆ. ಹಾಗಾಗಿ, ಇವರಿಗೆ ಯಾವ ಅಪರಿಚಿತರನ್ನು ಕಂಡರೂ ಅಸಾಧ್ಯ ಗೌರವ ಮತ್ತು ಅಷ್ಟೇ ಭಯ ಮತ್ತು ಸಲುಗೆ. ನನ್ನ ಬಗ್ಗೆಯೂ ಇವನೂ ಮಾರುವೇಷದ ಮಹಾರಾಜನಿರಬಹುದೇ ಎಂಬ ಸಂಶಯ ಅವರಿಗೆ! “ಒಮ್ಮೊಮ್ಮೆ ನನ್ನ ಎದುರು ಕುಳಿತಿರುವ ನೀನೂ ಮಾರುವೇಷದಲ್ಲಿರುವ ಮಹಾರಾಜನಿರಬಹುದೇ ಎಂಬ ಸಂಶಯ ನನಗೆ’ ಎಂದು ನಕ್ಕಿದ್ದರು.
ಅಬ್ದುಲ್ ರಶೀದ್