Advertisement

ಕವಿ ಕಣವಿಗೆ ಗೌರವ ಡಾಕ್ಟರೇಟ್‌ ಪ್ರದಾನ

11:48 AM Sep 29, 2020 | sudhir |

ಧಾರವಾಡ: ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿಯನ್ನು ಹಿರಿಯ ಕವಿ ಚೆನ್ನವೀರ ಕಣವಿ ಅವರಿಗೆ ನಗರದ ಅವರ ಸ್ವಗೃಹದಲ್ಲಿ ಸೋಮವಾರ ಪ್ರದಾನ ಮಾಡಲಾಯಿತು.

Advertisement

ಪದವಿ ಸ್ವೀಕರಿಸಿ ಮಾತನಾಡಿದ ಕವಿ ಕಣವಿ, ಕೇಂದ್ರೀಯ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್‌ ಪದವಿಯನ್ನು ಸಮಸ್ತ ಸಹೃದಯಿ ಕನ್ನಡಿಗರಿಗೆ ಸಮರ್ಪಣೆ ಮಾಡಿದ್ದೇನೆ. ಈ ಪದವಿಯು ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವದಷ್ಟೇ ಸಮಾನವಾಗಿದೆ ಎಂದರು. ಈ ವೇಳೆ ವಿನಯ ಪೂರ್ವಕವಾಗಿ ಕೃತಜ್ಞತೆ ವ್ಯಕ್ತಪಡಿಸಿ, ಅಭಿವಂದನೆ
ಎಂದರೆ ಗೌರವ ಪೂರ್ವಕ ನಮಸ್ಕಾರ ಎಂಬ ಕವಿತೆ ವಾಚಿಸಿದರು.

ವಿವಿ ಕುಲಪತಿ ಪ್ರೋ|ಎಚ್‌.ಎಮ್‌. ಮಹೇಶ್ವರಯ್ಯ ಮಾತನಾಡಿ, ನಾಡಿನ ಶ್ರೇಷ್ಠ ಕವಿಗಳಲ್ಲಿ ಕಣವಿ ಒಬ್ಬರಾಗಿದ್ದಾರೆ. ಕಳೆದ ಏಳು
ದಶಕಗಳಿಂದ ಕನ್ನಡ ಕಾವ್ಯದ ವಿವಿಧ ಘಟ್ಟಗಳ ಮೂಲಕ ಚಲಿಸಿ ಅನನ್ಯವಾದ ಕಾವ್ಯ ಶೈಲಿಯ ಮೂಲಕ ಕಾವ್ಯಾಸಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ಸಮಗ್ರ ಸಾಹಿತ್ಯವು ಇಂಗ್ಲಿಷಿಗೆ ಅನುವಾದವಾದರೆ ನೋಬೆಲ್‌ ಪುರಸ್ಕಾರಕ್ಕೆ ಯೋಗ್ಯವಾದ ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದರು.

ನವಿರಾದ ಭಾಷೆ, ರೂಪಕಗಳ ಮೂಲಕ ಕಣವಿ ಅವರ ಕಾವ್ಯಸತ್ವ, ಸೌಂದರ್ಯ ಹಾಗೂ ಸದುವಿನಯದ ಹಲವು ಬಣ್ಣಗಳಲ್ಲಿ ಅರಳಿಕೊಂಡು ಕನ್ನಡ ಕಾವ್ಯ ಲೋಕದ ಶ್ರೀಮಂತಿಕೆ ಕಾರಣವಾಗಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು
ಇದುವರೆಗೆ ದೇಶದ 13 ಜನ ಸಾಧಕರಿಗೆ ಗೌರವ ಡಾಕ್ಟರೇಟ್‌ ಪುರಸ್ಕಾರ ನೀಡಿ ಗೌರವಿಸಿದೆ. ಈ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯವು ಈ ಬಾರಿ ನೀಡಿರುವ 5 ಜನ ಗೌರವ ಡಾಕ್ಟರೇಟ್‌ ಪುರಸ್ಕೃತರಲ್ಲಿ ಕನ್ನಡಿಗರಿಗೆ ಹೆಚ್ಚು ಮನ್ನಣೆಯನ್ನು
ರಾಷ್ಟ್ರಪತಿಗಳು ನೀಡಿರುವುದು ಅಭಿಮಾನದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ, ವಿದ್ವಾಂಸ ಪ್ರೋ| ಜಿ.ಎಸ್‌.ಅಮೂರ ಅವರಿಗೆ ನುಡಿನಮನ ಸಲ್ಲಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಿರಿಯ ಸಾಹಿತಿ ಡಾ|ಗುರುಲಿಂಗ ಕಾಪಸೆ, ಡಾ|ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ|ಡಿ.ಎಮ್‌. ಹಿರೇಮಠ, ಪ್ರೋ|ಎಸ್‌.ಎಮ್‌.ಶಿವಪ್ರಸಾದ, ರಾಜೇಶ್ವರಿ ಮಹೇಶ್ವರಯ್ಯ, ನಿಂಗಣ್ಣ ಕುಂಟಿ,
ಬಿ.ಎಸ್‌. ಶಿರೋಳ, ವಿಜಯಕುಮಾರ್‌ ಗಿಡ್ನವರ ಮತ್ತಿತರ ಗಣ್ಯರು ಇದ್ದರು.

Advertisement

ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕ ಡಾ|ಬಿ. ಆರ್‌.ಕೆರೂರ ಸ್ವಾಗತಿಸಿದರು. ಮಾನವಿಕ ಮತ್ತು ಭಾಷಾ ನಿಕಾಯದ ಡೀನ್‌ ಪ್ರೋ|ಬಸವರಾಜ ಡೋಣೂರ ಬಿನ್ನವತ್ತಳೆ ಮಂಡಿಸಿದರು. ಕುಲಸಚಿವ
ಪ್ರೋ|ಮುಷ್ತಾಕ್‌ ಅಹ್ಮದ್‌ ಪಟೇಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next