ಚನ್ನರಾಯಪಟ್ಟಣ/ಶ್ರವಣಬೆಳಗೊಳ: ವಿಶ್ವಕ್ಕೆ ಶಾಂತಿ ಸಂದೇಶ ಸಾರುವ 58.8ಅಡಿ ಎತ್ತರದ ಏಕಶಿಲಾ ಮೂರ್ತಿ ಮಂದಸ್ಮಿತ ಭಗವಾನ್ ಬಾಹುಬಲಿ ನೆಲೆಸಿ ರುವ ನಾಡು ಜೈನರ ಬೀಡಾಗಿರುವ ಶ್ರವಣಬೆಳಗೊಳ ದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಬಣಗೊಂಡಿದ್ದು , ಇದನ್ನು ಬಗೆಹರಿಸುವಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವಿಫಲವಾಗಿದೆ.
ಯಾತ್ರಿಗಳಿಗೆ ಕಸದ ದರ್ಶನ: ಶ್ರೀಕ್ಷೇತ್ರದಲ್ಲಿನ ಚಿಕ್ಕಬೆಪ್ಪಲಿನಲ್ಲಿ ಗ್ರಾಮದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ, ಕಸದ ಡಂಪಿಂಗ್ ಯಾರ್ಡ್ ಮಾಡಿದ್ದಾರೆ. ಮಟ್ಟನವಿಲೆ ರಾಷ್ಟ್ರೀಯ ಹೆದ್ದಾರಿಯಿಂದ ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತರು ಗೊಮ್ಮಟನ ದರ್ಶನಕ್ಕೆ ಮೊದಲು ಗ್ರಾಮದ ಕಸವನ್ನು ದರ್ಶನ ಮಾಡುವ ಪರಿಸ್ಥಿತಿ ಒದಗಿ ಬಂದಿದೆ. ಐತಿಹಾಸಿಕ ಪ್ರವಾಸಿ ತಾಣದಲ್ಲಿ ಪರಿಸರ ಮಾಲಿನ್ಯ ಆಗುತ್ತಿದ್ದು ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸುತ್ತಿಲ್ಲ.
ಕಾನೂನು ಪಾಲನೆ ಆಗುತ್ತಿಲ್ಲ: ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿದರೆ ಕಾನೂನು ಕ್ರಮ ಕೈಗೊಳ್ಳಬೇಕಿರುವ ಗ್ರಾಮ ಪಂಚಾಯಿತಿಯೇ ರಸ್ತೆ ಪಕ್ಕದಲ್ಲಿ ಅದು ಬೆಟ್ಟದ ಬುಡದಲ್ಲಿ ಕಸ ವಿಲೇವಾರಿ ಮಾಡುತ್ತಿರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಗ್ರಾಮದ ಸಂಗ್ರಹಿಸಿ ಕಸವನ್ನು ಸುರಿಯುವ ಸಿಬ್ಬಂದಿ ಕಸಕ್ಕೆ ಬೆಂಕಿ ಹಾಕುವ ಮೂಲಕ ವಾಯು ಮಾಲಿನ್ಯ ವನ್ನೂ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕಿರುವವರೇ ಪರಿಸರ ಹಾಳು ಮಾಡುತ್ತಿದ್ದಾರೆ.
ನಿಯಮವೇನು? ವಾಯುಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯಿದೆ 1981ರ ಸೆಕ್ಷನ್ 19(5)ರ ಅಡಿಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆಧರಿಸಿ, ರಾಜ್ಯ ಸರ್ಕಾರ ಕಸಕ್ಕೆ ಬೆಂಕಿ ಹಚ್ಚುವುದನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದೆ. ಅದರಂತೆ ಜನವಸತಿ ಪ್ರದೇಶ ಅಥವಾ ಬಯಲು ಜಾಗಗಳಲ್ಲಿ ಕಸಕ್ಕೆ ಬೆಂಕಿ ಇಡು ವಂತ್ತಿಲ್ಲ, ಸರ್ಕಾರದ ಅದೇಶ ಉಲ್ಲಂಘಿಸಿ ಕಸಕ್ಕೆ ಬೆಂಕಿ ಹಚ್ಚಿದರೆ 5 ಲಕ್ಷ ರೂ. ವರೆಗೆ ದಂಡ ತೆರಬೇಕು ಇಲ್ಲವೇ 5 ವರ್ಷ ಜೈಲು ಮತ್ತು ದಂಡ ಪಾವತಿ ಶಿಕ್ಷೆ ವಿಧಿಸ ಬಹುದು. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗೆ ಅರಿವಿದ್ದರೂ ನಿಯಮವನ್ನು ಗಾಳಿಗೆ ತೂರಿ ತಮ್ಮ ಸಿಬ್ಬಂದಿ ಮೂಲಕ ಬೆಂಕಿ ಹಾಕಿಸುತ್ತಿದ್ದಾರೆ.
ಸೊಳ್ಳೆ, ನೊಣದ ಕಾಟ: ಶ್ರವಣಬೆಳಗೊಳದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದೇ ಇರುವುದರಿಂದ ಸೊಳ್ಳೆ ಹಾಗೂ ನೊಣದ ಕಾಟ ಹೆಚ್ಚುತ್ತಿದ್ದರೂ ನಿಯಂತ್ರ ಮಾಡಲು ಮುಂದಾಗುತ್ತಿಲ್ಲ. ಪ್ರೇಕ್ಷಣೀಯ ಸ್ಥಳದಲ್ಲಿಯೇ ಈ ರೀತಿ ಆಗುತ್ತಿರು ವುದರಿಂದ ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕಸದ ವಾಸನೆಗೆ ಬೇಸತ್ತು ಹೋಗುತ್ತಿರುವುದಲ್ಲದೇ ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ನಿತ್ಯವೂ ಇಲ್ಲಿ ವಾಯು ಮಾಲಿನ್ಯ: ಕಠಿಣ ಕಾನೂನು ಇದ್ದರೂ ಇದರ ಭಯವಿಲ್ಲದೆ ಗ್ರಾಮ ಪಂಚಾಯತಿ ಕಸದ ರಾಶಿ ಕರಗಿಸಲು ಬೆಂಕಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇದು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳಲು ನಿತ್ಯವೂ ಗ್ರಾಮ ದಲ್ಲಿ ವಾಯು ಮಾಲಿನ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಸಾಂಕ್ರಾಮಿ ರೋಗದ ಭೀತಿ: ಗ್ರಾಮದಲ್ಲಿ ನಿತ್ಯ ಉತ್ಪತ್ತಿ ಆಗುವ ತ್ಯಾಜ್ಯದ ಜೊತೆ ಕೋಳಿ ಮಾಂಸದ ತ್ಯಾಜ್ಯವನ್ನು ಇಲ್ಲಿಗೆ ವಿಲೇವಾರಿ ಮಾಡುತ್ತಿರುವು ದರಿಂದ ಸೊಳ್ಳೆ, ನೊಣ ಹೆಚ್ಚಿದ್ದು, ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ.