Advertisement

Chennapttana: ನಾನು ಮೈತ್ರಿ ಅಭ್ಯರ್ಥಿ ಆಗಲಿ, ಬಿಡಲಿ, ಬಿಜೆಪಿ ಬಿಡಲ್ಲ: ಸಿ.ಪಿ.ಯೋಗೇಶ್ವರ್‌

11:33 PM Sep 02, 2024 | Team Udayavani |

ಚನ್ನಪಟ್ಟಣ: ಉಪ ಚುನಾವಣೆಯಲ್ಲಿ ತಮಗೆ ಟಿಕೆಟ್‌ ಸಿಗದಿದ್ದರೂ ಬಿಜೆಪಿ ತೊರೆಯುವುದಿಲ್ಲ ಎಂದು ಮೈತ್ರಿ ಟಿಕೆಟ್‌ ಪ್ರಬಲ ಆಕಾಂಕ್ಷಿ , ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ನುಡಿದರು.

Advertisement

ದೆಹಲಿ ಭೇಟಿ ಬಳಿಕ ಚನ್ನಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಹಿರಿಯ ಮುಖಂಡರ ಜೊತೆ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದೇನೆ. ನಮ್ಮ ಪಕ್ಷದ ನಾಯಕರು ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಕ್ಷೇತ್ರವನ್ನು ಜೆಡಿಎಸ್‌ ಉಳಿಸಿಕೊಂಡರೂ ಪರವಾಗಿಲ್ಲ. ನನ್ನ ಪಕ್ಷ ನಿಷ್ಠೆ ಅಚಲವಾಗಿದೆ ಎಂದು ತಿಳಿಸಿದರು.

ನಾನು ಪಕ್ಷದ ಜೊತೆ ನಿಲ್ಲಬೇಕು ಅಂತ ತೀರ್ಮಾನ ಮಾಡಿದ್ದೀನಿ. ನಾನು ಸ್ಪರ್ಧೆ ಮಾಡಬೇಕು ಅನ್ನೋದು ಕಾರ್ಯಕರ್ತರ ಒತ್ತಾಯ. ಇಷ್ಟು ವರ್ಷ ಪಕ್ಷದ ಜೊತೆ ಕೆಲಸ ಮಾಡಿದ್ದೀನಿ. ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ಹಾಗಾಗಿ, ಪಕ್ಷದ ಜೊತೆ ಹೋಗೋದು ಒಳ್ಳೆಯದು ಎಂಬುದು ಹಿತೈಷಿಗಳ ಭಾವನೆ ಎಂದು ತಿಳಿಸಿದರು.

ವರಿಷ್ಠರ ನಿರ್ಧಾರಕ್ಕೆ ಬದ್ಧ:
ಕೇಂದ್ರ ಸಚಿವ ಕುಮಾರಸ್ವಾಮಿ ಅವರೇ ಜೆಡಿಎಸ್‌ಗೆ ಟಿಕೆಟ್‌ ತಕೊಂಡ್ರೆ ನಾನು ಕೆಲಸ ಮಾಡ್ತೇನೆ. ನಾನು ಹಾಗೂ ನಮ್ಮ ಕಾರ್ಯಕರ್ತರು ಅವರ ಪರವಾಗಿ ಕೆಲಸ ಮಾಡ್ತೇವೆ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಮುಂದೆ ಅವಕಾಶ ಬರುತ್ತಿರುತ್ತೆ ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

ನಮ್ಮ ಹೈಕಮಾಂಡ್‌ ನಾಯಕರು ಹಲವು ಸಲಹೆ, ಸೂಚನೆ ನೀಡಿದ್ದಾರೆ. ಎರಡೂ ಪಕ್ಷದ ಮುಖಂಡರು ಒಟ್ಟಾಗಿ ಚುನಾವಣೆಗೆ ಹೋಗಬೇಕು. ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು. ಕ್ಷೇತ್ರದ ವಿದ್ಯಮಾನದ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದೇನೆ. ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿ ಆಗಲಿ, ಬೇಗ ತೀರ್ಮಾನ ಆದ್ರೆ ಒಳ್ಳೆಯದು. ಇದು ಉಪಚುನಾವಣೆ ಆಗಿರುವುದರಿಂದ ಇಡೀ ಸರ್ಕಾರವೇ ಬಂದು ಇಲ್ಲಿ ಚುನಾವಣೆ ಮಾಡುತ್ತದೆ. ಈ ನಿಟ್ಟಿನಲ್ಲಿ ಎರಡೂ ಪಕ್ಷದ ಹಿರಿಯರು ಆದಷ್ಟು ಬೇಗ ತೀರ್ಮಾನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

Advertisement

ಸರ್ಕಾರ ಏನೂ ಬೇಕಾದರೂ ಆಗಬಹುದು: ಸಿಪಿವೈ ಭವಿಷ್ಯ
ನೀನು ಆತುರ ಪಡಬೇಡ, ಪಕ್ಷ ಬಿಡಬೇಡ ಎಂದು ಹೈಕಮಾಂಡ್‌ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಹಾಗಾಗಿ, ಪಕ್ಷದ ಆದೇಶ ಮೀರಿ ಹೋಗಬಾರದು ಅಂತ ಅನಿಸುತ್ತಿದೆ. ಈಗಾಗಲೇ ಅತಂತ್ರದತ್ತ ಸಾಗಿರುವ ಕಾಂಗ್ರೆಸ್‌ ಸರ್ಕಾರ ಏನು ಬೇಕಾದರೂ ಆಗಬಹುದು. ಉಪಚುನಾವಣೆ ಬಳಿಕ ಸರ್ಕಾರ ಇರುತ್ತಾ, ಇರಲ್ವಾ ಅಂತ ಗೊತ್ತಿಲ್ಲ. ಸರ್ಕಾರ ಹಗರಣಗಳಲ್ಲಿ ನಲುಗುತ್ತಿದೆ. ಈ ಸಂದರ್ಭದಲ್ಲಿ ಈ ಚುನಾವಣೆ ಗೆಲ್ಲಬೇಕು ಎನ್ನುವ ಹಠ ಮೈತ್ರಿ ಪಕ್ಷಗಳಲ್ಲಿದೆ  ಎಂದು ಸಿ.ಪಿ.ಯೋಗೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.