Advertisement

ಗೋಮಾಳ ಪ್ರದೇಶ ಪ್ರಭಾವಿಗಳ ಪಾಲು

07:43 PM Oct 11, 2019 | Naveen |

ಚನ್ನಪಟ್ಟಣ: ಜಾನುವಾರುಗಳು ಮೇಯಲು ಮೀಸಲಿದ್ದ ಗೋಮಾಳ ಜಮೀನನ್ನು ಅಕ್ರಮ ಸಾಗುವಳಿ ಮಾಡಲು ಮುಂದಾಗಿದ್ದು, ರಾಜಕಾರಣಿಗಳಿಂದ ಆರಂಭಗೊಂಡು ಕಂದಾಯ
ಇಲಾಖೆ ನೌಕರರವರೆಗೂ ಗೋಮಾಳ ಜಮೀನನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Advertisement

ಇದು ರಾಜ್ಯದ ಭೂ ಹಗರಣ ಅಲ್ಲ. ಇದೇ ತಾಲೂಕಿನ ನೂರಾರು ಎಕರೆ ಗೋಮಾಳಗಳು ಪ್ರಭಾವಿಗಳ ಪಾಲಾಗಿರುವ ನೈಜ ಕತೆ. ತಾಲೂಕಿನ ವಿರುಪಾಕ್ಷಿಪುರದಿಂದ ವಿರುಪಸಂದ್ರವರೆಗೆ, ಮಲ್ಲಮಗೆರೆಯಿಂದ ಮೊಗೇನಹಳ್ಳಿಯವರೆಗೆ, ಅಬ್ಬೂರಿನಿಂದ ಹುಲವಾಡಿವರೆಗೆ, ದೊಡ್ಡನಹಳ್ಳಿಯಿಂದ ಭೂಹಳ್ಳಿವರೆಗೆ ಎಲ್ಲಿ ಹೋದರಲ್ಲಿ ಎಲ್ಲಾ ಗೋಮಾಳ ಪ್ರದೇಶಗಳು ಅಧಿಕಾರಿಗಳ ಅಕ್ರಮ ಖಾತೆಗೆ ಸೇರಿಹೋಗಿವೆ.

ವಿರುಪಾಕ್ಷಿಪುರ ಹೋಬಳಿಯ ಅರಳಾಳುಸಂದ್ರದ ಸರ್ವೇ ನಂ.12ರ ಗೋಮಾಳದಲ್ಲಿ 87 ಎಕರೆ, ಬ್ರಹ್ಮಣೀಪುರ, ಸರ್ವೇ ನಂ.39ರ ಗೋಮಾಳದಲ್ಲಿ 65 ಎಕರೆ, ಮಲ್ಲಮಗೆರೆಯ ಸರ್ವೇ ನಂ.4ರ 25 ಎಕರೆ, ದೊಡ್ಡನಹಳ್ಳಿಯ ಸರ್ವೇ ನಂ.4ರ 15 ಎಕರೆ, ಅಬ್ಬೂರಿನ ಸರ್ವೇ ನಂ.353ರ 20 ಎಕರೆ, ಹುಲುವಾಡಿಯ ಸರ್ವೇ ನಂ.128ರ 22 ಎಕರೆ, ಮುಕುಂದದ ಸರ್ವೇ ನಂ. 40ರ 25 ಎಕರೆ, ಹರೂರು ಮೊಗೇನಹಳ್ಳಿಯ ಸರ್ವೇ ನಂ.294ರ 20 ಎಕರೆ, ವಿರುಪಸಂದ್ರದ ಸರ್ವೇ ನಂ. 26ರ 28 ಎಕರೆ, ಭೂಹಳ್ಳಿಯ ಸರ್ವೇ ನಂ. 109ರ 15
ಎಕರೆ ಸರ್ಕಾರಿ ಭೂಮಿ ತಾಲೂಕಿನ ನೂರಾರು ಎಕರೆ ಭೂಗಳ್ಳ ಪ್ರಭಾವಿಗಳ ಪಾಲಾಗಿದೆ. ಭೂ ಖದೀಮರು ಸರಿ ಸುಮಾರು 350ಕ್ಕೂ ಹೆಚ್ಚು ಎಕರೆ ಗೋಮಾಳ ಪ್ರದೇಶವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದು, ಇದರ ಇಂದಿನ ಮೌಲ್ಯ ಕೋಟಿಗಳಿಗೆ ಮೀರಿದೆ.

ಕದ್ದವರೆಲ್ಲ ಭಾರೀ ಕುಳಗಳು: ಗೋಮಾಳಗಳು ಹಿಂದೆ ಹಸು, ಎಮ್ಮೆಗಳು ಸೇರಿದಂತೆ ಜಾನುವಾರುಗಳು ಮೇಯಲು ಮೀಸಲಿಟ್ಟ
ಪ್ರದೇಶವಾಗಿವೆ. ಕೆಲವೊಮ್ಮೆ ಯಾವುದೇ ಆಸ್ತಿಯನ್ನು ಹೊಂದಿರದವರು ಇಂತಹ ಪ್ರದೇಶಗಳಲ್ಲಿ ಸಾಗುವಳಿ ಮಾಡಿದರೆ, ಅಂತವರಿಗೆ ಪೂರ್ವಾಪರಗಳನ್ನು ಪರಿಶೀಲಿಸಿ, ಸಾಗುವಳಿ ಚೀಟಿ ನೀಡುವ ಪರಿಪಾಠವೂ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ಪ್ರತ್ಯೇಕ ಕಾನೂನು ಮತ್ತು ಭೂ ಮಂಜೂರಾತಿ ಸಮಿತಿಗಳು ಕೂಡಾ ಇದೆ.

ವಿಪರ್ಯಾಸವೆಂದರೆ ತಾಲೂಕಿನಲ್ಲಿ ಗೋಮಾಳ ನುಂಗಿರುವ ಅಧಿಕಾರಿಗಳು ಯಾರು ಜಮೀನು ಇಲ್ಲದವರಲ್ಲ. ಎಲ್ಲರೂ ಶ್ರೀಮಂತರು ಮತ್ತು ಜಮೀನುದಾರರೇ ಆಗಿದ್ದಾರೆ. ಮತ್ತು ವಿಶೇಷವೆಂದರೆ ಬಹುತೇಕರು ಆದಾಯ ತೆರಿಗೆ ಪಾವತಿದಾರರು, ಎಸಿ ಕಾರಿನಲ್ಲೇ ಓಡಾಡುವರು, ರಾಜಧಾನಿ ಬೆಂಗಳೂರು ಸೇರಿದಂತೆ ಚನ್ನಪಟ್ಟಣದ ಪ್ರತಿಷ್ಠಿತ ಬಡಾವಣೆಗಳಲ್ಲಿ ಭಾರೀ ಬಂಗಲೆಗಳಲ್ಲೇ ವಾಸ ಮಾಡುತ್ತಿದ್ದಾರೆ. ಅಲ್ಲದೆ, ಇವರಲ್ಲಿ ಬಹುತೇಕರಿಗೆ ಪಿತ್ರಾರ್ಜಿತವಾಗಿ ಇಲ್ಲವೇ ಸ್ವಯಾರ್ಜಿತವಾಗಿ ಹತ್ತಾರು ಎಕರೆ ಜಮೀನು ಹೊಂದಿದ್ದಾರೆ ಎನ್ನಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 99(3)ರಲ್ಲಿ
ಹೇಳಿರುವಂತೆ ಗೋಮಾಳದ ಭೂಮಿಗೆ ಇಷ್ಟೆಲ್ಲಾ ಸೌಲಭ್ಯಗಳನ್ನು ಹೊಂದಿರುವ ಇವರು ಫಲಾನುಭವಿಗಳಾಗಲು ಸಾಧ್ಯವಿಲ್ಲ.

Advertisement

ಕಾಟಾಚಾರಕ್ಕೆ ನೋಟಿಸ್‌: ಮಾಜಿ ಮಂತ್ರಿ, ಮಾಜಿ ಶಾಸಕ, ಮಾಜಿ ಶಾಸಕರ ಪುತ್ರ, ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು, ಆಯಾ ಗ್ರಾಮಗಳ ಪ್ರಭಾವಿ ರಾಜಕೀಯ ಪಕ್ಷಗಳ ಮುಖಂಡರು, ವ್ಯಾಪಾರಿಗಳು ಸಾಗುವಳಿ ನೆಪದಲ್ಲಿ ಗೋಮಾಳ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದು ಅಕ್ರಮ ಎಂಬುದು ಸ್ಥಳೀಯ ಆಡಳಿತಕ್ಕೆ ತಿಳಿದಿದೆ. ಆದರೆ, ಒತ್ತುವರಿಯಾಗಿರುವ ಗೋಮಾಳ ಪ್ರದೇಶವನ್ನು ಮತ್ತೆ ವಶಪಡಿಸಿಕೊಳ್ಳುವ ಕಟ್ಟು ನಿಟ್ಟಿನ ಕೆಲಸಕ್ಕೆ ಮುಂದಾಗಲಿಲ್ಲ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದೆ.

ನಾ ಕೊಡೆ ನೀ ಬಿಡೆ ಎಂಬಂತೆ ಕಾಟಾಚಾರಕ್ಕೆ ಗೋಮಾಳ ಪ್ರದೇಶ ಒತ್ತುವರಿದಾರರಿಗೆ ನೋಟಿಸ್‌ ನೀಡುವ ಸ್ಥಳೀಯ ಆಡಳಿತ, ಇದುವರೆಗೂ ಒಮ್ಮೆಯೂ ತೆರವು ಕಾರ್ಯಾಚರಣೆ ನಡೆಸಿಲ್ಲ. ಅಲ್ಲದೆ, ನೋಟಿಸ್‌ ಪಡೆದಾಗ ಒತ್ತುವರಿಯನ್ನು ತೆರವು ಮಾಡುವುದಾಗಿ ಹೇಳುವ ಒತ್ತುವರಿದಾರರು, ನಂತರ ತಮಗೂ ನೋಟಿಸ್‌ಗೂ ಸಂಬಂಧವೇ ಇಲ್ಲ ಎಂಬಂತೆ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ತಾಲೂಕಿನಲ್ಲಿ ನಡೆದಿರುವ ಗೋಮಾಳ ಪ್ರದೇಶ ಒತ್ತುವರಿ ಮಾಡಿಕೊಂಡವರನ್ನು ಗೋ ಬ್ಯಾಕ್‌ ಮಾಡುವ ಕೆಲಸ ಮಾಡಿ, ಕೋಟ್ಯಂತರ ರೂಪಾಯಿ ಮೌಲ್ಯದ ಗೋಮಾಳ  ದೇಶವನ್ನು ಉಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next