Advertisement

ಹಂತಹಂತವಾಗಿ ಬೆಳೆದು ಶತಮಾನ ಆಚರಿಸಿದ ಚೆನ್ನೈತ್ತೋಡಿ ಶಾಲೆ

10:52 PM Nov 17, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 2018ರಲ್ಲಿ ಶತಮಾನೋತ್ಸವ ಆಚರಿಸಿದೆ.

ಬಂಟ್ವಾಳ ಅಗ್ರಾರ್‌ ದಿ ಹೋಲಿ ಸೇವಿಯರ್‌ ಚರ್ಚ್‌ನ ವಂ| ರೆಜಿನಾಲ್ಡ್‌ ಪಿಂಟೋ ಸ್ಥಾಪಿಸಿದ ಶಾಲೆಗಳಲ್ಲೊಂದಾಗಿದ್ದು, ವಾಮದಪದವು ಪೇಟೆಯ ಹೃದಯಭಾಗದಲ್ಲಿ 1918ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡ ಶಾಲೆಯಲ್ಲಿ ಸುಮಾರು 135 ವಿದ್ಯಾರ್ಥಿಗಳಿದ್ದು, ವಾಮದಪದವು, ಸಿದ್ದಕಟ್ಟೆ, ವೇಣೂರು, ಮೂರ್ಜೆ, ಅಗ್ರಾರ್‌, ವಗ್ಗ ವ್ಯಾಪ್ತಿಯನ್ನೊಳಗೊಂಡಿತ್ತು. ಬೆಂಜಮಿನ್‌ ಗೊನ್ಸಾಲ್ವಿಸ್‌ ಪ್ರಥಮ ಮುಖ್ಯ ಶಿಕ್ಷಕರಾಗಿದ್ದರು. ಬಳಿಕ ಪೀಟರ್‌ ಡಿ’ಸೋಜಾ ಶಿಕ್ಷಕರಾಗಿದ್ದರು.

1935ರಲ್ಲಿ ಕೆಥೋಲಿಕ್‌ ಶಿಕ್ಷಣ ಮಂಡಳಿ ಆಡಳಿತಕ್ಕೆ ಒಳಪಟ್ಟಿತು. ಅನಂತರ ಮದ್ರಾಸ್‌ ಸರಕಾರಕ್ಕೆ ಬಿಟ್ಟು ಕೊಟ್ಟು ಬೋರ್ಡ್‌ ಪ್ರಾಥಮಿಕ ಶಾಲೆಯೆಂದು ಹೆಸರಾಯಿತು. ಆಗ ಪಾಸ್ಕಲ್‌ ಲೋಬೋ, ಶಿವಯ್ಯ ಅವರು ಶಿಕ್ಷಕರಾಗಿದ್ದರು. ಅನಂತರ ದಿ| ಸುಬ್ಬರಾವ್‌ ಕೊಂಬ್ರಬೈಲು ಅವರ ಕೊಡುಗೆಯಿಂದ ಅಭಿವೃದ್ಧಿ ಹೊಂದಿತು.

ಹಂತಹಂತವಾಗಿ ಅಭಿವೃದ್ಧಿ
ಅನಂತರ ದಾನಿಗಳು, ಶಿಕ್ಷಕರು, ವಿದ್ಯಾಭಿಮಾನಿಗಳ ಸಹಕಾರದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು. 1.24 ಎಕ್ರೆ ಭೂಮಿ ಹೊಂದಿದ ಶಾಲೆ ಹಂತಹಂತವಾಗಿ ಬೆಳೆದು ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ವ್ಯಕ್ತಿತ್ವದ ಸಮಗ್ರ ವಿಕಸನಕ್ಕೆ ಪೂರಕವಾದ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಅತ್ಯುತ್ತಮ ಶಾಲೆಯಾಗಿ ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಟ್ಟಿತು. ಪ್ರಸ್ತುತ ಉನ್ನತೀಕರಿಸಿದ ಮಾದರಿ ಶಾಲೆಯಾಗಿರುವ ಈ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸಹಿತ 1ರಿಂದ 8ನೇ ತರಗತಿಯವರೆಗೆ 283 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 9 ಮಂದಿ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಪ್ರಸಕ್ತ ವರ್ಷದಲ್ಲಿ ಕ್ರೀಡೆಯಲ್ಲಿ ತಾಲೂಕು ಮಟ್ಟದಲ್ಲಿ ಸಮಗ್ರ ಶಾಲಾ ಪ್ರಶಸ್ತಿ ಪಡೆದಿದೆ.

Advertisement

ಶತಮಾನ ಯೋಜನೆ
ಶತಮಾನೋತ್ಸವ ಸಮಿತಿಯ ಸಂಚಾಲಕ ನಾರಾಯಣ ಶೆಟ್ಟಿ ಪರಾರಿ ನೇತೃತ್ವದಲ್ಲಿ ಶತಮಾನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಭೋಜನ ಶಾಲೆಯನ್ನು ನಿರ್ಮಿಸಲಾಗಿದೆ. 25 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ, ಸುಸಜ್ಜಿತ ಆಟದ ಮೈದಾನ, ಶಾಲಾ ಆವರಣ ಗೋಡೆ ನಿರ್ಮಾಣ, ಶೌಚಾಲಯ, ವಾಚನಾಲಯ, ಕ್ರೀಡಾ ಸಾಮಗ್ರಿಗಳ ದಾಸ್ತಾನು ಕೊಠಡಿ ನಿರ್ಮಾಣ ಸಹಿತ ಗುಣಮಟ್ಟದ ಕಲಿಕೆಗೆ ಪೂರಕವಾದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಶತಮಾನೋತ್ಸವದ ಕೊಡುಗೆಯಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಸುಮಾರು 50 ಅಡಿಕೆ, ಬಾಳೆ ಗಿಡಗಳ ಕೈತೋಟವಿದೆ.

ಸಾಧಕ ಹಿರಿಯ ವಿದ್ಯಾರ್ಥಿಗಳು
ಇಲ್ಲಿನ ಹಳೆ ವಿದ್ಯಾರ್ಥಿಗಳಾದ ಡಾ| ಮುಸ್ತಾಫಾ, ಡಾ| ಜೇಮ್ಸ್‌ ವಾಲ್ಡರ್‌, ಡಾ| ವಾಸುದೇವ ಕಕೃಣ್ಣಾಯ, ಡಾ| ವೇಣುಗೋಪಾಲ್‌ ಭಟ್‌, ಡಾ| ಟಿ. ವರದರಾಜ ಪೈ, ಟಿ.ವಿ. ನಿರೂಪಕಿ ಸುಕನ್ಯಾ ಸಂಪತ್‌, ಯೋಧ ಸಂತೋಷ್‌ ಪ್ರಭು ಮತ್ತಿತರರು ವಿಶೇಷ ಸಾಧನೆ ಮಾಡಿದ್ದಾರೆ. ಇಲ್ಲಿನ ಶಿಕ್ಷಕರಾದ ರಮೇಶ್‌ ಬಾಯಾರು, ರಮೇಶ್‌ ನಾಯಕ್‌ ರಾಯಿ, ಮೋನಪ್ಪ ಕೆ. ಅವರು ತಮ್ಮ ಸಾಧನೆಗಾಗಿ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದಾರೆ.

ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳು ಅನುಷ್ಠಾನವಾದರೆ ಶಾಲೆ ಸುಸಜ್ಜಿತವಾಗುತ್ತದೆ. ಪ್ರಸ್ತುತ ಆವರಣ ಗೋಡೆ, ಛಾವಣಿ ದುರಸ್ತಿಯ ಅಗತ್ಯವಿದೆ.
-ವಿಜಯಶ್ರೀ, ಪ್ರಭಾರ ಮುಖ್ಯ ಶಿಕ್ಷಕಿ.

ನಾನು ಕಲಿತ ಶಾಲೆ ನನಗೆ ಬರಹ ಮಾತ್ರವಲ್ಲದೆ ಬದುಕನ್ನೂ ಕಲಿಸಿತ್ತು. ಸಹಬಾಳ್ವೆಯ ಜೀವನದ ದಾರಿ ತೋರಿಸಿತ್ತು. ಈ ಶಾಲೆ ಬಗ್ಗೆ ಹೆಮ್ಮೆ ಇದೆ. ಇದರ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳು, ಸರಕಾರ, ಊರವರು ಸಹಕಾರ ನೀಡಬೇಕು.
-ಡಾ| ವೇಣುಗೋಪಾಲ್‌ ಪಿ.ಎಸ್‌.,
(ಹಳೆವಿದ್ಯಾರ್ಥಿ)ಉಪನ್ಯಾಸಕರು,
ನಿಟ್ಟೆ ಎಂಜಿನಿಯರಿಂಗ್‌ ಕಾಲೇಜು.

-  ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next