ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ 2024 ಸರಣಿಗೆ ಶುಕ್ರವಾರ (ಮಾರ್ಚ್ 22) ಅದ್ದೂರಿ ಚಾಲನೆ ನೀಡಲಾಯಿತು. ಮೊದಲ ಮುಖಾಮುಖಿಯಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲ್ಲಲು 174 ರನ್ ಗಳ ಗುರಿ ಮುಂದಿಟ್ಟಿದೆ.
ಟಾಸ್ ಗೆದ್ದ ಆರ್ ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡರು. ಅಮೋಘ ಆಟವಾಡುತ್ತಿದ್ದ ಪ್ಲೆಸಿಸ್ ಅವರು ಮುಸ್ತಾಫಿಜುರ್ ಎಸೆದ ಚೆಂಡನ್ನು ರಚಿನ್ ರವೀಂದ್ರ ಕೈಗಿತ್ತು ನಿರ್ಗಮಿಸಿದರು. ಅವರು 23 ಎಸೆತಗಳಲ್ಲಿ 35 ರನ್ ಗಳಿಸಿದ್ದರು. ಆಬಳಿಕ ಬಂದ ರಜತ್ ಪಾಟಿದಾರ್ ಅವರನ್ನು ಮುಸ್ತಾಫಿಜುರ್ ಅವರು ಅದೇ ಓವರ್ ನಲ್ಲಿ ಔಟ್ ಮಾಡಿ ಶಾಕ್ ನೀಡಿದರು. ಮುಂದಿನ ಓವರ್ ನಲ್ಲಿ ಮ್ಯಾಕ್ಸ್ ವೆಲ್ ಅವರನ್ನು ಚಹಾರ್ ಅವರು ಶೂನ್ಯಕ್ಕೆ ಔಟ್ ಮಾಡಿದರು. ಎರಡೂ ಕ್ಯಾಚ್ ಗಳನ್ನೂ ವಿಕೆಟ್ ಕೀಪರ್ ಧೋನಿ ಅವರು ಪಡೆದರು.
ಬಳಿಕ ವಿರಾಟ್ ಕೊಹ್ಲಿ ಅವರು ದೊಡ್ಡ ಹೊಡೆತಕ್ಕೆ ಮುಂದಾದ ವೇಳೆ ಬೌಂಡರಿ ಲೈನ್ ನಲ್ಲಿದ್ದ ರಚಿನ್ ರವೀಂದ್ರ ಅಮೋಘ ಕ್ಯಾಚ್ ಹಿಡಿದರು.21 ರನ್ ಗಳಿಸಿ ಕೊಹ್ಲಿ ಔಟಾಗಿ ನಿರಾಶರಾದರು. ಮುಸ್ತಾಫಿಜುರ್ಕೊಹ್ಲಿ ಅವರ ವಿಕೆಟ್ ಪಡೆದರು. ಕ್ಯಾಮರಾನ್ ಗ್ರೀನ್ ಅವರು 18 ರನ್ ಗಳಿಸಿದ್ದ ವೇಳೆ ಮುಸ್ತಾಫಿಜುರ್ ಬೌಲ್ಡ್ ಮಾಡಿದರು.
78 ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ವೇಳೆ ಆರ್ ಸಿಬಿ ಗೆ ನೇರವಾದ ಭರವಸೆಯ ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್ ಆಕರ್ಷಕ ಜತೆಯಾಟವಾಡಿದರು. ಕಾರ್ತಿಕ್ 26ಎಸೆತಗಳಲ್ಲಿ 38 ರನ್ ಗಳಿಸಿ ಔಟಾಗದೆ ಉಳಿದರು. ಅಮೋಘ ಆಟವಾಡಿದ ರಾವತ್ 25 ಎಸೆತಗಳಲ್ಲಿ48 ರನ್ ಗಳಿಸಿ ಕೊನೆಯ ಎಸೆತದಲ್ಲಿ ರನ್ ಔಟಾದರು. 4 ಬೌಂಡರಿ ಮತ್ತು 3 ಆಕರ್ಷಕ ಸಿಕ್ಸರ್ ಸಿಡಿಸಿದರು. 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.
ಕೊನೆಯ 5 ಓವರ್‌ಗಳಲ್ಲಿ ಆರ್ ಸಿಬಿ 71 ರನ್ ಗಳಿಸಿದ್ದು ವಿಶೇಷವಾಗಿತ್ತು.