ಹೊಸದಿಲ್ಲಿ : 2013ರ ಐಪಿಎಲ್ ಋತುವಿನಲ್ಲಿ ಪ್ರಮುಖ ಅಧಿಕಾರಿಗಳಾದ ಗುರುನಾಥ್ ಮೈಯಪ್ಪನ್ ಮತ್ತು ರಾಜ್ ಕುಂದ್ರಾ ಅವರು ಕಾನೂನು ಬಾಹಿರ ಬೆಟ್ಟಿಂಗ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಕಾರಣ ಎರಡು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಿಷೇಧಾವಧಿ ಇದೀಗ ಮುಗಿದಿದೆ.
ಹಾಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಮತ್ತು ಬೆಂಬಲಿಗರು ಈ ಸಂತಸವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಕೂಟದ ಅತ್ಯಂತ ಶಕ್ತಿಶಾಲಿ ಮತ್ತು ಜನಪ್ರಿಯ ತಂಡ ಎನಿಸಿಕೊಂಡಿತ್ತು. ಧೋನಿ ಸಮರ್ಥ ನಾಯಕತ್ವದ ಫಲವಾಗಿ ಸಿಎಸ್‌ಕೆ ತಂಡ ವರ್ಷದಿಂದ ವರ್ಷಕ್ಕೆ ಐಪಿಎಲ್‌ನಲ್ಲಿ ಬೆಳೆಯುತ್ತಾ ಬಂದಿತ್ತು.
ಆದರೆ ಕಾನೂನು ಬಾಹಿರ ಬೆಟ್ಟಿಂಗ್ ಚಟುವಟಿಕೆಗಳಿಂದಾಗಿ ಸಿಎಸ್‌ಕೆ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2016 ಮತ್ತು 2017ರ ಐಪಿಎಲ್‌ನಿಂದ ನಿಷೇಧಿಸಲಾಗಿತ್ತು.
ಭಾರತದ ಮಾಜಿ ವರಿಷ್ಠ ನ್ಯಾಯಮೂರ್ತಿ ಆರ್ ಎಂ ಲೋಧಾ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿಯು ಸಿಎಸ್‌ಕೆ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ 2 ವರ್ಷಗಳ ನಿಷೇಧದ ಕಠಿನ ಶಿಕ್ಷೆಯನ್ನು ನೀಡಿತ್ತು. ನಿನ್ನೆ ಗುರುವಾರ ಈ ನಿಷೇಧಾವಧಿ ಮುಗಿದಿರುವುದನ್ನು ಸಿಎಸ್‌ಕೆ ಅಭಿಮಾನಿಗಳು ಸಂಭ್ರಮಿಸಿದರು.
ಇಂದು ಶುಕ್ರವಾರ ಸಿಎಸ್‌ಕೆ ಟ್ವಿಟರ್‌ನಲ್ಲಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿ, “ಸೂಪರ್ ಮಾರ್ನಿಂಗ್, ಲಯನ್ಸ್ ! ಕಾಯುವಿಕೆ ಕೊನೆಗೂ ಮುಗಿದಿದೆ. ಈಗ ಎದ್ದು ನಿಂತು ಮಿಂಚುವ ಸಮಯ ಬಂದಿದೆ’ ಎಂದು ಹೊಸ ಹುಮ್ಮಸ್ಸನ್ನು ವ್ಯಕ್ತಪಡಿಸಿದೆ.
ಐಪಿಎಲ್ 2010 ಮತ್ತು 2011ರಲ್ಲಿ ಸಿಎಸ್‌ಕೆ ಎರಡು ಬಾರಿ ಚಾಂಪ್ಯನ್‌ಶಿಪ್ ಗೆದ್ದಿದೆ.