ಚೆನ್ನೈ: ನಮಗೆ ಬ್ಯಾಂಕ್ ಖಾತೆಯಲ್ಲಿ ಯಾವುದೇ ಕಾರಣವಿಲ್ಲದೆ ಹಣ ಕಡಿತವಾದರೆ, ಒಮ್ಮೆ ನಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಗಾಬರಿಪಟ್ಟುಕೊಳ್ಳುತ್ತೇವೆ. ಆದರೆ ಅನಿರೀಕ್ಷಿತವಾಗಿ ನಮ್ಮ ಖಾತೆಗೆ ಹಣ ಬಂದರೆ ಏನಾಗಬಹುದು? ಅದು ಕೂಡ ಒಂದಲ್ಲ, ಎರಡಲ್ಲ, ಸಾವಿರಾರು ರೂಪಾಯಿ ಖಾತೆಗೆ ಬಂದು ಬಿದ್ದರೆ ಏನಾಗಬಹುದು?
ಅಂಥದ್ದೇ ಒಂದು ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಫಾರ್ಮಸಿ ಉದ್ಯೋಗಿಯೊಬ್ಬರ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಕಾಣಿಸಿಕೊಂಡಿದೆ.
ಚೆನ್ನೈನ ಫಾರ್ಮಸಿವೊಂದರಲ್ಲಿ ಕೆಲಸ ಮಾಡುತ್ತಿರುವ ಮುಹಮ್ಮದ್ ಇದ್ರಿಸ್ ಎನ್ನುವವರು ಶುಕ್ರವಾರ (ಅ.6 ರಂದು) ತನ್ನ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯಿಂದ 2,000 ರೂ.ಗಳನ್ನು ಸ್ನೇಹಿತರೊಬ್ಬರಿಗೆ ವರ್ಗಾವಣೆ ಮಾಡಿದ್ದಾರೆ.
ಹಣ ವರ್ಗಾವಣೆ ಮಾಡಿದ ಬಳಿಕ ತನ್ನ ಬ್ಯಾಂಕ್ ಬ್ಯಾಲೆನ್ಸ್ ನ್ನು ಚೆಕ್ ಮಾಡಿದ್ದಾರೆ. ಈ ವೇಳೆ ಅವರ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಇದ್ರಿಸ್ ದಂಗಾಗಿದ್ದಾರೆ. ಏಕೆಂದರೆ ಜೀವನವಿಡೀ ದುಡಿದರೂ ಅವರು ಅಷ್ಟು ಹಣ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಇದ್ರಿಸ್ ಅವರ ಖಾತೆಯಲ್ಲಿ 753 ಕೋಟಿ ರೂಪಾಯಿ ಬ್ಯಾಲೆನ್ಸ್ ತೋರಿಸಿದೆ.!
ಈ ಬಗ್ಗೆ ಬ್ಯಾಂಕ್ ಗೆ ಹೋಗಿ ಸಮಸ್ಯೆ ಕುರಿತು ವರದಿ ಮಾಡಿದ್ದಾರೆ. ಆ ಬಳಿಕ ಕೂಡಲೇ ಬ್ಯಾಂಕ್ ನವರು ಇದ್ರಿಸ್ ಅವರ ಖಾತೆಯನ್ನು ಸ್ಥಗಿತ ಮಾಡಿದ್ದಾರೆ.
ಚೆನ್ನೈನಲ್ಲಿ ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ರಾಜ್‌ಕುಮಾರ್ ಎಂಬ ಕ್ಯಾಬ್ ಚಾಲಕನ ಖಾತೆಯಲ್ಲಿ 9,000 ಕೋಟಿ ರೂ. ಬ್ಯಾಲೆನ್ಸ್ ತೋರಿಸಿತ್ತು.
ತಂಜಾವೂರಿನ ಗಣೇಶನ್ ಎಂಬ ವ್ಯಕ್ತಿ ತನ್ನ ಬ್ಯಾಂಕ್ ಖಾತೆಯಲ್ಲಿ 756 ಕೋಟಿ ರೂ.ಗಳನ್ನು ಕಂಡು ದಿಗ್ಭ್ರಮೆಗೊಂಡ ಮತ್ತೊಂದು ಘಟನೆ ಸಂಭವಿಸಿತ್ತು.