ಚೆನ್ನೈ : ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೊನೇ ಕ್ಷಣದಲ್ಲಿ ಇಂಡಿಗೋ ವಿಮಾನ ತಾಂತ್ರಿಕ ದೋಷಕ್ಕೆ ಒಳಗಾದರೂ, ಕೊನೆಗೂ ಲ್ಯಾಂಡಿಂಗ್ ಯಶಸ್ವಿಯಾಗುವುದರೊಂದಿಗೆ ಎಲ್ಲ ಪ್ರಯಾಣಿಕರು ಸಂಭಾವ್ಯ ದುರಂತದಿಂದ ಕೂದಲೆಳೆಯಲ್ಲಿ ಪಾರಾದರು.
6E 7123 ಸಂಖ್ಯೆಯ ಇಂಡಿಗೋ ಫ್ಲೈಟ್ ರಾಜಮುಂಡ್ರಿಯಿಂದ ಚೆನ್ನೈಗೆ ಬರುತ್ತಿತ್ತು. ವಿಮಾನ ಇನ್ನೇನು ಕೊನೇ ಕ್ಷಣದ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಇದೆ ಎನ್ನುವಾಗ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು.
ಒಡನೆಯೇ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ತುರ್ತು ಸ್ಥಿತಿಯನ್ನುಘೋಷಿಸಲಾಯಿತು. ಯಾವುದೇ ಬಗೆಯ ಅವಘಡವನ್ನು ಎದುರಿಸುವುದಕ್ಕೆ ಅಗತ್ಯವಿರುವ ಸಕಲ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಯಿತು.
ಹಾಗಿದ್ದರೂ ವಿಮಾನದ ಲ್ಯಾಂಡಿಂಗ್ ಯಾವುದೇ ಅವಘಡ ಇಲ್ಲದೆ ಯಶಸ್ವಿಯಾಗಿ ನಡೆಯಿತು. ವಿಮಾನ ದಲ್ಲಿದ್ದ ಪ್ರಯಾಣಿಕರೆಲ್ಲ ಸಂಭಾವ್ಯ ದುರಂತದಿಂದ ಕೂದಲೆಳೆಯಲ್ಲಿ ಪಾರಾದರು ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.