ಚೆನ್ನೈ: ಆಕ್ರಮಣಕಾರಿ ತಳಿಗಳಿಂದ ನಾಯಿಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುವುದರ ಕುರಿತು ಚರ್ಚೆಯ ನಡೆಯುತ್ತಿರುವ ಸಮಯದಲ್ಲೇ ಚೆನ್ನೈನ ಪಾರ್ಕೊಂದರಲ್ಲಿ ಐದು ವರ್ಷದ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ.
ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಯಿಗಳ ಮಾಲೀಕರನ್ನು ಬಂಧಿಸಿದ್ದಾರೆ. ನಾಯಿಗಳನ್ನು ನೋಡಿಕೊಳ್ಳುವ ಇನ್ನಿಬ್ಬರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.
ಚೆನ್ನೈನ ಥೌಸಂಡ್ ಲೈಟ್ಸ್ ಏರಿಯಾದ ಸಾರ್ವಜನಿಕ ಪಾರ್ಕ್ ನಲ್ಲಿ ರವಿವಾರ ರಾತ್ರಿ ಈ ಘಟನೆ ನಡೆದಿದೆ. ನಾಯಿಗಳ ಮಾಲೀಕರು ನಾಯಿಗಳನ್ನು ಅದರಷ್ಟಕ್ಕೆ ಬಿಟ್ಟಿದ್ದರು. ಮಗುವಿನ ಮೇಲೆ ನಾಯಿಗಳು ದಾಳಿ ನಡೆಸುತ್ತಿದ್ದರೂ ಮಾಲೀಕರು ನಾಯಿಗಳನ್ನು ನಿಯಂತ್ರಣ ಮಾಡಲು ಹೋಗಿರಲಿಲ್ಲ ಎಂದು ಆರೋಪಿಸಲಾಗಿದೆ. ಮಗುವಿನ ಹೆತ್ತವರು ಕೂಗಿಕೊಂಡ ಬಳಿಕ ಅವರು ಎಚ್ಚೆತ್ತುಕೊಂಡಿದ್ದಾರೆ.
ಮಗುವಿನ ತಂದೆ ಅದೇ ಪಾರ್ಕ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.
“ನಾವು ಮಾಲೀಕರನ್ನು ಬಂಧಿಸಿದ್ದೇವೆ ಮತ್ತು ನಾಯಿಗಳನ್ನು ನೋಡಿಕೊಳ್ಳುವ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶೇಖರ್ ದೇಶಮುಖ್ ತಿಳಿಸಿದ್ದಾರೆ. ಪಾರ್ಕ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಎರಡು ನಾಯಿಗಳ ದಾಳಿ ಸೆರೆಯಾಗಿವೆ.
ದಾಳಿಗೊಳಗಾದ ಬಾಲಕಿಯನ್ನು ಐದು ವರ್ಷದ ಸುದಕ್ಷ ಎಂದು ಗುರುತಿಸಲಾಗಿದೆ. ಬಾಲಕಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.