Advertisement

ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದು ನಂಬಿಸಿ 7 ವಿವಾಹವಾದ ವಂಚಕ ಪೊಲೀಸ್ ಬಲೆಗೆ!

10:52 AM Sep 17, 2019 | Nagendra Trasi |

ಚೆನ್ನೈ:ತಾನೊಬ್ಬ ಎನ್ ಕೌಂಟರ್ ಸ್ಪೆಶಲಿಸ್ಟ್, ಇಬ್ಬರು ಕುಖ್ಯಾತ ರೌಡಿಗಳನ್ನು ಹೊಡೆದುರುಳಿಸಿದ್ದೇನೆ ಎಂದು ಬಿಂಬಿಸಿಕೊಂಡಿದ್ದ ನಕಲಿ ಪೊಲೀಸ್ ಟೆಲಿಮಾರ್ಕೆಟಿಂಗ್ ಸಂಸ್ಥೆಯ ಮೂಲಕ ಹಲವಾರು ಜನರನ್ನು ವಂಚಿಸಿ ಏಳು ಯುವತಿಯರನ್ನು ವಿವಾಹವಾಗಿ, ಆರು ಮಹಿಳೆಯರ ಜತೆ ದೈಹಿಕ ಸಂಬಂಧ ಬೆಳೆಸಿದ್ದ ವಂಚಕ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

Advertisement

ಏನಿದು ಘಟನೆ:

7ನೇ ತರಗತಿಯಿಂದ ಅರ್ಧಕ್ಕೆ ಹೊರಬಿದ್ದಿದ್ದ ಈ ರಾಜೇಶ್ ಪ್ರಥ್ವಿ (42ವರ್ಷ) ಎಂಬ ತಿರುಪುರ್ ನಿವಾಸಿ 2017ರಲ್ಲಿ ಚೆನ್ನೈನ ನೆಲ್ಸನ್ ಮಾಣಿಕ್ಯಂ ರಸ್ತೆ ಸಮೀಪ ಟೆಲಿ ಮಾರ್ಕೆಟಿಂಗ್ ಸಂಸ್ಥೆಯೊಂದನ್ನು ಸ್ಥಾಪಿಸಿದ್ದ. ಈತ ತನ್ನ ಸಂಸ್ಥೆಯಲ್ಲಿರುವ ಹಾಗೂ ಟೆಲಿ ಮಾರ್ಕೆಂಟಿಗ್ ನಲ್ಲಿ ಪರಿಚಯವಾಗುವ ಮಹಿಳೆಯರು, ಯುವತಿಯರಿಗೆ ಪೊಲೀಸ್ ಯೂನಿಫಾರ್ಮ್ ನಲ್ಲಿದ್ದ ಫೋಟೋ ತೋರಿಸಿ, ತಾನು ಖಡಕ್ ಅಧಿಕಾರಿಯಾಗಿದ್ದು, ಎನ್ ಕೌಂಟರ್ ನಡೆಸಿ ಹೆಸರು ಪಡೆದಿದ್ದ. ಇದೀಗ ಪೊಲೀಸ್ ಇಲಾಖೆ ಬಿಟ್ಟು ಸ್ವಂತ ಸಂಸ್ಥೆ ಸ್ಥಾಪಿಸಿರುವುದಾಗಿ ರೀಲು ಬಿಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 30ರಂದು 18 ವರ್ಷದ ಯುವತಿಯ ಪೋಷಕರು ಎಗ್ಮೋರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ರಾಜೇಶ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು.

ಪೊಲೀಸರ ಆರಂಭಿಕ ತನಿಖೆಯಲ್ಲಿ ರಾಜೇಶ್ ಆಕೆಯನ್ನು ಅಪಹರಿಸಿರುವುದು ಪತ್ತೆಯಾಗಿತ್ತು. ಬಳಿಕ ಯುವತಿಯ ಪೋಷಕರು ಮದ್ರಾಸ್ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 9ರಂದು ಪೊಲೀಸರು ತಿರುಪುರ್ ನಲ್ಲಿ ಯುವತಿಯನ್ನು ಪತ್ತೆಹಚ್ಚಿ ರಕ್ಷಿಸಿ ಕರೆತಂದಿದ್ದರು. ಆಗ ರಾಜೇಶ್ ತನ್ನ ಮದುವೆಯಾಗಿರುವುದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಳು.

Advertisement

ಕೆಲವು ದಿನಗಳ ಬಳಿಕ ರಾಜೇಶ್ ಯುವತಿಯ ಮನೆಗೆ ಬಂದು ತನ್ನನ್ನು ಬಿಟ್ಟು ಹೋಗು ಎಂದು ಧಮ್ಕಿ ಹಾಕಿದ್ದ. ಈ ಪ್ರಕರಣದಲ್ಲಿ ಪೊಲೀಸರು ರಾಜೇಶನನ್ನು ಬಂಧಿಸಿದಾಗ ಆತನ ಎಲ್ಲಾ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಿದ್ದವು!

ಈತ ತನ್ನ ಟೆಲಿಮಾರ್ಕೆಟಿಂಗ್ ಸಂಸ್ಥೆ ಮೂಲಕ ಮೆಡಿಕಲ್ ಸೀಟು ಕೊಡಿಸುವುದಾಗಿ ಹಲವಾರು ಪೋಷಕರಿಂದ 30 ಲಕ್ಷ ರೂಪಾಯಿ ವಂಚಿಸಿದ್ದ. ಈತನ ಸಂಸ್ಥೆಯಲ್ಲಿ ಟೆಲಿಕಾಲರ್ಸ್ ಸಂತ್ರಸ್ತೆಯರು ಸೇರಿದಂತೆ 22 ಮಹಿಳೆಯರು ಕೆಲಸಕ್ಕಿದ್ದರು. ಅವರಲ್ಲಿ ಆರು ಮಹಿಳೆಯರ ಜತೆ ಅನೈತಿಕ ಸಂಬಂಧ ಹೊಂದಿದ್ದ. ಏಳು ಯುವತಿಯರ ಜತೆ ವಿವಾಹವಾಗಿದ್ದ ಘಟನೆ ತನಿಖೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೆಡಿಕಲ್ ಸೀಟು, ಕೆಲಸ ಕೊಡಿಸುವುದಾಗಿ ಸುಳ್ಳು ಹೇಳಿ ಪಡೆಯುತ್ತಿದ್ದ ಹಣದಿಂದ ನಕಲಿ ಸಂಸ್ಥೆಯ ಮೂಲಕ ನಕಲಿ ಪೊಲೀಸ್ ಎನ್ ಕೌಂಟರ್ ಸ್ಪೆಶಲಿಸ್ಟ್ ಹೆಸರಿನಲ್ಲಿ ಮಹಿಳೆಯರನ್ನು ಯುವತಿಯರನ್ನು ರಾಜೇಶ್ ವಂಚಿಸುತ್ತಿದ್ದ ಎಂದು ಜಂಟಿ ಕಮಿಷನರ್ ಆರ್.ಸುಧಾಕರ್ ವಿವರಿಸಿದ್ದಾರೆ.

ಈತನ ಬಳಿ ಇರುವ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಎಲ್ಲವೂ ರಾಜೇಶ್ ಪ್ರಥ್ವಿ ಎಂಬ ನಕಲಿ ಹೆಸರಿನಲ್ಲಿ ಪಡೆದಿದ್ದ. ಇವನ ನಿಜವಾದ ಹೆಸರು ದಿನೇಶ್!

ಕೆಲವು ವರ್ಷಗಳ ಹಿಂದೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ರಾಜೇಶ್ ಅಲಿಯಾಸ್ ದಿನೇಶ್ ನನ್ನು ನೆಲ್ಲೂರು ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದ ಮೇಲೆ ರಾಜೇಶ್ ವಿವಿಧ ಸ್ಥಳಗಳಲ್ಲಿ ಬೀಡು ಬಿಡುತ್ತಿದ್ದ ಎಂದು ಎಗ್ಮೋರ್ ಪೊಲೀಸ್ ಇನ್ಸ್ ಪೆಕ್ಟರ್ ಸೆಟ್ಟು ತಿಳಿಸಿದ್ದಾರೆ.

ಶ್ರೀರಾಮ್ ಗುರು ದೀನಾ, ದಯಾಳನ್, ದೀನ್ ದಯಾಳನ್, ರಾಜೇಶ್ ಪೆರುಮಾಳ್ ಹೀಗೆ ಅನೆಏಕ ಹೆಸರುಗಳಿಂದ ಮಹಿಳೆಯರನ್ನು ವಂಚಿಸುತ್ತಿದ್ದ. ಈತನ ಉಪಯೋಗಿಸುತ್ತಿದ್ದ ಸಬ್ ಇನ್ಸ್ ಪೆಕ್ಟರ್ ಯೂನಿಫಾರಂ, ನಕಲಿ ಗುರುತು ಪತ್ರ, ಜೋಡಿ ಕೈಕೋಳ, ಪ್ಯಾನ್, ಆಧಾರ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next