ಚೆನ್ನೈ: ಮಹಿಳೆಯೊಬ್ಬರ ಮನೆಯಲ್ಲಿ ಸ್ಪೈ ಕ್ಯಾಮೆರಾ ಇಟ್ಟು ರಹಸ್ಯವಾಗಿ ಚಿತ್ರೀಕರಿಸಿದ ಆರೋಪದ ಮೇಲೆ ದಂತ ವೈದ್ಯಕೀಯ ವಿದ್ಯಾರ್ಥಿಯನ್ನು ಬಂಧಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಮಂಗಳವಾರ (ಜ. 30ರಂದು) ಮಹಿಳೆ ತನ್ನ ಕೋಣೆ ಸ್ವಚ್ಛಗೊಳಿಸುವ ವೇಳೆ ಸ್ಪೈ ಕ್ಯಾಮೆರಾ ಇಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನು ನೋಡಿದ ಮಹಿಳೆ ಪತಿಯ ಬಳಿ ಹೇಳಿದ್ದಾರೆ.
ಪೆನ್ ವೊಂದರಲ್ಲಿ ಕೆಂಪು ಬೆಳಕು ಬರುತ್ತಿರುವುದನ್ನು ನೋಡಿ ಗಾಬರಿಗೊಂಡ ಮಹಿಳೆ ಪತಿಯ ಈ ವಿಚಾರವನ್ನು ಹೇಳಿದಾಗ ಇಬ್ಬರು ಪೆನ್ ನ್ನು ಪರಿಶೀಲಿಸಿದ್ದಾರೆ. ಕೆಲಸದಿಂದ ಮನೆಗೆ ಮರಳಿದ ಆಕೆಯ ಪತಿ ಅನುಮಾನಾಸ್ಪದ ‘ಪೆನ್’ ನ್ನು ಪರೀಕ್ಷಿಸಿದಾಗ ಅದು ರಹಸ್ಯವಾದ ರೆಕಾರ್ಡಿಂಗ್ ಸಾಧನ ಎಂದು ತಿಳಿದುಬಂದಿದೆ.
ಆ ಬಳಿಕ ದಂಪತಿಗಳು ಸ್ಪೈ ಕ್ಯಾಮೆರಾದಲ್ಲಿ ಏನಿದೆ ಎನ್ನುವುದನ್ನು ಪರಿಶೀಲಿಸಿದ್ದು, ಇದರಲ್ಲಿ ಮಹಿಳೆ ಬಟ್ಟೆ ಬದಲಾಯಿಸುವ ಹಾಗೂ ಇತರೆ ಕೆಲ ಸನ್ನಿವೇಶಗಳ ವಿಡಿಯೋಗಳು ರೆಕಾರ್ಡ್ ಆಗಿರುವುದನ್ನು ನೋಡಿದ್ದಾರೆ.
ದಂಪತಿಗಳು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಕಟ್ಟಡದ ಮಾಲೀಕನ ಮಗನಾದ ಇಬ್ರಾಹಿಂ ಎಂಬಾತನನ್ನು ಬಂಧಿಸಿದ್ದಾರೆ. ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಕಳೆದ ಹಲವು ವರ್ಷಗಳಿಂದ ಮಹಿಳೆ ಪತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.