ಚೆನ್ನೈ: ತಮಿಳುನಾಡಿನ ಚೆನ್ನೈಯಲ್ಲಿ 2015ರಲ್ಲಿ ಉಂಟಾದ ಪ್ರವಾಹ ಸನ್ನಿವೇಶ ಮತ್ತೂಮ್ಮೆ ತಲೆದೋರುವ ಆತಂಕ ವ್ಯಕ್ತವಾಗಿದೆ. ಗುರುವಾರ ಹಾಗೂ ಶುಕ್ರವಾರ ಒಟ್ಟು 183 ಮಿ.ಮೀ ಮಳೆಯಾಗಿದೆ. ಚೆನ್ನೈನ ಹಲವು ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಸುಮಾರು 100ಕ್ಕೂ ಹೆಚ್ಚು ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಖಾಸಗಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಮಳೆ ತೀವ್ರತೆ ಹೆಚ್ಚಾದರೆ ರಜೆ ಘೋಷಿ ಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಪ್ರಕಾರ ಶನಿವಾರ ಕೂಡ ತೀವ್ರ ಮಳೆಯಾಗುವ ಸಾಧ್ಯತೆಯಿದೆ.
ತಾಂಬರಂ ಆಸ್ಪತ್ರೆಯ ನೆಲಮಾಳಿಗೆಗೆ ನೀರು ನುಗ್ಗಿದ್ದು, ಸುಮಾರು 60ಕ್ಕೂ ಹೆಚ್ಚು ರೋಗಿಗಳನ್ನು ನೆಲಮಾಳಿಗೆ ಯಿಂದ ಮೊದಲ ಮಹಡಿಗೆ ಸ್ಥಳಾಂತರಿ ಸಲಾಗಿದೆ. ರೈಲು, ಬಸ್ ಹಾಗೂ ಮೆಟ್ರೋ ಸೇವೆಗಳು ಸ್ಥಗಿತಗೊಂಡಿ ತ್ತಾದರೂ, ಈಗ ಚಾಲ್ತಿಗೆ ಬಂದಿದೆ.
ಇನ್ನು ತಮಿಳುನಾಡಿನ ಇತರ ಭಾಗಗಳಲ್ಲೂ ಮಳೆ ಭಾರೀ ಅನಾಹುತ ಉಂಟು ಮಾಡಿದ್ದು, ನಾಗಪಟ್ಟಿಣಂನಲ್ಲಿ ಸತತ ಐದು ದಿನಗಳಿಂದ ಮಳೆ ಸುರಿಯುತ್ತಿದೆ. ನೂರಕ್ಕೂ ಹೆಚ್ಚು ಮನೆಗಳು ಮುಳುಗಿದ್ದು, ಸಾವಿರಾರು ಎಕರೆ ಭತ್ತದ ಬೆಳೆ ನಾಶವಾಗಿದೆ. ರಾಜೇಂದ್ರನ್ ನಾಲೆ ಒಡೆದು ತಲಚಂಕಾಡುವಿನಲ್ಲಿ ಶುಕ್ರವಾರ ಬೆಳಗ್ಗೆ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ತರಂಗಂಬಾಡಿಯಲ್ಲಿ 400 ವರ್ಷಗಳಷ್ಟು ಹಳೆಯದಾದ ಕೋಟೆ ನೀರಿನಲ್ಲಿ ಮುಳುಗಿದೆ. ತಲೈನಯಿರು ಮತ್ತು ವೇದಾರಣ್ಯಂ ಜಿಲ್ಲೆಯಲ್ಲೂ ಭಾರಿ ಮಳೆಯಾಗಿದೆ. ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿವೆ. ತಿರುವಳ್ಳೂರು ಮತ್ತು ಕಾಂಚೀಪುರಂನಲ್ಲಿ ಶನಿವಾರ ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದೆ.