Advertisement

ನಗರೋತ್ಥಾನ ಕಾಮಗಾರಿ: ಮುಟ್ಟಿದರೆ ಕಿತ್ತು ಹೋಗುತ್ತೆ ರಸ್ತೆ !

11:32 AM Mar 02, 2020 | Naveen |

ಚನ್ನಗಿರಿ: ರಸ್ತೆಗಳಿಗೆ ಡಾಂಬರೀಕರಣ, ಕಾಂಕ್ರೀಟ್‌ ಚರಂಡಿಗಳ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿ, ನಗರೋತ್ಥಾನ ಯೋಜನೆಯಡಿ ಬರೋಬ್ಬರಿ 7.5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದರೂ ಪ್ರಾರಂಭದಲ್ಲಿಯೇ ಕಾಮಗಾರಿಗಳಿಗೆ ಕಳಪೆ ಗುಣಮಟ್ಟದ ವಾಸನೆ ತಟ್ಟಿದೆ.

Advertisement

ಹೌದು, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ವಿವಿಧ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಅಗತ್ಯವೇ ಇಲ್ಲದ ಸ್ಥಳಗಳಲ್ಲಿ, ಸಾರ್ವಜನಿಕರಿಗೆ ಪ್ರಯೋಜನವಾಗದ ಸ್ಥಳದಲ್ಲಿ ಮತ್ತು ಗುಣಮಟ್ಟದ ರಸ್ತೆಗಳನ್ನೇ ಕಿತ್ತು ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಗುತ್ತಿಗೆದಾರರೊಂದಿಗೆ ಸೇರಿ ಕಮಿಷನ್‌ ಆಸೆಗಾಗಿ ನಗರೋತ್ಥಾನ ಯೋಜನೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪಗಳು ಈಗ ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿವೆ.

ರಸ್ತೆಗೆ ಅಂಟಿಕೊಳ್ಳದ ಡಾಂಬರ್‌: ಪೊಲೀಸ್‌ ಕ್ವಾಟ್ರರ್ಸ್‌ ಸಮೀಪದಲ್ಲಿ ನಿರ್ಮಾಣವಾಗಿರುವ ಹೊಸ ಬಡಾವಣೆಗಳಲ್ಲಿ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಜಲ್ಲಿ ಪುಡಿ-ಪುಡಿಯಾಗಿ ಹೊರ ಬರುತ್ತಿದೆ. ಇನ್ನು ರಸ್ತೆ ಬದಿಯ ಡಾಂಬರ್‌ ಕಿತ್ತು ಬರುತ್ತಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ಅಧಿ ಕಾರಿಗಳು ಮತ್ತು ಗುತ್ತಿಗೆದಾರರಿಗೆ ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ಉಸ್ತುವಾರಿಯೇ ಇಲ್ಲ: ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿರುವ ಸಾರ್ವಜನಿಕರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ನಗರೋತ್ಥಾನ ಯೋಜನೆಯ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದೆ. ಗುತ್ತಿಗೆದಾರರ ಟೆಂಡರ್‌ ಅವಧಿ ಈಗಾಗಲೇ ಮುಗಿದುಹೋಗಿದೆ. ಕೆಲ ರಸ್ತೆಗೆ ಡಾಂಬರೀಕರಣ ಮಾಡಲು ರಸ್ತೆಗಳನ್ನು ಕಿತ್ತುಹಾಕಿದ್ದಾರೆ. ಕೆಲಕಡೆಗಳಲ್ಲಿ ಅರ್ಧ ಕೆಲಸ ಮಾಡಲಾಗಿದೆ. ತಕ್ಷಣ ವೇಗವಾಗಿ ಕಾಮಗಾರಿ ಮುಗಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು.
ಜಿ. ನಿಂಗಪ್ಪ,
ಪುರಸಭೆ ಸದಸ್ಯರು

ಎರಡು ವರ್ಷದಿಂದಲೂ ನಗರೋತ್ಥಾನ ಯೋಜನೆಯಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ರಸ್ತೆಗೆ ಡಾಂಬರೀಕರಣ ನಡೆಸಿದ್ದು, ಕಳಪೆ ಕಾಮಗಾರಿಯಿಂದ ರಸ್ತೆಗೆ ಬಳಸಿದ್ದ ಜಲ್ಲಿ ಮಿಶ್ರಿತ ಡಾಂಬರ್‌ ಕಿತ್ತು ಚರಂಡಿ ಸೇರುತ್ತಿದೆ. ಅವಶ್ಯವಿರದ ಕೆಲವೆಡೆ ಕಾಮಗಾರಿ ಕೈಗೊಂಡಿದ್ದಾರೆ. ಸುಸಜ್ಜಿತ ರಸ್ತೆಗಳನ್ನೇ ಕಿತ್ತು ಡಾಂಬರ್‌ ಹಾಕುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳು ಗಮನ ಹರಿಸಬೇಕು.
ಚಂದ್ರಶೇಖರ್‌,
ತಾಲೂಕು ಸಂಚಾಲಕರು, ಪ್ರಜಾಕೀಯ

ನಗರೋತ್ಥಾನ ಯೋಜನೆ ಮುಕ್ತಾಯ ಹಂತಕ್ಕೆ ಬಂದಿದೆ. ಪೊಲೀಸ್‌ ಕ್ವಾಟ್ರರ್ಸ್‌ ಸಮೀಪದಲ್ಲಿ ರಸ್ತೆಯೊಂದು ಕಿರಿದಾಗಿದ್ದು ಚರಂಡಿ ವ್ಯವಸ್ಥೆಯಿಲ್ಲ. ಆದ್ದರಿಂದ ರಸ್ತೆ ಬದಿ ಕಿತ್ತು ಬಂದಿದೆ. ಅಲ್ಲಿ ಚರಂಡಿ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಆದನಂತರ ಎಸ್‌ಡಿಬಿಸಿ ಕೈಗೊಂಡು ಪೂರ್ಣಗೊಳಿಸಲಾಗುವುದು. ಎಲ್ಲಿಯೂ ಕೂಡ ಲೋಪವಿಲ್ಲದಂತೆ ಯೋಜನೆ ಕೈಗೊಳ್ಳಲಾಗಿದೆ.
ಎ.ವಿ. ರವಿಕುಮಾರ್‌,
ಸಹಾಯಕ ಇಂಜಿನಿಯರ್‌, ಪುರಸಭೆ.

„ಶಶೀಂದ್ರ ಸಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next