ಚನ್ನಗಿರಿ: ಸಂವಿಧಾನ ವಿರೋಧಿ ಹೇಳಿಕೆ ನೀಡುವ ದುಷ್ಕರ್ಮಿಗಳನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಒತ್ತಾಯಿಸಿದ್ದಾರೆ.
ಪಟ್ಟಣದ ರಾಮ ಮನೋಹರ ಲೋಹಿಯಾ ಭವನದಲ್ಲಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಡಾ| ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಂ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಿತ ವರ್ಗಕ್ಕೆ ಸಂವಿಧಾನ ಸೀಮಿತಿವಾಗಿಲ್ಲ. ಇಡಿ ಮನುಕುಲವೇ ಸಂವಿಧಾನದ ಒಳಿತನ್ನು ಬಯಸುತ್ತಿದೆ. ಅದರೆ ಇದನ್ನು ಸಹಿಸದೇ ಹಲವರು ಸಂವಿಧಾನವನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಬದಲಾಯಿಸುವುದಕ್ಕೆ ಬಂದಿದ್ದೇನೆ ಎನ್ನುವ ಅನಂತಕುಮಾರ್ ಹೆಗಡೆ ರಾಜಕಾರಣಿಯಲ್ಲ, ಉಗ್ರಗ್ರಾಮಿ. ಅಂತಹವರನ್ನು ದೇಶದಲ್ಲಿ ಇಟ್ಟುಕೊಂಡರೆ ದೇಶವನ್ನು ಉಗ್ರರಾಷ್ಟ್ರವನ್ನಾಗಿ ಪರಿವರ್ತನೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ, ಈ ನಿಟ್ಟಿನಲ್ಲಿ ಯಾರೇ ಸಂವಿಧಾನ ಕೆಣಕಲು ಮುಂದಾದರೆ ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದರು.
ಇತ್ತೀಚಿಗೆ ದಲಿತ ಸಮುದಾಯವನ್ನು ಭಾವನಾತ್ಮಕ ಸಂಬಂಧಗಳಿಂದ ಕಟ್ಟಿಹಾಕುವ ಹುನ್ನಾರ ನಡೆಸಲಾಗುತ್ತಿದೆ. ಈ ಕುರಿತು ದಲಿತ ಯುವಕರು ಎಚ್ಚೆತ್ತುಕೊಳ್ಳಬೇಕು. ಹಿಂದೂ, ಹಿಂದೂಸ್ಥಾನ ಹಿಂದುತ್ವ ಹೆಸರಿನಲ್ಲಿ ದಲಿತರು, ಹಿಂದುಳಿದ ವರ್ಗದ ಯುವಕರ ಭಾವನೆಯ ಜೊತೆಯಲ್ಲಿ ಚೆಲ್ಲಾಟವಾಡುತ್ತಿರುವ ಕೋಮುವಾದಿಗಳ ವಿರುದ್ಧ ಗಮನ ಹರಿಸಬೇಕು ಎಂದರು.
ಡಿಎಸ್‌ಎಸ್ ಹಿರಿಯ ಮುಖಂಡ ಸಿ. ಸಿದ್ದಪ್ಪ ಮಾತನಾಡಿ. ಮೂಢನಂಬಿಕೆಗಳಿಂದ ದಲಿತ ಸಮುದಾಯವು ಶೋಷಣೆಗೆ ಒಳಗಾಗುತ್ತಿರುವುದನ್ನು ಮೊದಲು ತಪ್ಪಿಸಬೇಕಾಗಿದೆ. ಎಲ್ಲಿಯವರೆಗೂ ದಲಿತರು ಶಿಕ್ಷಣದಲ್ಲಿ ಗಟ್ಟಿಯಾಗುವುದಿಲ್ಲವೋ ಅವರು ಅಭಿವೃದ್ಧಿಯನ್ನು ಕಾಣಲು ಸಾಧ್ಯವಿಲ್ಲ ಎಂದು ದಾರ್ಶನಿಕರು ಹೇಳಿದ್ದಾರೆ. ಆದ್ದರಿಂದ ನೀವು ಶಿಕ್ಷಣವಂತರಾದರೆ ನಿಮ್ಮನ್ನು ಶೋಷಿಸುವ ಶಕ್ತಿಗಳು ನಾಶವಾಗುತ್ತವೆ ಎಂದರು.
ಜಿಪಂ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಸಂವಿಧಾನದ ಆಶಯಕ್ಕೆ ಯಾರು ಬದ್ಧರಾಗಿರುವರೋ ಅವರು ಮಾತ್ರ ದೇಶದಲ್ಲಿ ಜೀವನ ನಡೆಸಲು ಅರ್ಹತೆಯನ್ನು ಹೊಂದಿರುತ್ತಾರೆ, ಗಾಂಧೀಜಿ ಸ್ವಾತಂತ್ರ್ಯಕ್ಕೆ ಹೋರಾಡಿದರು, ಅದರ ರಕ್ಷಣೆಗೆ ಅಂಬೇಡ್ಕರ್ ಸಂವಿಧಾನ ನೀಡಿದ್ದಾರೆ. ಅದನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಸಲಹೆ ನೀಡಿದರು.
ಡಿಎಸ್‌ಎಸ್ ತಾಲೂಕು ಸಂಚಾಲಕ ಗಾಂಧಿ ನಗರದ ಚಿತ್ರಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್, ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಮಂಜುನಾಥ್, ಕೋಗಲೂರು ಕುಮಾರ್, ಮಾನವ ಹಕ್ಕುಗಳ ಆಯೋಗದ ತಾಲೂಕು ಸಂಚಾಲಕ ನಾಗೇಂದ್ರಪ್ಪ, ರವಿ, ಮತ್ತಿತರರಿದ್ದರು.