ಚಿಕ್ಕಮಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಸರ್ಕಾರ ಹೇಳಿದೆ. ಅದರಂತೆ ಇಂದು ಬಹುತೇಕರು ತಮ್ಮ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಿ ದೇಶ ಭಕ್ತಿ ಪ್ರದರ್ಶಿಸಿದ್ದಾರೆ. ಆದರೆ ಇಲ್ಲಿ ಮಾತ್ರ ಮನೆಗಳಲ್ಲಿ ಧ್ವಜ ಹಾರಿಸಿದೇ, ಅರ್ಧ ಹಾಕಿಟ್ಟ ಪಂಚಾಂಗಗಳಲ್ಲೇ ಧ್ವಜ ಹಾರಿಸಿದ್ದಾರೆ. ಕಾರಣ ಇವರಿಗೆ ಸರ್ಕಾರದಿಂದ ಮನೆ ಪರಿಹಾರ ಹಣವೇ ಇನ್ನೂ ಬಂದಿಲ್ಲ.
ಹೌದು, ಕಳೆದ 4 ವರ್ಷಗಳ ಹಿಂದೆ ಜಿಲ್ಲೆಯ ಕಳಸ ತಾಲ್ಲೂಕು ವ್ಯಾಪ್ತಿಯ ಚೆನ್ನಡ್ಲು ಗ್ರಾಮದಲ್ಲಿ ಅತಿವೃಷ್ಟಿಯಿಂದ ಸಂತ್ರಸ್ಥರಾದ 16 ಕುಟುಂಬಗಳಿಗೆ ಸರ್ಕಾರ ಮನೆ ಪರಿಹಾರ ನೀಡಿಲ್ಲ. ಹೀಗಾಗಿ ಮನೆ ನಿರ್ಮಾಣಕ್ಕೆ ನಿರ್ಮಿಸಿದ ಪೌಂಡೇಶನ್ ಮೇಲೆಯ ರಾಷ್ಟಧ್ವಜ ಹಾರಿಸಿದ್ದಾರೆ.
ಕಳಸ ತಾಲೂಕಿನ ಚೆನ್ನಡ್ಲು ಗ್ರಾಮದ 16 ಸಂತ್ರಸ್ಥ ಕುಟುಂಬಗಳು ಪಂಚಾಗದ ಮೇಲೆ ಧ್ವಜಾರೋಹಣ ಮಾಡಿದ್ದಾರೆ. ನಾಲ್ಕು ವರ್ಷ ಕಳೆದರೂ ಒಂದು ಲಕ್ಷ ಹಣ ನೀಡಿ ಬಾಕಿ ಹಣ ನೀಡದೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ನಿವೇಶನಕ್ಕೆ ಜಾಗ ನೀಡಿದ್ದರೂ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ನೀಡಿಲ್ಲ. ಮನೆ ನಿರ್ಮಾಣದ ಬಾಕಿ ಅನುದಾನ ಬಿಡುಗಡೆ, ಜಿಪಿಎಸ್ ಮಾಡಲು ಹಕ್ಕುಪತ್ರ ಬೇಕು ಎಂದು ಗ್ರಾ.ಪಂ. ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ವಿಎಲ್ ಸಿ ಮೀಡಿಯಾ ಪ್ಲೇಯರ್ ನಿಷೇಧ… ಸೈಬರ್ ಸೆಕ್ಯುರಿಟಿ ತಜ್ಞರ ಆರೋಪವೇನು?
ನಿವೇಶನ ನೀಡಿದ ಜಾಗದಲ್ಲಿ ನೀರು ರಸ್ತೆಯಂತಹ ಮೂಲ ಸೌಕರ್ಯವನ್ನೂ ಜಿಲ್ಲಾಡಳಿತ ಕಲ್ಪಿಸಿಲ್ಲ. 4 ವರ್ಷದಿಂದ ಪರಿಹಾರ ಸಿಗದೆ ಪರಿತಪಿಸುತ್ತಿರುವ ಸಂತ್ರಸ್ಥರು, ಹಕ್ಕುಪತ್ರಕ್ಕೆ ಆಗ್ರಹಿಸಿ ಕಳಸ ಪಟ್ಟಣದಲ್ಲಿ ಇತ್ತಿಚೆಗೆ ಧರಣಿ ನಡೆಸಿದ್ದರು. ಬಳಿಕ ಅಧಿಕಾರಿಗಳ ಭರವಸೆ ಮೇರೆಗೆ ಧರಣಿ ಕೈಬಿಟ್ಟಿದ್ದರು. ಆದರೆ ಭರವಸೆ ಈಡೇರಿಸದ ಅಧಿಕಾರಿಗಳ ಮತ್ತೆ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಸರಕಾರದ ನಿರ್ಲಕ್ಷ್ಯ ಖಂಡಿಸಿ ಮನೆ ನಿರ್ಮಾಣಕ್ಕೆ ನಿರ್ಮಿಸಿದ ಪಂಚಾಂಗದ ಮೇಲೆ ಧ್ವಜ ಹಾರಿಸಿ ಸರ್ಕಾರ ಜನಪ್ರತಿನಿಧಿಗಳು, ಜಿಲ್ಲಾಡಳಿತದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.