Advertisement

ಕೆರೆ ಕುಂಟೆ ಸೇರಿದ ಹೊಲದ ರಾಸಾಯನಿಕ

09:22 AM Aug 28, 2019 | Suhan S |

ಧಾರವಾಡ: ಮಳೆ ನಿಂತರೂ ಅದರ ಹನಿಗಳು ನಿಲ್ಲಲಿಲ್ಲ ಎನ್ನುವ ಗಾದೆ ಮಾತಿನಂತೆ, ನೆರೆ ನಿಂತರು ಅದರಿಂದಾದ ಹಾನಿಯ ದುಷ್ಪರಿಣಾಮಗಳು ಒಂದೊಂದಾಗಿ ಗೋಚರಿಸುತ್ತಲೇ ಇವೆ.

Advertisement

ನೆರೆಹಾವಳಿಯಿಂದ ಹಳ್ಳಗಳು ಎಬ್ಬಿಸಿದ ಹಾವಳಿಗೆ ಜನ, ಜಾನುವಾರು ಕೊಚ್ಚಿ ಹೋಗಿದ್ದವು. ಬೆಳೆಹಾನಿ, ಮನೆಹಾನಿ ಕೂಡ ಆಗಿದೆ. ಕೆಲವು ಕಡೆಗಳಲ್ಲಿ ಹೊಲಕ್ಕೆ ಹೊಲವೇ ಕೊಚ್ಚಿಹೋಗಿದೆ. ಇದರ ಸಾಲಿಗೆ ಇನ್ನೊಂದು ಹೊಸ ಸೇರ್ಪಡೆ ಜೋರಾದ ಮಳೆ ಹೊಡೆತಕ್ಕೆ ಹೊಲದಲ್ಲಿ ಅನೇಕ ವರ್ಷಗಳಿಂದ ಸಿಂಪರಣೆ ಮಾಡಿದ್ದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಗಳು, ಕಳೆನಾಶಕದ ಅಂಶವೆಲ್ಲ ಕೊಚ್ಚಿಕೊಂಡು ಬಂದು ಕೆರೆ, ಕುಂಟೆ ಮತ್ತು ಹಳ್ಳದ ನೀರನ್ನು ಸೇರುತ್ತಿದೆ.

ಹೊಲಗಳ ಬದುಗಳಲ್ಲಿ ಹರಿಯುತ್ತಿರುವ ನೀರಿನ ತೇಲು (ಹರಿವು)ಗಳಲ್ಲಿ ರಾಸಾಯನಿಕಗಳನ್ನೊಳಗೊಂಡ ಹೊಲಸು ಜಮಾವಣೆಯಾಗಿದೆ. ಅಷ್ಟೇಯಲ್ಲ, ಇದು ಕಿರು ತೊರೆಗಳ ಮೂಲಕ ಕೆರೆ ಅಥವಾ ಹಳ್ಳಗಳನ್ನು ಸೇರಿ ಸಾಗುತ್ತಿದೆ. ಮೇಲ್ನೋಟಕ್ಕೆ ಇದೇನು ಹಾನಿ ಮಾಡುವ ಅಥವಾ ತೊಂದರೆ ಕೊಡುವ ವಿಚಾರವಲ್ಲ ಎನಿಸಿದರೂ, ರಾಸಾಯನಿಕ ಯುಕ್ತ ನೀರು ಮತ್ತೆ ಅಂತರ್ಜಲ ಮೂಲಗಳಲ್ಲಿ ಬೆರೆಯುತ್ತಿದೆ. ಇನ್ನೊಂದೆಡೆ ಹತ್ತಾರು ವರ್ಷಗಳಿಂದ ರೈತರ ಹೊಲದ ಮಣ್ಣು ಸೇರಿದ್ದ ರಾಸಾಯನಿಕಗಳು ಕೊಚ್ಚಿ ಹೋಗಿದ್ದರಿಂದ ಹೊಲ ಹಸನಾಗಿದೆ ಎನ್ನಬಹುದು. ಇನ್ನು ಗ್ರಾಮ ಮತ್ತು ನಗರ ವಾಸಿಗಳು ಎಲ್ಲೆಂದರಲ್ಲಿ ಬಿಸಾಡಿದ್ದ ಟನ್‌ಗಟ್ಟಲೇ ಮನೆ ಬಳಕೆ ತಾಜ್ಯ, ಪ್ಲಾಸ್ಟಿಕ್‌ ವಸ್ತುಗಳು, ಖಾಲಿ ಬಾಟಲಿಗಳು, ನಿರುಪಯುಕ್ತ ವಸ್ತುಗಳೆಲ್ಲವೂ ತೇಲಿ ಕೆರೆಕುಂಟೆ ಸೇರಿಕೊಂಡಿವೆ.

ಕೆರೆಯಲ್ಲಿ ತೇಲಿದ ಹೊಲಸು:

ಜಿಲ್ಲೆಯಲ್ಲಿನ 1200ಕ್ಕೂ ಅಧಿಕ ಕೆರೆಗಳು ಕೋಡಿ ತುಂಬಿ ಹರಿದಿವೆ. ಉತ್ತಮ ಮಳೆಯಾಗಿ ಕೆರೆಯಂಗಳದಲ್ಲಿ ಶುದ್ಧವಾದ ನೀರು ಅಲ್ಲಲ್ಲಿ ನಿಂತಿದೆ. ಆದರೆ ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಜಲಸಂಪರ್ಕ ಹೊಂದಿರುವ ಈ ಕೆರೆಗಳಿಗೆ ಕಲ್ಮಶವೂ ಅಷ್ಟೇ ಪ್ರಮಾಣದಲ್ಲಿ ಬಂದು ಸೇರಿದೆ. ಪ್ಲಾಸ್ಟಿಕ್‌ ಚಪ್ಪಲಿಗಳು, ಮುರಿದ ಟಿವಿ, ಹಾನಿಯಾದ ಎಲೆಕ್ಟ್ರಾನಿಕ್‌ ವಸ್ತುಗಳು, ಧಾರ್ಮಿಕ ವಿಧಿ ವಿಧಾನಗಳಿಗೆ ಬಳಕೆಯಾದ ಉಳಿಕೆ ವಸ್ತುಗಳು, ಪ್ಲಾಸ್ಟಿಕ್‌ ಚೀಲಗಳು, ಮುರಿದ ಫೈಬರ್‌ ವಸ್ತುಗಳು, ವೈರ್‌, ಬೆಂಡು, ರಟ್ಟು , ಅರ್ಧಸುಟ್ಟ ಟೈರ್‌ಗಳು ಹೀಗೆ ಪರಿಸರಕ್ಕೆ ಸಾಕಷ್ಟು ತೊಂದರೆಯಾಗುವ ಕಲ್ಮಶ ವಸ್ತುಗಳು ಕೆರೆಯಂಗಳದಲ್ಲಿ ತೇಲುತ್ತ ನಿಂತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನದಂತೆ ಇದೀಗ ಪ್ಲಾಸ್ಟಿಕ್‌ ಮುಕ್ತ ರಾಷ್ಟ್ರ ಸಂಕಲ್ಪಕ್ಕೆ ವಿಶ್ವ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಜಿಲ್ಲೆಯ 1200 ಕೆರೆಗಳ ಪೈಕಿ 180 ಕೆರೆಗಳಲ್ಲಿನ ನೀರು ಕುಡಿಯಲು ಯೋಗ್ಯವಾಗಿದ್ದು, ಇವುಗಳಿಗೆ ಕುಡಿಯುವ ನೀರಿನ ಕೆರೆ ಎಂದೇ ಹೆಸರು ಇದೆ. ಅಷ್ಟೇಯಲ್ಲ ಸಾರ್ವಜನಿಕವಾಗಿ ನಡೆಯುವ ಕಾರ್ಯಕ್ರಮಗಳು, ಜಾತ್ರೆ, ಹಬ್ಬಗಳಲ್ಲಿ ಈ ಕೆರೆಯ ನೀರನ್ನೆ ಬಳಕೆ ಮಾಡಿಕೊಂಡಿಕೊಂಡು ಅಡುಗೆ ಮಾಡಲಾಗುತ್ತಿತ್ತು. ಆದರೆ 20 ವರ್ಷಗಳಿಂದ ಕೊಳವೆಬಾವಿ ಎಲ್ಲೆಂದರಲ್ಲಿ ಬಂದಿದ್ದರಿಂದ ಈ ಕೆರೆಗಳು ಅನಾಥವಾಗಿವೆ. ಇದೀಗ ಈ ವರ್ಷ ಕೆರೆಯಂಗಳದಲ್ಲಿ ಉತ್ತಮ ನೀರು ಬಂದಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳುವ ಕುರಿತು ಗ್ರಾಮಸ್ಥರು ಚಿಂತಿಸಬೇಕಿದೆ.
ಸಾಂಪ್ರದಾಯಿಕ ಜಲಮೂಲಗಳಾದ ಕುಡಿಯುವ ನೀರಿನ ಬಾವಿಗಳಲ್ಲೂ ಈ ವರ್ಷ ಉತ್ತಮವಾಗಿ ನೀರು ಶೇಖರಣೆಯಾಗಿದೆ. ಆದರೆ ಆ ನೀರನ್ನು ಬಳಸಿಕೊಳ್ಳುವಂತಿಲ್ಲ. ಇಂತಹ ಬಾವಿಗಳಲ್ಲಿ ಈಗಾಗಲೇ ಜನರು ನಿರುಪಯುಕ್ತ ತಾಜ್ಯ ವಸ್ತುಗಳನ್ನು ತುಂಬಿಯಾಗಿದೆ. ಜಿಲ್ಲೆಯಲ್ಲಿ ಇಂತಹ 450ಕ್ಕೂ ಅಧಿಕ ಬಾವಿಗಳಿದ್ದು, ಅವುಗಳನ್ನು ಪುನರುಜ್ಜೀವನಗೊಳಿಸಿದ್ದರೆ ಈ ವರ್ಷಕ್ಕೆ ಉತ್ತಮ ನೀರು ಪಡೆಯಲು ಸಾಧ್ಯವಿತ್ತು. ಸದ್ಯಕ್ಕೆ ಜಿಲ್ಲಾಡಳಿತದ ಬಳಿ 14 ಕೋಟಿ ಹಣವಿದ್ದರೂ, ಅದನ್ನು ಕೆರೆ ಸ್ವಚ್ಛತೆಗೆ ಬಳಸುವಂತಿಲ್ಲ. ಅದು ಹಸರೀಕರಣ, ಕೆರೆ ದಡದಲ್ಲಿ ಪುಟ್ಪಾತ್‌ ನಿರ್ಮಿಸಲು ಮೀಸಲಾಗಿದೆ.
•ಬಸವರಾಜ ಹೊಂಗಲ್
Advertisement

Udayavani is now on Telegram. Click here to join our channel and stay updated with the latest news.

Next