ಬೆಂಗಳೂರು: ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನೆಪ ಹೇಳಿ ಮನೆಯ ಮುಂದಿನ ಅರ್ಜುನ ಮರಕ್ಕೆ ಪಾದರಸ ಸೇರಿದಂತೆ ವಿಷಯುಕ್ತ ರಾಸಾಯನಿಕ ಚುಚ್ಚುಮದ್ದು ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಯಿತು.
ರಾಜರಾಜೇಶ್ವರಿ ನಗರದ ಪಂಚಶೀಲ ಬ್ಲಾಕ್‌ನ ಶಾಂತಿ ಮಾರ್ಗ ರಸ್ತೆ ಬಳಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿ, ರಾಜರಾಜೇಶ್ವರಿ ನಗರದ ಪಂಚಶೀಲ ಬ್ಲಾಕ್ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಷಿಯೇಷನ್‌ನ ಸದಸ್ಯರು ಬುಧವಾರ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜರಾಜೇಶ್ವರಿ ನಗರದ ಪಂಚಶೀಲ ಬ್ಲಾಕ್ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಷಿಯೇಷನ್‌ನ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ವೈದ್ಯರೂ ಆಗಿರುವ ಸಂಬಂಧಿತ ಮನೆಯ ಮಾಲಿಕ ತಮ್ಮ ಕುಟುಂಬದವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನೆಪ ಹೇಳಿ ಮರಕ್ಕೆ ರಾತ್ರಿ ವೇಳೆ 40ಕ್ಕೂ ಹೆಚ್ಚು ರಂಧ್ರಗಳು ಕೊರೆದಿದ್ದು, ವಿಷಯುಕ್ತ ರಾಸಾಯನಿಕ ಅಂಶಗಳನ್ನು ಚುಚ್ಚಿದ್ದಾರೆ.
ಆ ಕಾರಣಕ್ಕೆ ಮರ ಹಳದಿ ಬಣ್ಣಕ್ಕೆ ತಿರುಗುತ್ತಿದೆ ಎಂದು ಹೇಳಿದರು. ಆ ವ್ಯಕ್ತಿ ಮನೆ ನಿರ್ಮಿಸುವ ಸಂದರ್ಭದಲ್ಲಿ ಎರಡು ಹೊಂಗೆ ಮರಗಳನ್ನೂ ಕಡೆದಿದ್ದರು. ಈ ವೇಳೆ ಬಿಬಿಎಂಪಿಯ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳದೆ, ದಂಡವನ್ನಷ್ಟೇ ವಿಧಿಸಿದ್ದರು. ಹೀಗಾಗಿ, ಮತ್ತೆ ಮರ ಕಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
“ಈ ರೀತಿ ಮರಕ್ಕೆ ಹಾನಿ ಮಾಡುವುದು ಅಪರಾದ ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ಮರವನ್ನು ಸಂರಕ್ಷಣೆ ಮಾಡುವ ಸಂಬಂಧ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಚೋಳರಾಜಪ್ಪ ತಿಳಿಸಿದರು.