Advertisement

“ಕೆಮಿಸ್ಟ್ರಿ’ಬಹಳ ಮುಖ್ಯ, ಮಹಾಮೈತ್ರಿಯತ್ತ ನಡೆಯುತ್ತಿರುವ ವಿಪಕ್ಷಗಳು

10:45 PM Apr 22, 2017 | Harsha Rao |

ಮಹಾಮೈತ್ರಿ ವಿಪಕ್ಷಗಳಿಗೆ ಆಪ್ಯಾಯಮಾನವಾಗಿದ್ದರೂ ಅದು ಸಾಧ್ಯವಾಗಲು ಅಂಕಿಅಂಶಗಳ ಜತೆಗೆ ಪಕ್ಷಗಳ ನಡುವಿನ ಕೆಮಿಸ್ಟ್ರಿ ಮುಖ್ಯ. ಬಿಹಾರದಲ್ಲಿ ಲಾಲು-ನಿತೀಶ್‌- ಕಾಂಗ್ರೆಸ್‌ ಮೈತ್ರಿಕೂಟ ಸರಕಾರ ಸುಸೂತ್ರವಾಗಿ ನಡೆಯುವುದಕ್ಕೆ ಬಹುಮತವಷ್ಟೇ ಕಾರಣವಲ್ಲ..

Advertisement

ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಗುರುವಾರ ದಿಲ್ಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬೆಳವಣಿಗೆ ಬಳಿಕ 2019ರ ಸಾರ್ವತ್ರಿಕ ಚುನಾವಣೆಯಾಗುವಾಗ ಬಲಿಷ್ಠ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು, ಅದರಲ್ಲೂ ಮೋದಿಯವರನ್ನು  ಎದುರಿಸುವ ಸಲುವಾಗಿ ವಿಪಕ್ಷಗಳು ಮಹಾಮೈತ್ರಿ ರಚಿಸಿಕೊಳ್ಳುವ ಊಹಾಪೋಹಗಳಿಗೆ ರೆಕ್ಕೆಪುಕ್ಕ ಹುಟ್ಟಿಕೊಂಡಿದೆ. 

ಎನ್‌ಡಿಎಗೆ ಪರ್ಯಾಯವಾಗಿ ವಿಪಕ್ಷಗಳು ಸಮಾನ ಮೈತ್ರಿಕೂಟವನ್ನು ರಚಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲು ಅನೇಕ ಕಾರಣಗಳಿವೆ. ಮೊದಲಾಗಿ 2014ರ ಸಾರ್ವತ್ರಿಕ ಚುನಾವಣೆ ಬಳಿಕ ಅಧೋಮುಖವಾಗಿಯೇ ಜಾರುತ್ತಿರುವ ಕಾಂಗ್ರೆಸ್‌ಗೆ ಉಳಿದ ಪಕ್ಷಗಳ ಜತೆಗೆ ಮೈತ್ರಿ ಅನಿವಾರ್ಯ. ಏಕಾಂಗಿಯಾಗಿ ಸ್ಪರ್ಧಿಸಿ ಬಿಜೆಪಿ ಮತ್ತು ಮೋದಿ ಅಲೆಯ ಎದುರು ನಿಲ್ಲುವ ಧೈರ್ಯ ದೇಶದ ಅತಿ ಹಳೆಯ ಪಕ್ಷಕ್ಕೆ ಇಲ್ಲ. ಅದೇ ರೀತಿ ನೀತೀಶ್‌ ಕುಮಾರ್‌, ಮುಲಾಯಂ,ಶರದ್‌ ಪವಾರ್‌,  ಮಮತಾ ಬ್ಯಾನರ್ಜಿ, ಮಾಯಾವತಿ ಸೇರಿದಂತೆ ವಿವಿಧ ರಾಷ್ಟ್ರೀಯ ನಾಯಕರಿಗೆ ಮಹಾಮೈತ್ರಿಕೂಟದೊಳಗೆ ಸೇರಿಕೊಳ್ಳಲು ತಮ್ಮದೇ ಕಾರಣಗಳಿವೆ. 

ವಿಪಕ್ಷಗಳ ಮಹಾಮೈತ್ರಿ ಕೂಟ ರಚನೆ ಸಿದ್ಧತೆ ಭರದಿಂದ ನಡೆಯುತ್ತಿದೆ ಎನ್ನುವುದಕ್ಕೆ ಇನ್ನೂ ಹಲವು ಸುಳಿವುಗಳಿವೆ. ಗುರುವಾರ ದಿಲ್ಲಿಯಲ್ಲಿ ನಿತೀಶ್‌ ಮತ್ತು ಸೋನಿಯಾ ಮಾತುಕತೆ ನಡೆಯುತ್ತಿರುವಾಗಲೇ ಭುವನೇಶ್ವರದಲ್ಲಿ ಮಮತಾ ಬ್ಯಾನರ್ಜಿ, ನವೀನ್‌ ಪಟ್ನಾಯಕ್‌ ಜತೆಗೆ ಸಮಾಲೋಚನೆ ನಡೆಸುತ್ತಿದ್ದರು. ಎರಡು ದಿನಗಳ ಹಿಂದೆ ಪಿಣರಾಯಿ ವಿಜಯನ್‌ ಮತ್ತು ಅರವಿಂದ ಕೇಜ್ರಿವಾಲ್‌ ನಡುವೆ ಇದೇ ಮಾದರಿಯ ಮಾತುಕತೆ ನಡೆದಿದೆ. ಈ ಭೇಟಿ ನಡೆಯುತ್ತಿರುವ ಸಂದರ್ಭ ಮತ್ತು ಸನ್ನಿವೇಶಗಳು ವಿಪಕ್ಷಗಳು ಒಗ್ಗೂಡುವ ಸಾಧ್ಯತೆಯನ್ನು ತಿಳಿಸುತ್ತಿವೆ. ಯುದ್ಧ ಅಥವಾ ಭೀಕರ ದುರಂತ ಸಂಭವಿಸಿದಾಗ ರಾಜಕೀಯ ನಾಯಕರು ಪಕ್ಷಬೇಧ ಮರೆತು ಒಂದಾಗುತ್ತಾರೆ. ವಿಪಕ್ಷಗಳ ಪಾಲಿಗೆ ಎನ್‌ಡಿಎಯನ್ನು, ನಿರ್ದಿಷ್ಟವಾಗಿ ಮೋದಿಯನ್ನು ಎದುರಿಸುವುದೇ ಒಂದು ಯುದ್ಧದಂತೆ ಭಾಸವಾಗಿದ್ದರೆ ಆಶ್ಚರ್ಯವಿಲ್ಲ.  

ಸಾರ್ವತ್ರಿಕ ಚುನಾವಣೆಗೂ ಮೊದಲು ವಿಪಕ್ಷಗಳಿಗೆ ತಮ್ಮ ಒಗ್ಗಟ್ಟು ಪ್ರದರ್ಶಿಸುವ ಅವಕಾಶವೇ ರಾಷ್ಟ್ರಪತಿ ಚುನಾವಣೆ. ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬಿಜೆಪಿಗೆ ಕೆಲವು ಮತಗಳ ಕೊರತೆಯಿದೆ. ಇದನ್ನೇ ತಮ್ಮ ಲಾಭಕ್ಕೆ ಪರಿವರ್ತಿಸುವ ಹವಣಿಕೆಯಲ್ಲಿವೆ ವಿಪಕ್ಷಗಳು. ಇದು ಸಾಧ್ಯವಾದರೆ ಬಿಜೆಪಿಗೆ ಬಲವಾದ ಹೊಡೆತ ನೀಡಿದಂತಾಗುತ್ತದೆ ಎನ್ನುವುದು ವಿಪಕ್ಷಗಳ ಲೆಕ್ಕಾಚಾರ. ಮಹಾಮೈತ್ರಿ ರಚಿಸಿದರೆ ಬಿಜೆಪಿಯ ನಾಗಲೋಟ ತಡೆಯಬಹುದು ಎಂಬ ಅನಿಸಿಕೆ ಬಲವಾಗಲು ಕಾರಣ ಉತ್ತರ ಪ್ರದೇಶ ಹಾಗೂ ಬಿಹಾರದ ಫ‌ಲಿತಾಂಶ. ಬಿಹಾರದಲ್ಲಿ ಜೆಡಿಯು ನೇತೃತ್ವದಲ್ಲಿ ರಚಿಸಿದ ಮಹಾಘಟಬಂಧನ್‌ ಬಿಜೆಪಿಯನ್ನು ಮೂಲೆಗುಂಪು ಮಾಡುವಲ್ಲಿ ಸಫ‌ಲವಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಮತಗಳಿಕೆಯ ಪ್ರಮಾಣ ವಿಪಕ್ಷಗಳಲ್ಲಿ ವಿಶ್ವಾಸ ಹುಟ್ಟಿಸಿದೆ. ಬಿಜೆಪಿ ಶೇ. 39.7 ಮತಗಳಿಸಿದರೆ ಬಿಎಸ್‌ಪಿ, ಎಸ್‌ಪಿ ಮತ್ತು ಕಾಂಗ್ರೆಸ್‌ ಕ್ರಮವಾಗಿ ಶೇ. 22.2, 21.8 ಮತ್ತು 6.2 ಮತ ಗಳಿಸಿವೆ.

Advertisement

ಮೂರು ಪಕ್ಷಗಳ ಒಟ್ಟಾರೆ ಗಳಿಕೆ ಶೇ. 50.2. ಅಂದರೆ ಕಾಂಗ್ರೆಸ್‌ ಮತ್ತು ಎಸ್‌ಪಿ ಜತೆಗೆ ಬಿಎಸ್‌ಪಿಯೂ ಕೈಜೋಡಿಸಿದ್ದರೆ ಫ‌ಲಿತಾಂಶ ಬೇರೆಯೇ ಆಗುವ ಸಾಧ್ಯತೆಯಿತ್ತು. ಉಳಿದ ರಾಜ್ಯಗಳಲ್ಲೂ ಕಾಂಗ್ರೆಸ್‌ ಹಾಗೂ ಉಳಿದ ಪಕ್ಷಗಳ ಮತಗಳಿಕೆ ತೀರಾ ಕಳಪೆಯಾಗಿರಲಿಲ್ಲ. ಈ ಲೆಕ್ಕಾಚಾರದ ಪ್ರಕಾರ ನೋಡಿದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂಬ ವಿಶ್ವಾಸ ವಿಪಕ್ಷಗಳಲ್ಲಿ ಹುಟ್ಟಿದೆ.  ಮಹಾ ಘಟ್‌ಬಂಧನ್‌ ವಿಪಕ್ಷಗಳಿಗೆ ಈಗ ಆಪ್ಯಾಯಮಾನವಾಗಿದ್ದರೂ ಅದು ಸಾಧ್ಯವಾಗಲು ಅಂಕಿಅಂಶಗಳ ಜತೆಗೆ ಪಕ್ಷಗಳ ನಡುವಿನ ಕೆಮಿಸ್ಟ್ರಿಯ ಹೊಂದಾಣಿಕೆ ಮುಖ್ಯ. ಬಿಹಾರದಲ್ಲಿ ಲಾಲು-ನಿತೀಶ್‌-ಕಾಂಗ್ರೆಸ್‌ ಸರಕಾರ ಸುಸೂತ್ರವಾಗಿ ನಡೆಯುವುದಕ್ಕೆ ಬಹುಮತವಷ್ಟೇ ಕಾರಣವಲ್ಲ, ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ತನ್ನದೇ ಆದ ವರ್ಚಸ್ಸು ಹಾಗೂ ವಿಶ್ವಾಸಾರ್ಹತೆಯನ್ನು ಹೊಂದಿದ್ದಾರೆ.

ಅವಕಾಶವಾದಿ ರಾಜಕೀಯದ ಸಂದರ್ಭದಲ್ಲಿ ಸಮಾನ ಕನಿಷ್ಠ ಕಾರ್ಯಕ್ರಮಕ್ಕಿಂತಲೂ ವಿಶ್ವಾಸಾರ್ಹ ನಾಯಕ ಮುಖ್ಯ. ಇಂತಹ ಓರ್ವ ನಾಯಕನನ್ನು ಹುಡುಕಲು ಸಾಧ್ಯವಾದರೆ ವಿಪಕ್ಷಗಳು ಮಹಾಮೈತ್ರಿಯ ಕನಸು ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next