ಮುಂಬಯಿ: 2017-2018 ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಚೆಂಬೂರು ಕರ್ನಾಟಕ ಸಂಘ ಸಂಚಾಲಕತ್ವದ ಚೆಂಬೂರು ಕರ್ನಾಟಕ ಹೈಸ್ಕೂಲ್‌ನ ಕನ್ನಡ ಮಾಧ್ಯಮ ಶಾಲೆಗೆ ಸತತ ಆರನೇ ಬಾರಿಗೆ ಶೇ. 100 ಫಲಿತಾಂಶ ಲಭಿಸಿದೆ.
ಚೆಂಬೂರು ಕರ್ನಾಟಕ ಸಂಘವು ಕಳೆದ ಐದು ದಶಕಗಳಿಂದ ಚೆಂಬೂರು ಪರಿಸರದ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಮುಖಾಂತರ ಶಿಕ್ಷಣವನ್ನು ನೀಡುತ್ತಿದ್ದು, ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳಲ್ಲಿ ಮೂವರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಮೂವರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಉಷಾ ಜಾನರ್ ಅವರು ಶೇ. 85.20 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಗಗನ್ ಗೌಡ ಅವರು ಶೇ. 79.40 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ನಮ್ರತಾ ಶೆಟ್ಟಿ ಅವರು ಶೇ. 79.20 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಇಂಗ್ಲಿಷ್ ಮಾಧ್ಯಮಕ್ಕೆ ಶೇ. 99.49 ಫಲಿತಾಂಶ ಲಭಿಸಿದ್ದು, ಹರಿಪ್ರಿಯಾ ಬೋದತ್ ಅವರು ಶೇ. 94.40 ಅಂಕಗಳನ್ನು ಪಡೆದು ಪ್ರಥಮ ಸ್ಥಾನಿಯಾದರೆ, ಮಿಲಿಂದ್ ಸಾವಂತ್ ಅವರು ಶೇ. 92.80 ಅಂಕಗಳೊಂದಿಗೆ ದ್ವಿತೀಯ, ಸ್ನೇಹತ್ ರಾಜ್‌ವಿಹಾರ್ ಅವರು ಶೇ. 92.40 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು, ಸಹಕರಿಸಿದ ಶಿಕ್ಷಕವೃಂದ ಮತ್ತು ಶಿಕ್ಷಕೇತರ ಸಿಂಬಂದಿಗಳನ್ನು ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.