ಮುಂಬಯಿ: ಬಸವೇಶ್ವರ ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ 886 ನೇ ಬಸವಜಯಂತಿ ಆಚರಣೆಯು ಎ. 29 ರಂದು ಸಂಜೆ ಸಂಸ್ಥೆಯ ಬಸವೇಶ್ವರ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.
ಬಾಲ್ಕಿಯ ಚನ್ನಬಸವ ಪಟ್ಟದ ದೇವರು ಅವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ| ಶಶಿಕಲಾ ಗುರುಪುರ ಹಾಗೂ ಶ್ರೀಗಳು ಬಸವೇಶ್ವರ ಭಾವಚಿತ್ರಕ್ಕೆ ಮಾಲಾಧಾರಣೆಗೈದು, ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಯಕ ಗಿರೀಶ್ ಸಾರವಾಡ ಇವರು ಪ್ರಾರ್ಥನೆಗೈದರು.
ಸಂಸ್ಥೆಯ ವಿಶ್ವಸ್ತ ಮಂಡಳಿಯ ಮನೋಹರ ಎಂ. ಕೋರಿ ಮತ್ತು ಸಂಸ್ಥೆಯ ಅಧ್ಯಕ್ಷ ಬಿ. ಜಿ. ಬಿರಾದಾರ್ ಇವರು ಅತಿಥಿ-ಗಣ್ಯರುಗಳನ್ನು ಗೌರವಿಸಿದರು. ಸಮಾಜದ ಹಿರಿಯರಾದ ಬಿ. ಎಸ್. ಹುರಿಗೇರಿ ಮಠ ಅವರನ್ನು ಶ್ರೀಗಳು ಗೌರವಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಿ ಶುಭಹಾರೈಸಿದರು.
ಮುಖ್ಯ ಅತಿಥಿ ಡಾ| ಶಶಿಕಲಾ ಗುರುಪುರ ಇವರು ಮಾತನಾಡಿ, ಬಸವೇಶ್ವರರು ಸಮಾನತೆ, ಸ್ತಿÅà ಸ್ವಾತಂತ್ರÂ, ಕಾಯಕ ದಾಸೋಹದಂತಹ ಮಹತ್ವದ ಕ್ರಾಂತಿಯನ್ನು 12 ನೇ ಶತಮಾನದಲ್ಲಿ ಮಾಡಿದ್ದು, ಅದ್ಭುತ ಕಾರ್ಯವಾಗಿದೆ. ಜಗತ್ತಿನ ಪ್ರಥಮ ಮಹಾ ಮಾನವತಾವಾದಿ ಮಹತ್ಮಾ ಬಸವೇಶ್ವರರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸುವ ಅಗತ್ಯತೆಯಿದೆ ಎಂದು ನುಡಿದರು.
ಬಾಲ್ಕಿಯ ಚನ್ನಬಸವ ಪಟ್ಟದ ದೇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲರು ಬಸವೇಶ್ವರರ ವಾರೀಸುದಾರರಾಗಿದ್ದೇವೆ. ನಮ್ಮ ವಚನ ಸಂಗ್ರಹವನ್ನು ಪರಭಾಷಾ ಬಾಂಧವರಿಗೆ ಮುಟ್ಟಿಸಿ, ನಮ್ಮ ನಡೆ-ನುಡಿಗಳಲ್ಲಿ ಬದಲಾವಣೆಗಳನ್ನು ತಂದರೆ ಕಲ್ಯಾಣ ರಾಜ್ಯ ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಶಾಂತಿ ಕಾಪಾಡಲು ಬಸವ ತತ್ವಗಳಿಂದ ಸಾಧ್ಯವಿದೆ. ಆದ್ದರಿಂದ ಯುವ ಪೀಳಿಗೆಗೆ ಬಸವ ವಚನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಾವು ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರಸಾದ ವಿತರಣೆಯ ಪ್ರಾಯೋಜಕತ್ವ ವಹಿಸಿದ್ದ ಶರಣ ಡಿ. ದಂಪತಿ, ಬಿ. ಎನ್. ಪಾಟೀಲ್ ಇವರನ್ನು ಶ್ರೀಗಳು ಗೌರವಿಸಿದರು. ವಿಶ್ವಸ್ಥ ಮಂಡಳಿಯ ಶಿವಾನಂದ ಅಮರಖೇಡ, ಎನ್. ಜಿ. ಮ್ಹಾತ್ರೆ, ಮನೋಹರ ಎಂ. ಕೋರಿ, ವಿದ್ಯಾಖಾಗೆ, ಅಧ್ಯಕ್ಷ ಬಿ. ಜಿ. ಬಿರಾದಾರ, ಕೋಶಾಧಿಕಾರಿ ರವಿ ಹಿರೇಮಠ, ಕಾರ್ಯದರ್ಶಿ ಎನ್. ಬಿ. ನಾವಳಸಂಗ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಲಿತಾ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಆರ್. ಭೀ. ಗೌಡರ ಅವರು ವಂದಿಸಿದರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.