Advertisement

ಚೆಲುವನಹಳ್ಳಿಗೆ ಮೂಲಭೂತ ಸೌಲಭ್ಯ ಮರೀಚಿಕೆ

10:16 PM Jul 29, 2019 | Lakshmi GovindaRaj |

ಕೊಳ್ಳೇಗಾಲ: ಕುಡಿಯುವ ನೀರು, ವಿದ್ಯುತ್‌, ಚರಂಡಿಯಂಥ ಮೂಲಭೂತ ಸೌಕರ್ಯವಿಲ್ಲದೇ ತಾಲೂಕಿನ ಚೆಲುವನಹಳ್ಳಿ ಗ್ರಾಮದ ಜನರು ಪ್ರತಿನಿತ್ಯ ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಧನಗೆರೆ ಗ್ರಾಪಂ ವ್ಯಾಪ್ತಿಗೆ ಸೇರಿದ ಚೆಲುವನಹಳ್ಳಿ ಗ್ರಾಮದಲ್ಲಿ ದಿನಕ್ಕೆ ಮಧ್ಯಾಹ್ನದ ವೇಳೆ ಒಂದು ಬಾರಿ ಮಾತ್ರ ನೀರಿನ ತೊಂಬೆಗಳ ಮೂಲಕ ನೀರು ಬಿಟ್ಟ ಬಳಿಕ ಮತ್ತೆ ಮಾರನೇ ದಿನವೇ ನೀರು ಬಿಡುತ್ತಿರುವುದರಿಂದ ಜನರು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ.

Advertisement

ಕೆಟ್ಟಿರುವ ಮೋಟಾರ್‌: ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ ಗ್ರಾಪಂ ವತಿಯಿಂದ ಈಗಾಗಲೇ 13 ತೊಂಬೆಗಳನ್ನು ನಿರ್ಮಾಣ ಮಾಡಲಾಗಿದೆ. ನಿರಂತರ ವಿದ್ಯುತ್‌ ಪೂರೈಕೆ ಇಲ್ಲದೆ ತೊಂಬೆಯಲ್ಲಿ ಕುಡಿಯುವ ನೀರು ದಿನಕ್ಕೆ ಒಂದು ಬಾರಿ ಮಾತ್ರ ಬಿಡಲಾಗುತ್ತದೆ. ಪ್ರತಿನಿತ್ಯ ನೀರನ್ನು ಬಿಡುವಂತೆ ನೀರುಗಂಟಿಗಳಿಗೆ ಕೇಳಿ ದರೂ ಈಗಾಗಲೇ ಕೆಟ್ಟಿರುವ ಮೋಟಾರ್‌ ಸರಿಪಡಿಸಲು ಕೊಡಲಾಗಿದೆ. ಇದುವರೆಗೂ ಮೋಟಾರ್‌ ಬಂದಿಲ್ಲ. ನಾನೇನು ಮಾಡಲು ಸಾಧ್ಯ ಎಂಬ ತ್ತರ ನೀಡಿ ಜಾರಿಕೊಳ್ಳುತ್ತಾರೆ.

ಗ್ರಾಮೀಣರಿಗೆ ಸ್ವಚ್ಛ ಭಾರತ ಮರೀಚಿಕೆ: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜನಪ್ರತಿನಿಧಿಗಳು, ಸ್ವಚ್ಛಭಾರತ್‌, ನಿರಂತರ ಜ್ಯೋತಿ ಸೇರಿದಂತೆ ವಿವಿಧ ಯೋಜನೆಗಳನ್ನು ಗ್ರಾಮೀಣ ಅಭಿವೃದ್ಧಿಗೆ ನೀಡಲಾಗುತ್ತಿದೆ ಎಂದು ಕೇವಲ ಭಾಷಣಗಳಲ್ಲಿ ಮಾತ್ರ ಹೇಳುತ್ತಾರೆಯೇ ಹೊರತು ನಿಜ ಜೀವನದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಅಳವಡಿಕೆ ಆಗದೆ ಇರುವುದೇ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತಾಂಡವಾಡುತ್ತಿದೆ.

ಗ್ರಾಮದಲ್ಲಿ ಚರಂಡಿಯೇ ಇಲ್ಲ: ಸರ್ಕಾರ ವಿಶೇಷ ಅನುದಾನದ ಅಡಿಯಲ್ಲಿ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ 21ನೇ ಶತಮಾನ ಕಳೆದರೂ ಸಹ ಗ್ರಾಮದಲ್ಲಿ ಇದುವರೆಗೂ ಚರಂಡಿಯೇ ಇಲ್ಲದ ಗ್ರಾಮವಾಗಿದೆ. ಗ್ರಾಮಸ್ಥರು ಮನೆಗಳಲ್ಲಿ ಬಳಕೆ ಮಾಡಿದ ಕೊಳಚೆ ನೀರನ್ನು ಎಲ್ಲಿಗೆ ಹರಿಯಬಿಡುವುದು ಎನ್ನುವುದು ಗ್ರಾಮಸ್ಥರ ಯಕ್ಷಪ್ರಶ್ನೆಯಾಗಿದೆ.

ಸಾರಿಗೆ: ರಾಷ್ಟ್ರೀಯ ಹೆದ್ದಾರಿ 209 ರಸ್ತೆ ಬದಿಯ ಅಡ್ಡರಸ್ತೆಯಲ್ಲಿರುವ ಚೆಲುವನಹಳ್ಳಿ ಗ್ರಾಮಕ್ಕೆ ಒಂದೂವರೆ ಕಿ.ಮೀ. ದೂರದಲ್ಲಿ ಗ್ರಾಮವಿದೆ. ಗ್ರಾಮದಲ್ಲಿ 90 ಕುಟುಂಬಗಳು ವಾಸವಿದ್ದು, ಸಾವಿರಕ್ಕೂ ಹೆಚ್ಚು ಜನಸಂಂಖ್ಯೆ ಹೊಂದಿದೆ. ವಿದ್ಯಾರ್ಥಿಗಳು, ಶಾಲಾ ಕಾಲೇಜಿಗೆ ತೆರಳಲು ಸಾರಿಗೆ ಬಸ್‌ ಸೌಕರ್ಯವಿಲ್ಲದೆ ನಡೆದುಕೊಂಡು ಹೋಗುವಂತಾಗಿದೆ. ಕೂಡಲೇ ಸಾರಿಗೆ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಸಾರಿಗೆ ಸಂಪರ್ಕ ಕಲ್ಪಿಸುವ ಮೂಲಕ ಗ್ರಾಮದ ವಿದ್ಯಾರ್ಥಿಗಳ ಅನುಕೂಲ ಮಾಡಿಕೊಡಬೇಕು.

Advertisement

ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತಾಯ: ಕಳೆದ 20 ವರ್ಷಗಳಿಂದ ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳನ್ನು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯ ಮಾಡಿದರೂ ಸಹ ಚುನಾಯಿತ ಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಅವರು ಚುನಾವಣಾ ಸಂದರ್ಭದಲ್ಲಿ ಬರುತ್ತಾರೆ. ಮತ ಕೇಳಿ ಮತ್ತೆ ಗ್ರಾಮದ ಕಡೆ ಮುಖವನ್ನೇ ಮಾಡುವುದಿಲ್ಲ ಎಂದು ಗ್ರಾಮಸ್ಥರಾದ ಗುರುಸ್ವಾಮಿ ಆರೋಪಿಸಿದರು.

ಶಾಸಕರ ಭರವಸೆ: ಗ್ರಾಮಸ್ಥರು ಹನೂರು ಶಾಸಕ ಆರ್‌.ನರೇಂದ್ರ ಅವರನ್ನು ಖುದ್ದು ಭೇಟಿಯಾಗಿ ಗ್ರಾಮದ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಮತ್ತು ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದ ವೇಳೆ ರಸ್ತೆ ನಿರ್ಮಾಣಕ್ಕೆ ಈಗಾಗಲೇ 1.50 ಕೋಟಿ ರೂ. ಹಣ ಮಂಜೂರು ಮಾಡಿದ್ದು, ಟೆಂಡರ್‌ ಪೂರ್ಣಗೊಂಡ ಕೂಡಲೇ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆ ನೀಡಿರುವುದಾಗಿ ಗ್ರಾಮದ ಬಸವಣ್ಣ ಹೇಳಿದ್ಧಾರೆ.

ಗ್ರಾಮದಲ್ಲಿ ನಿರಂತರ ವಿದ್ಯುತ್‌ ಪೂರೈಕೆಗೆ ಗ್ರಾಪಂ ವತಿಯಿಂದ ವಿದ್ಯುತ್‌ ಪರಿಕರಗಳನ್ನು ಖರೀದಿ ಮಾಡಿ ಜೋಡಣೆ ಮಾಡಲಾಗಿದೆ. ವಿದ್ಯುತ್‌ ಸಂಪರ್ಕ ಕೊಡಿಸುವುದು ಬಾಕಿ ಉಳಿದಿದೆ. ಕೆಟ್ಟಿರುವ ನೀರಿನ ಮೋಟಾರ್‌ ದುರಸ್ತಿ ಮಾಡಿದ್ದು, ನಾಳೆಯೇ ಜೋಡಣೆ ಮಾಡಿ ನಿರಂತರ ನೀರು ಪೂರೈಕೆ ಮಾಡಲಾಗ ವುದು.
-ಸತೀಶ್‌, ಧನಗೆರೆ ಪಿಡಿಒ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next