Advertisement

ಚೇಳೂರು: ಹೊಸ ಜೈಲು ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭ

04:49 AM Feb 11, 2019 | |

ಮಹಾನಗರ: ಮುಡಿಪು ಸಮೀಪ ಬಂಟ್ವಾಳ ತಾಲೂಕಿನ ಇರಾ- ಚೇಳೂರು- ಕುರ್ನಾಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಸಜ್ಜಿತ ಜೈಲು ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಕೊನೆಗೂ ನಗರದಿಂದ ಜೈಲನ್ನು ಹೊರ ವಲಯಕ್ಕೆ ಸ್ಥಳಾಂತರಿಸುವ ಕನಸು ನನಸಾಗಲಿದೆ.

Advertisement

ಚೇಳೂರಿನಲ್ಲಿ ಜೈಲು ನಿರ್ಮಾಣಕ್ಕಾಗಿ ಮೀಸಲಿರಿಸಿರುವ 67.87 ಎಕ್ರೆ ಜಮೀನಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆ ವತಿಯಿಂದ ಆವರಣ ಗೋಡೆಯನ್ನು ನಿರ್ಮಾಣ ಮಾಡಿ ನಿವೇಶನವನ್ನು ಭದ್ರ ಪಡಿಸಲಾಗಿದೆ. ವಾರದ ಹಿಂದೆ ರಾಜ್ಯ ಬಂಧೀಖಾನೆ ಇಲಾಖೆಯ ಡಿಜಿಪಿ ಎನ್‌.ಎಸ್‌. ಮೇಘರಿಕ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸುವಂತೆ ಸೂಚಿಸಿದ್ದರು.

ನಗರದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ, ಆಧುನಿಕ ಹಾಗೂ ಮಾದರಿ ಜೈಲು ನಿರ್ಮಾಣ ಮಾಡಲಾಗುವುದು ಎಂದು ಎರಡು ವರ್ಷಗಳ ಹಿಂದೆ 2017ರ ಮೇ 3ರಂದು ಕೊಡಿಯಾಲಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದ ಆಗಿನ ಬಂದೀಖಾನೆ ಇಲಾಖೆಯ ಡಿಜಿಪಿ ಎಚ್.ಎನ್‌. ಸತ್ಯನಾರಾಯಣ ಅವರು ಘೋಷಿಸಿದ್ದರು. ಇದಕ್ಕಾಗಿ 2017ರ ಬಜೆಟ್‌ನಲ್ಲಿ 7.5 ಕೋಟಿ ರೂ. ಒದಗಿಸಿರುವುದಾಗಿಯೂ ತಿಳಿಸಿದ್ದರು. ಅನಂತರ ಎರಡು ವರ್ಷಗಳ ಅವಧಿಯಲ್ಲಿ ಚೇಳೂರಿನಲ್ಲಿರುವ ನಿವೇಶನಕ್ಕೆ ಆವರಣ ಗೋಡೆಯನ್ನು ನಿರ್ಮಿಸಿ ನಿಗದಿತ ಜಾಗ ಇನ್ನೊಬ್ಬರ ವಶವಾಗದಂತೆ ಭದ್ರ ಪಡಿಸಲಾಗಿದೆ.

ಅಂದಾಜು ವೆಚ್ಚ ಏರಿಕೆ ಸಾಧ್ಯತೆ
ಅಖಿಲ ಭಾರತ ಕಾರಾಗೃಹ ಕೈಪಿಡಿಯಲ್ಲಿರುವ ಮಾರ್ಗಸೂಚಿ ಪ್ರಕಾರ ನೂತನ ಜೈಲಿನ ಯೋಜನೆಯನ್ನು ತಯಾರಿಸಲಾಗಿದೆ.

ಪ್ರಸ್ತಾವಿತ ಜೈಲು ಪ್ರಾರಂಭಿಕ ಹಂತದಲ್ಲಿ 1,000 ಮಂದಿ ಕೈದಿಗಳನ್ನು ಇರಿಸುವ ಸಾಮರ್ಥ್ಯ ಹೊಂದಲಿದ್ದು, ಕ್ರಮೇಣ ಅದನ್ನು 1,400 ಕ್ಕೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

Advertisement

ಗರಿಷ್ಠ ಭದ್ರತೆಯ ಬೇಲಿ, ದ್ವಾರದಲ್ಲಿ ಮೊಳೆ ಜೋಡಣೆ, ಆಸ್ಪತ್ರೆ, ಗ್ರಂಥಾಲಯ, ಹೆಲಿಪ್ಯಾಡ್‌, ಕೈದಿಗಳಿಗೆ ಕೆಲಸ ಮಾಡಲು ಉದ್ಯಮ ಘಟಕ, ಸಾಕಷ್ಟು ಸಿಬಂದಿ ನೇಮಕ ಮತ್ತು ಸಿಬಂದಿ ವಸತಿ ಗೃಹ, ವೀಡಿಯೋ ಕಾನ್ಫರೆನ್ಸಿಂಗ್‌ ಸೌಲಭ್ಯಗಳನ್ನು ಹೊಂದಿರುತ್ತದೆ.

ಎರಡು ವರ್ಷಗಳ ಹಿಂದೆ 200 ಕೋಟಿ ರೂ. ಇದ್ದ ಅಂದಾಜು ವೆಚ್ಚ ಈಗ 250ರಿಂದ 280 ಕೋಟಿ ರೂ. ಗೇರುವ ಸಾಧ್ಯತೆ ಇದೆ ಎಂದು ಬಂದೀಖಾನೆ ಇಲಾಖೆ ಲೆಕ್ಕ ಹಾಕಿದೆ.

ಸಾಮರ್ಥ್ಯ 210; ಇರುವ ಕೈದಿಗಳು 362
ಕೊಡಿಯಾಲಬೈಲ್‌ನಲ್ಲಿರುವ ಜೈಲು ಕೈದಿಗಳಿಂದ ತುಂಬಿದೆ. ಜೈಲಿನ ಸಾಮರ್ಥ್ಯ 210. ಆದರೆ ಈಗ 351 ಪುರುಷರು, 7 ಮಂದಿ ಮಹಿಳೆಯರು ಮತ್ತು ನಾಲ್ವರು ಮಕ್ಕಳು (1 ಹೆಣ್ಣು ಮತ್ತು 3 ಗಂಡು) ಸಹಿತ ಒಟ್ಟು 362 ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ. ಅವರಲ್ಲಿ ಸುಮಾರು 50 ಮಂದಿ ಹಳೆ ಜೈಲಿನಲ್ಲಿ ಹಾಗೂ ಉಳಿದವರು ಹೊಸ ಜೈಲಿನಲ್ಲಿದ್ದಾರೆ. ಎರಡು ವರ್ಷಗಳ ಹಿಂದೆ ಒಂದು ಬಾರಿ ಇಲ್ಲಿನ ಕೈದಿಗಳ ಸಂಖ್ಯೆ 489ರ ವರೆಗೂ ತಲುಪಿತ್ತು. ಇದಲ್ಲದೆ ಭದ್ರತೆ ಮತ್ತು ಸುರಕ್ಷೆಯ ಕಾರಣದಿಂದ ಬೇರೆ ಜೈಲುಗಳಿಗೆ ವರ್ಗಾವಣೆಗೊಂಡಿರುವ ಕೆಲವು ಮಂದಿ ಕೈದಿಗಳಿದ್ದಾರೆ.

110 ಕೋಟಿ ರೂ. ಕಾಮಗಾರಿ
ಜೈಲು ಕಟ್ಟಡವನ್ನು 3 ಹಂತಗಳಲ್ಲಿ ನಿರ್ಮಿಸಿ 3- 4 ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಮೊದಲ ಹಂತದಲ್ಲಿ 110 ಕೋಟಿ ರೂ. ಮೊತ್ತದ ಕಾಮಗಾರಿಗೆ ಟೆಂಡರ್‌ ಸಿದ್ಧಪಡಿಸಲಾಗಿದ್ದು, ಅದನ್ನು ಆಡಳಿತಾತ್ಮಕ ಅನುಮೋದನೆಗಾಗಿ ಕಳುಹಿಸಲಾಗಿದೆ. ಟೆಂಡರ್‌ಗೆ ಶೀಘ್ರ ಆಡಳಿತಾತ್ಮಕಅನುಮೋದನೆ ಲಭಿಸುವ ನಿರೀಕ್ಷೆ ಇದೆ.

ಆಡಳಿತಾತ್ಮಕ ಮಂಜೂರಾತಿ
ಹೊಸ ಜೈಲು ನಿರ್ಮಾಣ ಮಾಡುವ ಜಾಗಕ್ಕೆ ಆವರಣ ಗೋಡೆಯನ್ನು ಈಗಾಗಗಲೇ ಮೊದಲ ಹಂತದಲ್ಲಿ 110 ಕೋಟಿ ರೂ.ಗಳ ಕಾಮಗಾರಿಗೆ ಟೆಂಡರ್‌ ತಯಾರಿಸಿ ಆಡಳಿತಾತ್ಮಕ ಅನುಮೋದನೆಗಾಗಿ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಸರಕಾರದಿಂದ ಶೀಘ್ರ ಆಡಳಿತಾತ್ಮಕ ಮಂಜೂರಾತಿಯನ್ನು ನಿರೀಕ್ಷಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕಾಮಗಾರಿಯನ್ನು ಆರಂಭಿಸಲಾಗುವುದು.
– ಯಶವಂತ್‌,
ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್‌ ಎಂಜಿನಿಯರ್‌

ಹೊಸ ಜೈಲು ನಿರ್ಮಾಣದಿಂದ
ಇತ್ತೀಚೆಗೆ ಡಿಜಿಪಿ ಎನ್‌.ಎಸ್‌. ಮೇಘರಿಕ್‌ ಅವರು ಮುಡಿಪು ಸಮೀಪದ ಚೇಳೂರಿನಲ್ಲಿರುವ ಪ್ರಸ್ತಾವಿತ ಜೈಲು ನಿರ್ಮಾಣದ ನಿವೇಶನವನ್ನು ಮತ್ತು ಯೋಜನೆಯ ನೀಲ ನಕ್ಷೆಯನ್ನು ಪರಿಶೀಲಿಸಿದ್ದಾರೆ. ಹಣ ಬಿಡುಗಡೆ ಆಗಿದ್ದು, ಟೆಂಡರ್‌ ಪ್ರಕ್ರಿಯೆಯನ್ನು ಶೀಘ್ರ ಪೂರ್ತಿಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಆದಷ್ಟು ಬೇಗ ಹೊಸ ಜೈಲು ನಿರ್ಮಾಣವಾದರೆ ಎಲ್ಲರಿಗೂ ಅನುಕೂಲ. 
– ಟಿ.ಆರ್‌. ಸುರೇಶ್‌,
ಪೊಲೀಸ್‌ ಕಮಿಷನರ್‌, ಮಂಗಳೂರು.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next