“ಇಲ್ಲಿ ನಡೆಯುವ ಪ್ರತಿ ಕೊಲೆಯ ಹಿಂದೆಯೂ ಒಂದು ನಗುವಿದೆ..’ – ಹೀಗೆ ಹೇಳಿ ನಕ್ಕರು ನಿರ್ದೇಶಕ ಆನಂದ್ ರಾಜ್. ಅವರ ನಗುವಿಗೆ ಕಾರಣ “ಶೆಫ್ ಚಿದಂಬರ’. ಸದ್ಯ ಟ್ರೇಲರ್ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರ ಜೂನ್ 14ಕ್ಕೆ ತೆರೆಕಾಣುತ್ತಿದೆ.
ಈ ಚಿತ್ರದ ಮೇಲೆ ನಿರ್ದೇಶಕರು ತುಂಬು ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ಸಿನಿಮಾದ ಕಥೆ. “ಇದು ರೆಗ್ಯುಲರ್ ಕಂಟೆಂಟ್ ಇರುವ ಸಿನಿಮಾವಲ್ಲ. ಇದೊಂದು ಕಾಮಿಡಿ ಥ್ರಿಲ್ಲರ್ ಚಿತ್ರ. ಇಲ್ಲೊಂದಿಷ್ಟು ಕೊಲೆಗಳು ನಡೆಯುತ್ತವೆ. ಅದರ ಹಿಂದೊಂದು ನಗುವಿದೆ. ಸಾವಿನಲ್ಲೂ ನಗು ಹೇಗೆ ಎಂದು ನೀವು ಕೇಳಬಹುದು. ಅದೇ ಈ ಸಿನಿಮಾದ ವಿಶೇಷತೆ’ ಎನ್ನುತ್ತಾರೆ ಆನಂದ್.
ನಿರ್ದೇಶಕ ಆನಂದ ರಾಜ್ ತಮ್ಮ ಚೊಚ್ಚಲ ಚಿತ್ರವಾದ “ರಾಘು’ವಿನಲ್ಲಿ ಹೊಸ ಪ್ರಯೋಗ ಮಾಡಿ ಗಮನ ಸೆಳೆದಿದ್ದರು. ಇಡೀ ಚಿತ್ರವನ್ನು ಒಂದೇ ಪಾತ್ರವನ್ನಿಟ್ಟು ಚಿತ್ರೀಕರಿಸಿದ್ದರು. ಚಿತ್ರಕ್ಕೆ ಮೆಚ್ಚುಗೆ ಜೊತೆಗೆ ಕಮರ್ಷಿಯಲ್ ಆಗಿಯೂ ಆ ಚಿತ್ರ ನಿರ್ಮಾಪಕರ ಮೊಗದಲ್ಲಿ ನಗು ತಂದಿತ್ತು. ಈಗ “ಶೆಫ್ ಚಿದಂಬರ’ ಮೂಲಕ ಮತ್ತೂಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ. “ಇದು ಡಾರ್ಕ್ ಕಾಮಿಡಿ ಸಿನಿಮಾ. ಕನ್ನಡದಲ್ಲಿ ಈ ತರಹದ ಜಾನರ್ ಬಂದಿರೋದು ಕಡಿಮೆ. ಅದಕ್ಕಿಂತ ಹೆಚ್ಚಾಗಿ ಶೆಫ್ ಚಿದಂಬರದಂತಹ ಕಥೆ ಬಂದೇ ಇಲ್ಲ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಡಾರ್ಕ್ ಹ್ಯೂಮರ್ ಜಾನರ್‌ನ ಚಿತ್ರ. ಅನಿರುದ್ಧ್ ಅವರು ಶೆಫ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಧಿ ಸುಬ್ಬಯ್ಯ ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಚೆಲ್ ಡೇವಿಡ್ ಅವರ ಪಾತ್ರ ಕೂಡ ವಿಭಿನ್ನವಾಗಿದೆ’ ಎನ್ನುತ್ತಾರೆ. ಶೆಫ್ ಚಿದಂಬರನ ಹಿಂದೆ ಒಂದು ಸ್ಟ್ರಾಂಗ್ ಟೀಂ ಇದೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ.
ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನ, ಆಶಿಕ್ ಹುಸಗುಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ತಾರಾಬಳಗದಲ್ಲಿ ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಮುಂತಾದವರು ನಟಿಸಿದ್ದಾರೆ ಎನ್ನುವುದು ಆನಂದ್‌ರಾಜ್ ಮಾತು.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.