ಬಂಟ್ವಾಳ: ಬಂಟ್ವಾಳ ತಾಲೂಕಿನ ಮೂರು ಕಡೆ ಚಿರತೆ ಕಾಣಸಿಕ್ಕಿದ ಬಗ್ಗೆ ದೂರು ಬಂದಿದ್ದು, ಕಾರ್ಯಾಚರಣೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರ ಸುರೇಶ್ ತಿಳಿಸಿದ್ದಾರೆ.
ಇರಾ ಗ್ರಾಮದಲ್ಲಿ ಒಂದು ಹೆಣ್ಣು ಚಿರತೆ ಎರಡು ಮರಿಗಳ ಸಹಿತ ಇರುವುದಾಗಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ ಮೂರು ದಿನಗಳ ಹಿಂದೆ ಮಾಹಿತಿ ನೀಡಿದ್ದು, ಅದನ್ನು ಹಿಡಿಯಲು ಜ. 26ರಂದು ಬೋನು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
ವಾರದ ಹಿಂದೆ ಕರಿಯಂಗಳ ಗ್ರಾಮದ ಪಳ್ಳಿಪಾಡಿ ಗುಡ್ಡ ಪ್ರದೇಶದಲ್ಲಿ ಚಿರತೆ ಇರುವುದಾಗಿ ತಾ.ಪಂ.ಸದಸ್ಯ ಯಶವಂತ ಪೊಳಲಿ ಮಾಹಿತಿ ನೀಡಿದ್ದರು. ಅದರಂತೆ ಅರಣ್ಯ ಇಲಾಖೆ ಸಿಬಂದಿ ಬೋನು ಇಟ್ಟು ಅದನ್ನು ಹಿಡಿಯುವ ಪ್ರಯತ್ನ ನಡೆಸಿದ್ದರೂ ಪುನಃ ಕಾಣಿಸಿಕೊಂಡಿಲ್ಲ. ಅಲ್ಲಿಟ್ಟಿದ್ದ ಬೋನನ್ನು ಅರಣ್ಯ ಇಲಾಖೆ ಇರಾ ಗ್ರಾಮಕ್ಕೆ ಇಂದು ಸಾಗಿಸಿದೆ.
ಮೇರಮಜಲು ಗ್ರಾಮದ ಕೊಡ್ಮಾಣ್ ಪ್ರದೇಶದಲ್ಲಿಯೂ ಚಿರತೆ ಇರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು ಅದನ್ನು ಹಿಡಿಯುವ ಪ್ರಯತ್ನ ಅರಣ್ಯ ಇಲಾಖೆ ಮಾಡಿದೆ.
ಕೊಡ್ಮಾಣ್‌ನಲ್ಲಿ ಮೂರು ವರ್ಷಗಳ ಹಿಂದೆ ಚಿರತೆಯೊಂದು ನಾಯಿಯನ್ನು ಹಿಡಿಯುವ ಪ್ರಯತ್ನದಲ್ಲಿ ಬಾವಿಗೆ ಬಿದ್ದಿತ್ತು. ಉಳಿ ಗ್ರಾಮ ಕಕ್ಕೆಪದವಿನಲ್ಲಿ ಈ ಹಿಂದೆ ಚಿರತೆ ಬೋನಿಗೆ ಬಿದ್ದಿತ್ತು. ಅದನ್ನು ಪಿಲಿಕುಳಕ್ಕೆ ಒಪ್ಪಿಸಲಾಗಿತ್ತು ಎಂಬುದಾಗಿ ವಿವರಿಸಿದ್ದಾರೆ.