ಭೋಪಾಲ್ : ಕಳೆದ ವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ ದಾರಿ ತಪ್ಪಿದ ಗಂಡು ಚೀತಾವನ್ನು ನೆರೆಯ ಉತ್ತರ ಪ್ರದೇಶದ ಅರಣ್ಯಕ್ಕೆ ದಾಟಲು ಮುಂದಾಗಿದ್ದಾಗ ರಕ್ಷಿಸಿ ಉದ್ಯಾನವನಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಈ ತಿಂಗಳಲ್ಲಿ ಇದು ಎರಡನೇ ಬಾರಿಗೆ ದಾರಿ ತಪ್ಪಿದ್ದ ಚೀತಾವನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಮರಳಿ ಕರೆತರಲಾಗಿದೆ.
ಪವನ್ ಎಂದು ಮರುನಾಮಕರಣಗೊಂಡಿರುವ ಚೀತಾವನ್ನು ಶಿವಪುರಿ ಜಿಲ್ಲೆಯ ಕರೇರಾ ಅರಣ್ಯದಲ್ಲಿತಡೆದ ನಂತರ, ಶನಿವಾರ ರಾತ್ರಿ 9.30 ರ ಸುಮಾರಿಗೆ ಕುನೋ ರಾಷ್ಟ್ರೀಯ ಉದ್ಯಾನವನದ ಪಾಲ್ಪುರ ಅರಣ್ಯದಲ್ಲಿ ಬಿಡಲಾಯಿತು ಎಂದು ಕೆಎನ್‌ಪಿಯ ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ಪಿಟಿಐಗೆ ತಿಳಿಸಿದ್ದಾರೆ.
ಚೀತಾವನ್ನು ರಕ್ಷಿಸುವ ವೇಳೆ ಉತ್ತರ ಪ್ರದೇಶದ ಝಾನ್ಸಿ ಕಡೆಗೆ ತೆರಳುತ್ತಿತ್ತು. ಆ ಸಮಯದಲ್ಲಿ ಕೆಎನ್‌ಪಿಯಿಂದ ಸುಮಾರು 150 ಕಿಮೀ ದೂರದಲ್ಲಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಮಹತ್ವಾಕಾಂಕ್ಷೆಯ ಚೀತಾಗಳ ಮರುಪರಿಚಯ ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್ 17, 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತರಲಾಗಿದ್ದ ಐದು ಹೆಣ್ಣು ಮತ್ತು ಮೂರು ಗಂಡು ಚೀತಾ ಗಳನ್ನು ವಿಶೇಷ ಆವರಣಗಳಿಗೆ ಬಿಡುಗಡೆ ಮಾಡಿದ್ದರು. ಅವುಗಳಲ್ಲಿ ಒಂದು ಸಶಾ ಮಾರ್ಚ್ 27 ರಂದು ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿದೆ.
ಸಿಯಾಯಾ ಎಂಬ ಇನ್ನೊಂದು ಚೀತಾ ಇತ್ತೀಚೆಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಈ ವರ್ಷದ ಫೆಬ್ರವರಿ 18 ರಂದು, ಏಳು ಗಂಡು ಮತ್ತು ಐದು ಹೆಣ್ಣುಗಳನ್ನು ಒಳಗೊಂಡ 12 ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ಕೆಎನ್‌ಪಿಗೆ ತರಲಾಗಿದೆ.