ಭೋಪಾಲ್: ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ನೀರ್ವಾ 4 ಮರಿಗಳಿಗೆ ಜನ್ಮ ನೀಡಿದೆ ಎಂದು ರಾಜ್ಯ ಅರಣ್ಯ ಇಲಾಖೆ ಸೋಮವಾರ(ನ25) ತಿಳಿಸಿದೆ.ಮರಿಗಳ ನಿರ್ದಿಷ್ಟ ಸಂಖ್ಯೆಯನ್ನು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.
ಕಳೆದ ತಿಂಗಳು, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಹೆಣ್ಣು ಚೀತಾವೊಂದು ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಮರಿಗಳಿಗೆ ಜನ್ಮ ನೀಡುವ ನಿರೀಕ್ಷೆಯಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು.
ಕುನೋದಲ್ಲಿ ಮರಿಗಳ ಜನನದ ವರದಿಗಳ ಬಗ್ಗೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಸೀಮ್ ಶ್ರೀವಾಸ್ತವ ಅವರು ಚೀತಾ ನೀರ್ವಾ ಜನಿಸಿದ ಮರಿಗಳ ಸಂಖ್ಯೆಯ ಬಗ್ಗೆ ಉದ್ಯಾನವನದಿಂದ ದೃಢೀಕರಣದವರೆಗೆ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ ಎಂದು ಪಿಟಿಐಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು ಕೆಎನ್‌ಪಿಯಲ್ಲಿ 17 ಚೀತಾ ಮರಿಗಳು ಜನಿಸಿದ್ದು, ಅವುಗಳಲ್ಲಿ 12 ಮರಿಗಳು ಬದುಕುಳಿದಿದ್ದು, ಕೆಎನ್‌ಪಿಯಲ್ಲಿ ಚೀತಾಗಳ ಸಂಖ್ಯೆ 24 ಎಂದು ಕೊನೆಯ ವರದಿ ತಿಳಿಸಿದೆ.
2022, ಸೆಪ್ಟೆಂಬರ್ 17 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ಎಂಟು ಚೀತಾಗಳನ್ನು (ಐದು ಹೆಣ್ಣು ಮತ್ತು ಮೂರು ಗಂಡು) ಕೆ ಎನ್ ಪಿಯಲ್ಲಿ ಬಿಡುಗಡೆ ಮಾಡಿದ್ದರು. ವಿಶ್ವದ ಮೊದಲ ಖಂಡಾಂತರ ಸ್ಥಳಾಂತರದ ಭಾಗವಾಗಿ ಸುಮಾರು ಎಂಟು ದಶಕಗಳ ನಂತರ ಚೀತಾ ಗಳನ್ನು ತರಲಾಗಿತ್ತು.
ಆ ಬಳಿಕ 2023 ಫೆಬ್ರವರಿಯಲ್ಲಿ, ಚೀತಾಗಳನ್ನು ದೇಶಕ್ಕೆ ಮರುಪರಿಚಯಿಸುವ ಭಾರತ ಸರಕಾರದ ಯೋಜನೆಯ ಭಾಗವಾಗಿ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚೀತಾಗಳನ್ನು ತರಲಾಗಿತ್ತು. ಆ ಪೈಕಿ ಕೆಲವು ವಾತಾವರಣಕ್ಕೆ ಹೊಂದಿಕೊಳ್ಳದೇ ಸಾವನ್ನಪ್ಪಿದ್ದವು. ಈಗ ಸಂಖ್ಯೆ ವೃದ್ಧಿಯಾಗಿದ್ದು, ಹೆಚ್ಚಿನ ಚೀತಾಗಳು ಆರೋಗ್ಯವಾಗಿ ಹೊಂದಿಕೊಂಡಿವೆ.