ಭೋಪಾಲ್: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ‘ಗಾಮಿನಿ’ ಎಂಬ ಚೀತಾ ಭಾನುವಾರ ಐದು ಮರಿಗಳಿಗೆ ಜನ್ಮ ನೀಡಿದ್ದು, ದೇಶದ ಒಟ್ಟು ಚೀತಾಗಳ ಸಂಖ್ಯೆ 26 ಕ್ಕೆ ಏರಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.
ಎಕ್ಸ್ ನಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ , ”ಹೈ ಫೈವ್, ಕುನೋ! ದಕ್ಷಿಣ ಆಫ್ರಿಕಾದ ತ್ಸ್ವಾಲು ಕಲಹರಿ ಮೀಸಲು ಪ್ರದೇಶದಿಂದ ತರಲಾದ ಸುಮಾರು 5 ವರ್ಷ ಪ್ರಾಯದ ಹೆಣ್ಣು ಚೀತಾ ಗಾಮಿನಿ ಇಂದು 5 ಮರಿಗಳಿಗೆ ಜನ್ಮ ನೀಡಿದೆ. ಭಾರತದಲ್ಲಿ ಜನಿಸಿದ ಚೀತಾ ಮರಿಗಳ ಸಂಖ್ಯೆ ಈಗ 13 ಆಗಿದೆ ಎಂದು ತಿಳಿಸಿದ್ದಾರೆ.
“ಚೀತಾಗಳಿಗೆ ಒತ್ತಡ ರಹಿತ ವಾತಾವರಣವನ್ನು ಒದಗಿಸಿದ ಅರಣ್ಯಾಧಿಕಾರಿಗಳು, ಪಶುವೈದ್ಯರು ಮತ್ತು ಕ್ಷೇತ್ರ ಸಿಬಂದಿಯ ತಂಡ ಸೇರಿ ಎಲ್ಲರಿಗೂ ಅಭಿನಂದನೆಗಳು, ಇದು ಯಶಸ್ವಿ ಸಂಯೋಗ ಮತ್ತು ಮರಿಗಳ ಜನನಕ್ಕೆ ಕಾರಣವಾಯಿತು. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮರಿಗಳೂ ಸೇರಿದಂತೆ ಒಟ್ಟು ಚಿರತೆಗಳ ಸಂಖ್ಯೆ 26. ಗಾಮಿನಿಯ ಪರಂಪರೆಯು ಮುಂದೆ ಸಾಗುತ್ತಿದೆ. ತನ್ನ ಮುದ್ದಾಗಿರುವ ಮರಿಗಳನ್ನು ಪರಿಚಯಿಸುತ್ತಿದೆ, ”ಎಂದು ಕೇಂದ್ರ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಮಹತ್ವಾಕಾಂಕ್ಷೆಯ ಚೀತಾ ಮರುಪರಿಚಯ ಯೋಜನೆಯಡಿಯಲ್ಲಿ, ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಒಳಗೊಂಡ ಎಂಟು ನಮೀಬಿಯಾದ ಚೀತಾಗಳನ್ನು 2022 ರ ಸೆಪ್ಟೆಂಬರ್ 17 ರಂದು ಕುನೊ ರಾಷ್ಟ್ರೀಯ ಉದ್ಯಾನವನದ ಆವರಣಕ್ಕೆ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿ 2023 ರಲ್ಲಿ, ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚೀತಾಗಳನ್ನು ಉದ್ಯಾನವನಕ್ಕೆ ತರಲಾಗಿತ್ತು.. ಗಾಮಿನಿ ದಕ್ಷಿಣ ಆಫ್ರಿಕಾದಿಂದ ತಂದ ಗುಂಪಿನ ಭಾಗವಾಗಿದೆ.