ಭೋಪಾಲ: ಎಲ್ಲವೂ ಅಂದುಕೊಂಡಂತೆ ನಡೆದರೆ, ಬರೋಬರಿ 70 ವರ್ಷಗಳ ಬಳಿಕ ಭಾರತದಲ್ಲಿ ಚೀತಾವನ್ನು ನೋಡುವ ಅವಕಾಶ ಒದಗಿಬರಲಿದೆ!
ಹೌದು. ಬಿರುಸಿನ ಓಟಕ್ಕೆ ಹೆಸರಾದ ಚೀತಾವನ್ನು ಭಾರತದಲ್ಲಿ “ಅಳಿವು ಕಂಡ ಪ್ರಾಣಿ’ ಎಂದು ಘೋಷಿಸಿದ್ದರೂ ಅದನ್ನು ಇದೇ ನವೆಂಬರ್‌ನಲ್ಲಿ ಮರುಪರಿಚಯಿಸಲು ನಿರ್ಧರಿಸಲಾಗಿದೆ. ದಕ್ಷಿಣ ಆಫ್ರಿಕಾದಿಂದ ಚೀತಾವನ್ನು ಕರೆತರುವ ಪ್ರಕ್ರಿಯೆ ಆರಂಭವಾಗಿದ್ದು, ಅದನ್ನು ಸ್ವಾಗತಿಸಲು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನ ಸಜ್ಜಾಗಿದೆ.
ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಚೀತಾವನ್ನು ಸಾಗಿಸುತ್ತಿರುವುದು ಜಗತ್ತಿನಲ್ಲಿ ಇದೇ ಮೊದಲು. ದೇಶದಲ್ಲಿ ಕೊನೆಯ ಬಾರಿಗೆ ಚೀತಾ ಕಂಡುಬಂದಿದ್ದು ಛತ್ತೀಸ್‌ಗಢದಲ್ಲಿ.
1947ರಲ್ಲಿ ಅದರ ಸಾವಿನ ಬಳಿಕ 1952ರಲ್ಲಿ ಚೀತಾವನ್ನು “ವಿನಾಶಗೊಂಡ ಪ್ರಾಣಿ’ ಎಂದು ಘೋಷಿಸಲಾಯಿತು. ಕೆಲವು ವರ್ಷಗಳ ಹಿಂದೆ ಭಾರತೀಯ ವನ್ಯಜೀವಿ ಸಂಸ್ಥೆ (ಡಬ್ಲ್ಯುಐಐ)ಯು ಇವುಗಳನ್ನು ಮತ್ತೆ ಭಾರತಕ್ಕೆ ತರಲು ನಿರ್ಧರಿಸಿ, “ಚೀತಾ ಮರುಪರಿಚಯ ಯೋಜನೆ’ಯನ್ನು ಸಿದ್ಧಪಡಿಸಿತು. ಅಲ್ಲದೆ, ಸುಪ್ರೀಂ ಕೋರ್ಟ್ ಕೂಡ ಪ್ರಾಯೋಗಿಕವಾಗಿ ಭಾರತದ ಸೂಕ್ತ ಪ್ರದೇಶಗಳಲ್ಲಿ ಆಫ್ರಿಕನ್ ಚೀತಾಗಳನ್ನು ಪರಿಚಯಿಸಲು ಅನುಮತಿ ನೀಡಿತ್ತು.
10 ಚೀತಾಗಳ ಆಗಮನ: ಈಗ 5 ಹೆಣ್ಣು ಚೀತಾಗಳ ಸಹಿತ ಒಟ್ಟು 10 ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲು ಯೋಜಿಸಲಾಗಿದೆ. ಜತೆಗೆ ಪ್ರಸಕ್ತ ವಿತ್ತ ವರ್ಷದಲ್ಲಿ ಪ್ರಾಜೆಕ್ಟ್ ಚೀತಾಗೆ ಕೇಂದ್ರ ಸರ್ಕಾರವು 14 ಕೋಟಿ ರೂ.ಗಳನ್ನು ನೀಡಿದೆ.