ಮದ್ದೂರು: ತಾಲೂಕಿನ ಕೆಸ್ತೂರು ವ್ಯಾಪ್ತಿಯಲ್ಲಿ ಕೆರೆ ಕಟ್ಟೆಗಳ ಹೂಳು ತೆಗೆಸಿ ಮಳೆಗಾಲದಲ್ಲಿ ನೀರು ಸಂಗ್ರಹಿಸಲು 6.5 ಕೋಟಿ ರೂ. ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡುವ ಜತೆಗೆ ನಾಲೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.
ಪಟ್ಟಣದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರೈತರು ನೀರು ಪೋಲು ಮಾಡುತ್ತಿದ್ದು, ಜಲಜಾಗೃತಿ ಮೂಡಿಸಬೇಕಿದೆ. ಜಿಲ್ಲೆಯ ರೈತರು ಪ್ರತಿ ಹನಿ ನೀರನ್ನು ಸಂರಕ್ಷಿಸಿಕೊಳ್ಳುವುದು ಅನಿವಾರ್ಯ. ಜಿಲ್ಲಾದ್ಯಂತ ಈಗಾಗಲೇ ಬರಗಾಲ ವ್ಯಾಪಿಸಿದೆ. ಬಿತ್ತನೆ ಕಾಲ ಮುಗಿದರೂ ಮಳೆಯಾಗಿಲ್ಲ. ರೈತರು ಸಂಕಷ್ಟದಲ್ಲಿದ್ದು ಇದನ್ನರಿತು ನೀರು ಪೋಲಾಗದಂತೆ ಸಂರಕ್ಷಣೆ ಮಾಡುವ ಕೆಲಸವಾಗಬೇಕೆಂದರು.
ತಾಲೂಕಾದ್ಯಂತ ಕೆರೆಕಟ್ಟೆಗಳಿಗೆ ನೀರು ತುಂಬಿಸಲು 85 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಕುಡಿಯುವ ನೀರಿಗಾಗಿ ಕಾವೇರಿ ನೀರಾವರಿ ನಿಗಮದಿಂದ 250 ಕೋಟಿ ರೂ. ಹಣ ಬಿಡುಗಡೆಗೊಳಿಸಿದ್ದರು ಎಂದು ಹೇಳಿದರು.
ಕ್ರಿಯಾ ಯೋಜನೆ ಸಿದ್ಧ: ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಈಗಾಗಲೇ ಕ್ರಿಯಾಯೋಜನೆ ತಯಾರಿಸಲಾಗಿದೆ. ಕುಡಿಯುವ ನೀರು, ವಿದ್ಯುತ್, ರಸ್ತೆ, ಕಾಲೋನಿಗಳ ಅಭಿವೃದ್ಧಿ, ಕೆರೆಕಟ್ಟೆಗಳ ಹೂಳು ತೆಗೆಸುವುದು, ಏತ ನೀರಾವರಿ ಪುನಶ್ಚೇತನ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ಚಾಲನೆ ನೀಡಲಿರುವುದಾಗಿ ತಿಳಿಸಿದರು.
ಈ ವೇಳೆ ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಸದಸ್ಯರಾದ ಬೋರಯ್ಯ, ಮರಿಹೆಗಡೆ, ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯ ಮರಿಯಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಶಿವರಾಮು, ಉಪಾಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕಿ ಮಮತಾ, ಸಹಾಯಕ ನಿರ್ದೇಶಕ ಎನ್.ಶ್ರೀನಾಥ್, ಕೃಷಿ ಅಧಿಕಾರಿ ಗಿರೀಶ್‌ಗೌಡ, ತಾಂತ್ರಿಕ ಅಧಿಕಾರಿ ಮಂಜು ಇತರರಿದ್ದರು.