ಕಾರವಾರ: ನರೇಗಾ ಯೋಜನೆಯಡಿ ಸಿದ್ದಾಪುರ ತಾಪಂ ವ್ಯಾಪ್ತಿಯ ಒಟ್ಟು 23 ಗ್ರಾಪಂಗಳಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಕೋರ್ಲಕೈ, ಕೋಲಸಿರ್ಸಿ, ಹಾರ್ಸಿಕಟ್ಟಾ, ಮನಮನೆ, ಕಂವಚೂರು ಗ್ರಾಪಂಗಳಲ್ಲಿ ಹೆಚ್ಚಿನ ಪ್ರಮಾಣದ ಕೂಲಿಕಾರರು ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ತಾಪಂ ನರೇಗಾ ಸಹಾಯಕ ನಿರ್ದೇಶಕ ಡಿ.ಇ. ದಿನೇಶ್ ತಿಳಿಸಿದರು.
ಕೋಲಸಿರ್ಸಿ ಗ್ರಾಪಂನ ಮಂಡ್ಲಿಕೊಪ್ಪ ದಾಸನ ಕೆರೆ ಹೂಳೆತ್ತುವ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಯೋಜನೆಯ ಗುರಿ ತಲುಪಿದ್ದು, ಪ್ರಸಕ್ತ ಸಾಲಿನಲ್ಲಿಯೂ ಗುರಿ ತಲುಪಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಮಗ್ರ ಶಾಲಾ ಅಭಿವೃದ್ಧಿ, ಕಾಲುಸಂಕ, ಅಂಗನವಾಡಿ ಕಟ್ಟಡ ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದೀಗ ಪ್ರತಿದಿನವೂ 309 ರೂ ಕೂಲಿ ಹಾಗೂ 10 ರೂ ಸಲಕರಣೆ ವೆಚ್ಚ ಸೇರಿ ಒಟ್ಟು 319 ರೂ ಕೂಲಿಕಾರರ ಕೈ ಸೇರುತ್ತಿದೆ. ಕೂಲಿಕಾರರ ಬೇಡಿಕೆಗನುಗುಣವಾಗಿ ದುಡಿಯೋಣ ಬಾ ಅಭಿಯಾನದ ಮೂಲಕ ಕಾಮಗಾರಿಗಳನ್ನು ಯಶಸ್ವಿಗೊಳಿಸಲಾಗುತ್ತಿದೆ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 5 ಲಕ್ಷ ವೆಚ್ಚದಲ್ಲಿ ಮಂಡ್ಲಿಕೊಪ್ಪ ದಾಸನ ಕೆರೆ ಹೂಳೆತ್ತುವ ಕಾರ್ಯ ಭರದಿಂದ ಸಾಗಿದ್ದು, ಪ್ರತಿದಿನ ಸುಮಾರು 90 ಕೂಲಿಕಾರರು ಭಾಗಿಯಾಗಿದ್ದಾರೆ. ಈವರೆಗೆ ಅಂದಾಜು 429 ಮಾನವ ದಿನಗಳು ಸೃಜನೆಯಾಗಿದ್ದು, ಮಹಿಳೆಯರು, ಪುರುಷರು, ವಯಸ್ಕರು ಕೆಲಸ ನಿರ್ವಹಿಸುತ್ತಿದ್ದಾರೆ. ನರೇಗಾ ಯೋಜನೆಯಡಿ ಬೇಸಿಗೆಯಲ್ಲಿ ಕೃಷಿ ಕೆಲಸ ಕಡಿಮೆ ಇರುವುದರಿಂದ ದುಡಿಯುವ ಜನರು ಉದ್ಯೋಗ ಖಾತರಿ ಕೆಲಸ ಪಡೆದು, ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನು ಇಲ್ಲಿನ ಕೂಲಿಕಾರರಲ್ಲಿ ಬಹುತೇಕರು ಕೂಲಿ ಮಾಡಿಯೇ ಜೀವನ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇದೆ.
ಹೀಗಾಗಿ ಕೆಲವು ಗ್ರಾಪಂಗಳಲ್ಲಿ ಕೆಲಸಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ. ಆರ್ಥಿಕ ವರ್ಷದಲ್ಲಿ ಶಾಲಾ ಸಮಗ್ರ ಅಭಿವೃದ್ಧಿ, ಅಡುಗೆ ಕೋಣೆ, ಎಸ್‌ಡಬ್ಲೂಎಂ, ಕಾಲುಸಂಕ, ಪಿಂಕ್ ಶೌಚಾಲಯ, ಕಾಲುವೆ ನಿರ್ಮಾಣ, ಕೆರೆ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ.
ಕೂಲಿಕಾರ ಮಹಿಳೆ ಸಾವಿತ್ರಿ ರಾಮಚಂದ್ರ ಗೊಂಡ ಹೇಳುವಂತೆ ಕಳೆದ ನಾಲ್ಕು ವರ್ಷಗಳಿಂದ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿದ್ದೇನೆ. ನಮ್ಮಂತ ಕೂಲಿಕಾರರಿಗೆ ಈ ಯೋಜನೆಯಿಂದ ಬದುಕು ಕಟ್ಟಿಕೊಳ್ಳಲು ಸಹಾಯಕವಾಗಿದೆ. ನನ್ನಂತೆಯೇ ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಸಿಬ್ಬಂದಿ, ಬಿಎಫ್ ಟಿ ಮತ್ತಿತರರು ಇದ್ದರು.