ದೇವನಹಳ್ಳಿ: ಯಾವುದೇ ವಸ್ತುವನ್ನು ಕೊಳ್ಳುವಾಗ ಐಎಸ್‌ಐ ಮಾರ್ಕ್ ಅನ್ನು ಪ್ರತಿಯೊಬ್ಬ ಗ್ರಾಹಕನೂ ಪರೀಕ್ಷಿಸಿ, ವಸ್ತುವಿನ ಗುಣಮಟ್ಟವನ್ನು ತಿಳಿದು ಬಳಸಬೇಕು. ಇದರಿಂದ ನಿಮ್ಮ ಕುಟುಂಬದ ಸುರಕ್ಷತೆ ನಿಮ್ಮ ಕೈಯಲ್ಲೇಇರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್ ಹೇಳಿದರು.
ತಾಲೂಕಿನ ಬೀರಸಂದ್ರ ಗ್ರಾಮದ ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಂಗಳೂರಿನ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಶಾಖೆ ವತಿಯಿಂದ ನಡೆದ ಸರ್ಕಾರದ ವಿವಿಧ ಯೋಜನೆಗಳ ಮೇಲೆ ಕಾರ್ಯಗತಗೊಳಿಸುವ ಸರಕುಗಳ ಸಂಗ್ರಹಣಾ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗ್ರಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಎಲ್ಲರೂ ಬಿಎಸ್‌ಐ ತರಬೇತಿಯ ಕಾರ್ಯಾಗಾರದ ಮಹತ್ವ ಅರಿತು, ನಿಮ್ಮ ಇಲಾಖೆಗಳ ಸಿಬ್ಬಂದಿ ವರ್ಗದವರಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ವಸ್ತುವಿನ ಗುಣಮಟ್ಟದ ಅಳೆಯುವ ಐಎಸ್‌ಐ ಗುರುತಿನ ಮಹತ್ವ ಮತ್ತು ಬಿಎಸ್‌ಐ ಕೇರ್ ಆಪ್ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಐಎಸ್‌ಐ ಮಾರ್ಕ್‌ಯಿಲ್ಲದ ವಸ್ತು ಮಾರಾಟ ಅಪರಾಧ: ಪ್ರತಿ ವಸ್ತುವಿನ ಗುಣಮಟ್ಟವನ್ನು ಪರೀಕ್ಷಿಸಿ ವಸ್ತುವಿನ ಸರ್ಟಿಫಿಕೇಷನ್ ಮತ್ತು ಐಎಸ್‌ಐ ಮಾರ್ಕ್ ನೀಡುವ ಜವಾಬ್ದಾರಿ ಬಿಎಸ್‌ಐದು ಆಗಿರುತ್ತದೆ. ವಿದೇಶಿ ವಸ್ತುಗಳಿಗೂ ಸಹ ಸರ್ಟಿಫಿಕೇಷನ್ ಮತ್ತು ಐಎಸ್‌ಐ ಮಾರ್ಕ್ ನೀಡಲಾಗುತ್ತದೆ. ಐಎಸ್‌ಐ ಮಾರ್ಕ್ ಇಲ್ಲದ ವಸ್ತುಗಳ ಮಾರಾಟ ಮಾಡುವುದು, ಬಿಐಎಸ್ 2016ನೇ ಕಾಯ್ದೆಯಡಿ ಕಾನೂನಿನ ಪ್ರಕಾರ ಅಪರಾಧವಾಗಿದೆ. ಅಂತಹ ಮಾರಾಟ ಮಳಿಗೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳು ಬಿಎಸ್‌ಐ ಶಾಖೆಗೆ ತಿಳಿಸಬೇಕು ಎಂದು ತಿಳಿಸಿದರು.
ಗ್ರಾಹಕರಲ್ಲಿ ಅರಿವು ಮೂಡಿಸಿ: ಬೆಂಗಳೂರಿನ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌ಎಸ್ ಪಿಒ ಶಿವಾಂಗಿ ಮಾತನಾಡಿ, ಬಿಎಎಸ್ ಕೇರ್ ಆಪ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿ, ಯಾವುದೇ ರೀತಿಯ ವಸ್ತುವಿನ ಗುಣಮಟ್ಟ ಪತ್ತೆ ಹಚ್ಚಲು ವಸ್ತುವಿನ ಕೋಡ್ ಸ್ಕ್ಯಾನ್ ಮಾಡಿದಲ್ಲಿ, ಅದರ ಪ್ರತಿಯೊಂದು ವಿವರ ಸಿಗುತ್ತದೆ. ಅಲ್ಲದೆ, ನಮ್ಮ ಈ ಬಿಐಎಸ್ ಶಾಖೆಯು ಸಾರ್ವಜನಿಕರಲ್ಲಿ ಮುಖ್ಯವಾಗಿ ಗ್ರಾಹಕರಲ್ಲಿ ವಸ್ತುವಿನ ಐಎಸ್‌ಐ ಮಾರ್ಕ್ ಮತ್ತು ಆಲ್‌ಮಾರ್ಕ್ ಬಗ್ಗೆ ಸರ್ಕಾರದ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜಲಜೀವನ್ ಮಿಷನ್ ಸ್ಮಾರ್ಟ್ ಸಿಟೀಸ್ ಮಿಷನ್ ಹಾಗೂ ಮಾಲಿನ್ಯ ತಡೆಯುವ ಬೋರ್ಡ್‌ನ ಜೊತೆಗೂಡಿ ಗ್ರಾಹಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ವಿಜ್ಞಾನಿ ಜಯಚಂದ್ರ ಬಾಬು.ಪಿ ಸೇರಿದಂತೆ ಬೆಂ.ಗ್ರಾ ಜಿಲ್ಲೆಯ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.