ಆಳಂದ: ಕೋವಿಡ್-19 ಸೋಂಕಿನಿಂದ ತತ್ತರಿಸಿ ಹೋಗಿರುವ ಗಡಿನಾಡಿನ ಜನರಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಂಪರ್ಕ ಮತ್ತೆ ಆರಂಭವಾಗಿದ್ದರಿಂದ ಹೊರಗಿನವರು ಬರುತ್ತಿರುವುದರಿಂದ ಗಡಿನಾಡಿನ ಜನತೆಗೆ ಮತ್ತೆ ಸೋಂಕು ಆವರಿಸುವ ಭೀತಿ ಕಾಡ ತೊಡಗಿದೆ. ಮಹಾರಾಷ್ಟ್ರದಿಂದ ಬರುವ ಜನರು ಕೋವಿಡ್ ನೆಗೆಟಿವ್ ವರದಿ ತೋರಿಸಿದರೆ ಮಾತ್ರ ಪ್ರವೇಶ ನೀಡಬೇಕು. ವರದಿ ಇಲ್ಲದವರಿಗೆ ತಪಾಸಣೆ ನಡೆಸಿ ವ್ಯಾಕ್ಸಿನ್ ನೀಡಬೇಕು ಎಂಬ ಜಿಲ್ಲಾ ಧಿಕಾರಿಗಳ ಕಟ್ಟಪ್ಪಣೆಯಿದ್ದಾಗಲೂ ಸಹ ಗಡಿ ಸರಹದಿನಲ್ಲಿ ಸೂಕ್ತ ಕಾರ್ಯಾಚರಣೆ ಆಗದಿರುವುದು ಸ್ಥಳೀಯ ಜನರ ಭೀತಿಗೆ ಮತ್ತಷ್ಟು ಕಾರಣವಾಗಿದೆ.
ಚೆಕ್‌ಪೋಸ್ಟ್ ಆರಂಭಗೊಂಡ ಮೂರು ದಿನಗಳಾದರೂ ವ್ಯಾಕ್ಸಿನ್ ಇಲ್ಲ. ಮಂಗಳವಾರದಿಂದ ವ್ಯಾಕ್ಸಿನ್ ನೀಡಲಾಗುವುದು ಎಂದು ಸ್ಥಳೀಯ ಆರೋಗ್ಯ ಇಲಾಖೆ ಹೇಳಿಕೊಂಡಿದೆ. ಕೋವಿಡ್ ನೆಗೆಟಿವ್ ವರದಿ ಇಲ್ಲದವರಿಗೆ ಸ್ಥಳದಲ್ಲೇ ಆರ್‌ಟಿಪಿಸಿಆರ್ ತಪಾಸಣೆ ಕೈಗೊಂಡು ಪ್ರವೇಶ ನೀಡಲಾಗುತ್ತಿದೆ. ಆದರೆ ತಪಾಸಣೆ ವರದಿ ಬರಲು ಎರಡರಿಂದ ಮೂರು ದಿನಗಳ ಬೇಕು. ವರದಿ ಬರುವ ತನಕ ಪ್ರವೇಶಗೊಂಡವರು, ಅವರ ತೆರಳಿದ ಜಾಗದಲ್ಲಿ ಇನ್ನೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ತಪಾಸಣೆ ಕೈಗೊಂಡವರ ವರದಿ ಬರುವ ತನಕ ಚೆಕ್‌ಪೋಸ್ rನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿ ನೆಗೆಟಿವ್ ವರದಿ ಬಂದರೆ ಪ್ರವೇಶ ನೀಡಬೇಕು.
ಒಂದು ವೇಳೆ ಪಾಜಿಟಿವ್ ಬಂದರೆ ಆರೈಕೆ ಕೇಂದ್ರಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಆದರೆ ಮಾತ್ರ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿದೆ ಎನ್ನುತ್ತಾರೆ ಇಲ್ಲಿಯ ಜನರು. ತಾಲೂಕಿನ ಹಿರೋಳಿ, ಖಜೂರಿ ಗಡಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ನಿಂಬಾಳ ಮತ್ತು ಮಾದನಹಿಪ್ಪರಗಾ ಹತ್ತಿರದ ಮೈಂದರ್ಗಿ ಬಳಿ ಉಪ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಇಲ್ಲಿ ಕೋವಿಡ್ ನೆಗೆಟಿವ್ ವರದಿಯಿದ್ದರೆ ಮಾತ್ರ ಪ್ರವೇಶ ನೀಡಬೇಕು. ಆದರೆ, ಇದುವರೆಗೂ ಎಲ್ಲರಿಗೂ ಪ್ರವೇಶ ನೀಡುತ್ತಿರುವ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಸಂಬಂ ಧಿತ ಅಧಿ ಕಾರಿಗಳೇ ಸ್ಪಷ್ಟವಾಗಿ ಉತ್ತರಿಸಬೇಕಾಗಿದೆ.
ಖಜೂರಿ ಚೆಕ್‌ಪೋಸ್ಟ್‌ನಲ್ಲಿ ಹೊರಗಿನಿಂದ ಬಂದವರಿಗೆ ಆರ್‌ಟಿಪಿಸಿಆರ್ ತಪಾಸಣೆ ಕೈಗೊಂಡು ಮನೆಗೆ ಕಳುಹಿಸಿಕೊಡುತ್ತಿದ್ದೇವೆ. ವರದಿ ಬರಲು ಒಂದೂವರೆಯಿಂದ ಎರಡು ದಿನಗಳ ಕಾಲ ಬೇಕಾಗುತ್ತದೆ. ಗ್ರಾಮಕ್ಕೆ ಹೋದ ಮೇಲೆ ಪ್ರತ್ಯೇಕವಾಗಿರಿ ಎಂದು ಹೇಳಿ ಕಳುಹಿಸುತ್ತಿದ್ದೇವೆ. ಪಾಜಿಟಿವ್ ವರದಿ ಬಂದರೆ ಅವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಸಂಪರ್ಕಿಸಿ ಚಿಕಿತ್ಸೆ ನೀಡುತ್ತಾರೆ. ಜೂ. 26ರಂದು 125, ಜೂ. 27ರಂದು 28ರಂದು 119, 28 ರಂದು ಮಧ್ಯಾಹ್ನದ ವರೆಗೆ 45 ಜನರಿಗೆ ಆರ್‌ಟಿಪಿಸಿಆರ್ ತಪಾಸಣೆ ಮಾಡಲಾಗಿದೆ. ಸೋಮವಾರ 28 ವಾಹನಗಳ ತಪಾಸಣೆ ನಡೆಸಿದಾಗ ಐವರು ನೆಗೆಟಿವ್ ವರದಿಯಿದ್ದವರಿಗೆ ಪ್ರವೇಶ ನೀಡಲಾಗಿದೆ ಇನ್ನುಳಿದವರಿಗೆ ಆರ್‌ಟಿಪಿಸಿಆರ್ ತಪಾಸಣೆ ನಡೆಸಲಾಗಿದೆ ಎಂದು ಖಜೂರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾ ಧಿಕಾರಿ ನಾಗರಾಜ್ ಸುಂಟಾನ ಹೇಳಿದರು.
ಖಜೂರಿ ಗಡಿಯಲ್ಲಿ ನಾಡ ತಹಶೀಲ್ದಾರ್ ಬಸವರಾಜ ಮಡಿವಾಳ, ಕಂದಾಯ ನಿರೀಕ್ಷಕ ಅಲ್ಲಾವುದ್ದೀನ್, ಗ್ರಾಮ ಸಹಾಯಕ ರವಿ ಭದ್ರೆ, ಸುಲ್ತಾನ ಪಾಷಾ, ಆರೋಗ್ಯ ಇಲಾಖೆಯ ನಾಗರಾಜ ಸುಂಟಾನ್, ಮಹಾಲಿಂಗಸಿದ್ಧ, ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಡಾ| ಜಿ. ಅಭಯಕುಮಾರ ಮಂಗಳವಾರ ಖಜೂರಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ, ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಪ್ರವೇಶ ನೀಡಿ, ವ್ಯಾಕ್ಸಿನ್ ಕೊಡುತ್ತಿಲ್ಲವೇ ಎಂದು ಕೇಳಿದ್ದಾರೆ. ಆದರೆ ಬಹುತೇಕ ವಾಕ್ಸಿನ್ ಪೂರೈಕೆ ಇಲ್ಲದೆ ಮೂರು ದಿನಗಳ ಕಾಲ ದಿನದೂಡಿದ್ದು, ಮಂಗಳವಾರ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿಕೊಂಡಿದೆ.