Advertisement

ಚೆಕ್‌ಪೋಸ್ಟ್‌, ಕೋವಿಡ್‌ ಕೇರ್‌ಗೆ ಜಿಲ್ಲಾಧಿಕಾರಿ ದಿಢೀರ್‌ ಭೇಟಿ

06:18 PM Apr 22, 2021 | Team Udayavani |

ಯಾದಗಿರಿ: ನೆರೆ ರಾಜ್ಯಗಳಲ್ಲಿ ಕೋವಿಡ್‌ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗದ ಚೆಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ತೀವ್ರಗೊಳಿಸಿ, ಕಟ್ಟುನಿಟ್ಟಾಗಿ ತಪಾಸಣೆಗೊಳಪಡಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ಸೂಚನೆ ನೀಡಿದರು.

Advertisement

ಶಹಾಪುರ ತಾಲೂಕಿನ ಮುಡಬೂಳ ಕೋವಿಡ್‌ ಚೆಕ್‌ ಪೋಸ್ಟ್‌ಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ನೆರೆ ರಾಜ್ಯಗಳಲ್ಲಿ ಕೋವಿಡ್‌ ಉಲ್ಬಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜಿಲ್ಲೆಯ ಚೆಕ್‌ ಪೋಸ್‌ rಗಳಲ್ಲಿ ಕಟ್ಟುನಿಟ್ಟು ತಪಾಸಣೆ ಗೊಳಪಡಿಸಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಂಬಂಧಿಸಿದ ಎಲ್ಲ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಚೆಕ್‌ಪೋಸ್ಟ್‌ನಲ್ಲಿ ಬಹುಹೊತ್ತು ಇದ್ದು ವಾಹನಗಳ ಸಂಚಾರ ಹಾಗೂ ವಹಿಸಲಾಗಿರುವ ತಪಾಸಣಾ ಕಾರ್ಯವನ್ನು ಹಾಗೂ ಚೆಕ್‌ಪೋಸ್ಟ್‌ನಲ್ಲಿ ವಾಹನಗಳು ಮತ್ತು ಪ್ರಯಾಣಿಕರ ವಿವರವನ್ನು ದಾಖಲಿಸುತ್ತಿರುವ ವಹಿಯನ್ನು ಪರಿಶೀಸಿದರು. ಇದೇ ಸಂದರ್ಭದಲ್ಲಿ ಕೃಷಿ ಮಹಾವಿದ್ಯಾಲಯದ ಬಲಭೀಮೇಶ್ವರ ಡಿಪ್ಲೊಮಾ ವಸತಿ ನಿಲಯ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಸುಮಾರು 60ಕ್ಕೂ ಹೆಚ್ಚು ಹಾಸಿಗೆಯ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕೋವಿಡ್‌ ಸೋಂಕಿತರು ಚಿಕಿತ್ಸೆ ಪಡೆಯಲು ಬರುವ ಜನರಿಗೆ ಉತ್ತಮ ಚಿಕಿತ್ಸೆ, ಆರೈಕೆ, ಊಟೋಪಚಾರದ ವ್ಯವಸ್ಥೆ, ಶುದ್ಧ ನೀರು, ಬೆಳಕಿನ ವ್ಯವಸ್ಥೆ ವೀಕ್ಷಿಸಿದ ಅವರು, ಕೋವಿಡ್‌ ಕೇರ್‌ ಸೆಂಟರ್‌ ಸುತ್ತಮುತ್ತಲಿನ ಪರಿಸರವೂ ಚೆನ್ನಾಗಿರಬೇಕೆಂದು ಹೇಳಿದರು. ಹಿರಿಯ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಶಹಾಪುರ ತಹಶೀಲ್ದಾರ್‌ ಜಗನ್ನಾಥ ರೆಡ್ಡಿ, ಪಿಎಸ್‌ಐ ಸುನೀಲ್‌ ಕುಮಾರ್‌ ಬಿ. ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next