Advertisement

ಖಾಸಗಿ ಬಡಾವಣೆಗಳ ವಿನ್ಯಾಸ ಪರಿಶೀಲಿಸಿ

12:52 PM Apr 18, 2017 | |

ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಖಾಸಗಿ ಬಡಾವಣೆಗಳ ವಿನ್ಯಾಸ ತಿಳಿಯಲು ಸೂಕ್ತ ಪರಿಶೀಲನೆ ನಡೆಸಿ ಎಂದು ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ. 

Advertisement

ಸೋಮವಾರ ಪಾಲಿಕೆ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ, ಮಹಾನಗರಪಾಲಿಕೆಗೆ ಸಂಬಂಧಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ನೀಡುತ್ತಿರುವ ಮಾಹಿತಿ ವ್ಯತಿರಿಕ್ತವಾಗಿದೆ. ಜೊತೆಗೆ ಅಕ್ರಮ ಬಡಾವಣೆ ನಿರ್ಮಾಣ ಕುರಿತು ದೂರು ಸಹ ಇವೆ.

ಈ ಬಗ್ಗೆ ಸಮರ್ಪಕವಾಗಿ ತಿಳಿಯಲು ಇಲಾಖೆಯಿಂದ ಸೂಕ್ತ ಪರಿಶೀಲನೆ ನಡೆಸಿ ಎಂದರು. ಇದಕ್ಕೂ ಮುನ್ನ ಪಾಲಿಕೆ ಸಿಪಿಐ ಸದಸ್ಯ ಎಚ್‌.ಜಿ. ಉಮೇಶ್‌ ಸಚಿವರಿಗೆ ದೂರು ನೀಡಿ, ನಗರದ ಅನೇಕ ಕಡೆ ನಿರ್ಮಾಣಗೊಂಡಿರುವ ಖಾಸಗಿ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯವೇ ಇಲ್ಲ.

ಪಾಲಿಕೆ, ದೂಡಾ ಅಧಿಕಾರಿಗಳು ಸ್ಥಳ  ಪರಿಶೀಲಿಸದೇ ಡೋರ್‌ ನಂಬರ್‌ ನೀಡುತ್ತಾರೆ. ಬಡಾವಣೆಗಳ ವಿನ್ಯಾಸಕ್ಕೆ ಅನುಮತಿ ನೀಡುತ್ತಿದ್ದಾರೆ. ಅನೇಕ ಬಡಾವಣೆಗಳಲ್ಲಿ ಕುಡಿಯುವ ನೀರು, ಒಳಚರಂಡಿ ಸಮಸ್ಯೆ ಇದೆ. ಇದೀಗ ಪಾಲಿಕೆ ಹಣದಿಂದ ಇವುಗಳ ದುರಸ್ತಿ ಮಾಡಬೇಕಾದ ಸ್ಥಿತಿ ಇದೆ ಎಂದು ದೂರಿದ್ದರು. 

ದೂರು ಕುರಿತು ಸಚಿವ ಬೇಗ್‌ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ, ಪಾಲಿಕೆ ಅಧಿಕಾರಿಗಳಿಂದ ಬಡಾವಣೆಗಳ ನಿರ್ಮಾಣ ಕುರಿತು ಮಾಹಿತಿ ಪಡೆದರು. ದೂಡಾ ಅಧಿಕಾರಿ ರೇಣುಕಾ ಪ್ರಸಾದ್‌, ಪಾಲಿಕೆ ವ್ಯಾಪ್ತಿಯಲ್ಲಿ 500 ಖಾಸಗಿ ಬಡಾವಣೆಗಳಿದ್ದು, ಪರಿಶೀಲನೆ ಮಾಡಿದ್ದೇವೆ ಎಂದು ಹೇಳಿದರು. 

Advertisement

ಇನ್ನು ಪಾಲಿಕೆ ಆಯುಕ್ತ ಬಿ.ಎಚ್‌.ನಾರಾಯಣಪ್ಪ, 4000-5000 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಆಗಿವೆ. 4000 ಖಾಸಗಿ ಬಡಾವಣೆ ಇವೆ ಎಂದಿದ್ದರು. ಇದನ್ನು ಆಲಿಸಿದ ನಂತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಮೊದಲು ಸಮರ್ಪಕವಾಗಿ ಪರಿಶೀಲನೆ ನಡೆಸಿ ಎಂದು ಸೂಚಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌, ಮೇಯರ್‌ ಅನಿತಾ ಮಾಲತೇಶ್‌, ಉಪ ಮೇಯರ್‌ ಜಿ. ಮಂಜಮ್ಮ, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಅನಿರುದ್ಧ ಶ್ರವಣ್‌, ದೂಡಾ ಅಧ್ಯಕ್ಷ ರಾಮಚಂದ್ರಪ್ಪ ಇತರರು ಸಭೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next