ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲರಾ ಸೋಂಕು ತಡೆಯುವ ನಿಟ್ಟಿನಲ್ಲಿ ನಗರದ ಹೋಟೆಲ್‌ಗಳ ಅಡುಗೆ ಮಾಡುವ(ಕಿಚನ್) ಸ್ಥಳಗಳ ಸ್ವತ್ಛತೆ ಪರಿಶೀಲನೆ ಮಾಡುವಂತೆ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ) ಡಾ.ವಿಜಯೇಂದ್ರ ತಿಳಿಸಿದರು.
ಕೊರೊನಾ ಹಾಗೂ ಕಾಲರಾಗೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಲರಾ ಸೋಂಕು ತಡೆಯುವ ಉದ್ದೇಶದಿಂದ ತೆರೆದಿಟ್ಟ ಆಹಾರ ಪದಾರ್ಥ ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದ್ದು, ತೆರೆದಿಟ್ಟ ಆಹಾರ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆಯ ಆರೋಗ್ಯಾಧಿಕಾರಿಗಳು ಇನ್ನು ಎರಡು ದಿನಗಳಲ್ಲಿ ನಗರದ ಎಲ್ಲ ಹೋಟೆಲ್‌ಗಳ ಕಿಚನ್ ತಪಾಸಣೆ ಪ್ರಾರಂಭಿಸಲಿದ್ದಾರೆ. ಈ ವೇಳೆ ಲೋಪ ಕಂಡು ಬಂದರೆ ನಿರ್ದಾಕ್ಷ್ಯಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ನಗರದಲ್ಲಿ ಕಾಲರಾ ಪ್ರಕರಣಗಳು ಪತ್ತೆಯಾದ ಹಿನ್ನಲೆ ಬಿಬಿಎಂಪಿ ಸೋಮವಾರದಿಂದಲೇ ಬೀದಿಬದಿ ಆಹಾರ ವಸ್ತುಗಳ ಮಾರಾಟ ನಿಷೇಧಿಸಿದ್ದು, ಬೋಂಡ, ಕಲ್ಲಂಗಡಿ, ಸೌತೆಕಾಯಿ, ಊಟ-ಉಪಹಾರಗಳನ್ನು ರಸ್ತೆ ಬದಿಯೇ ಮಾರಾಟ ಮಾಡುವವರ ಮಳಿಗೆಗಳನ್ನು ತೆರವು ಮಾಡುತ್ತಿದೆ.
ಕಲುಷಿತ ನೀರಿನಿಂದ ಕಾಲರಾ ಬರುವ ಹಿನ್ನಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ಪಶ್ಚಿಮ ವಿಭಾಗದ ಆರೋಗ್ಯಾಧಿಕಾರಿ ಬಾಲಸುಂದರ್ ಮಾತನಾಡಿ, ಆಯುಕ್ತರ ಆದೇಶದ ಮೇರೆಗೆ ಈಗಾಗಲೇ ಮುನ್ನೂರಕ್ಕೂ ಹೆಚ್ಚು ಅಂಗಡಿಗಳನ್ನು ತೆರವು ಮಾಡಲಾಗಿದೆ. ತೆರವು ಮಾಡಿದ ಜಾಗದಲ್ಲಿ ಮತ್ತೆ ತಳ್ಳುವ ಗಾಡಿಗಳು ತಂದರೆ ವಸ್ತುಗಳನ್ನು ಜಪ್ತಿ ಮಾಡಲಾಗುವುದು ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಸಂಬಂಧ ವದಂತಿಗಳು ಹರಿಬಿಡುತ್ತಿದ್ದು, ಇದರಿಂದ ಜನರು ಆತಂಕಕ್ಕೀಡಾ ಗುತ್ತದೆ. ಇದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದ್ದು, ಜಾಲತಾಣಗಳಲ್ಲಿ ವದಂತಿಗಳನ್ನು ಹರಡದಂತೆ ನಿರ್ಬಂಧ ಹೇರಬೇಕು. ಹಾಗೇ ಜನರು ಕೂಡ ನಿರ್ಲಕ್ಷ್ಯವಹಿಸದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.
-ಚಂದ್ರ, ಬೆಂಗಳೂರು ನಿವಾಸಿ
ದುಡಿಯಲು ಬೆಂಗಳೂರಿಗೆ ಬಂದಿದ್ದೇವೆ. ಆದರೆ, ಇಲ್ಲಿ ಕೊರೊನಾ ಆತಂಕ ಎದುರಾಗಿದ್ದು, ರಸ್ತೆಯಲ್ಲಿ ಓಡಾಟ ನಡೆಸಲು ಮತ್ತು ಹೋಟೆಲ್‌ಗಳಲ್ಲಿ ಊಟ ಮಾಡಲು ಭಯವಾಗಿದೆ. ಮನೆಯವರು ಊರಿಗೆ ಮರಳಿ ಬರುವಂತೆ ತಿಳಿಸಿದ್ದಾರೆ.
-ಪ್ರವೀಣ, ಯಾದಗಿರಿ