Advertisement

ವಿಮಾನ ಹಾರಾಟ ತರಬೇತಿಗೆ ಪರಿಶೀಲನೆ

11:31 AM Oct 27, 2018 | Team Udayavani |

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹೈದ್ರಾಬಾದ್‌ನ ಜಿ.ಎಂ.ಆರ್‌. ಕಂಪನಿಯವರು ವಿಮಾನ ಹಾರಾಟ ತರಬೇತಿ ಪ್ರಾರಂಭಿಸುವ ನಿಟ್ಟಿನಲ್ಲಿ ಶುಕ್ರವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕಲಬುರಗಿ ವಿಮಾನ ನಿಲ್ದಾಣವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಈ ವಿಮಾನ ನಿಲ್ದಾಣದಲ್ಲಿ ಈಗಾಗಲೇ ವಿಶೇಷ ಸಂದರ್ಭಗಳಲ್ಲಿ ಚಾರ್ಟರ್ಡ್‌ ವಿಮಾನಗಳು ಬಂದಿಳಿಯುತ್ತಿವೆ. ಕಲಬುರಗಿಯಿಂದ ಬೆಂಗಳೂರು ಹಾಗೂ ಹೈದ್ರಾಬಾದ್‌ಗಳಿಗೆ ಸಾರ್ವಜನಿಕರು ವಿಮಾನದಲ್ಲಿ ಸಂಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಜಿ.ಎಂ. ಆರ್‌. ಕಂಪನಿ ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲು ಮುಂದೆ ಬಂದಿರುವುದು ಸಂತೋಷದ ಸಂಗತಿಯಾಗಿದೆ. ವಿಮಾನ ಹಾರಾಟ ತರಬೇತಿ ಪ್ರಾರಂಭಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಪಡೆಯಬೇಕಾಗಿರುವ ಅವಶ್ಯಕ ಪರವಾನಗಿ ಕುರಿತು ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ತಿಳಿಸಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ರನ್‌ವೇ, ಮಾರ್ಕಿಂಗ್‌, ಲೈಟಿಂಗ್‌ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಒಂದು ಕಚೇರಿ ಸೌಲಭ್ಯ ಕಲ್ಪಿಸಿದಲ್ಲಿ ಜಿ.ಎಂ.ಆರ್‌. ಕಂಪನಿಯಿಂದ ವಿಮಾನಗಳಿಗೆ ಇಂಧನ ಮರು ಭರ್ತಿ ಸೌಲಭ್ಯದೊಂದಿಗೆ ವಿಮಾನ ಹಾರಾಟ ತರಬೇತಿ
ಪ್ರಾರಂಭಿಸಲಾಗುವುದು ಎಂದು ಹೈದ್ರಾಬಾದ್‌ನ ಜಿ.ಎಂ.ಆರ್‌. ಕಂಪನಿ ಮುಖ್ಯಸ್ಥ ಹೇಮಂತ ಪಾಟೀಲ ವಿವರಿಸಿದರು.

ಜಿ.ಎಂ.ಆರ್‌. ಕಂಪನಿಯ ಎಪಿಎಫ್‌ಟಿಯಿಂದ ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲು ಸರ್ಕಾರವು ಎನ್‌.ಓ.ಸಿ. ನೀಡಿದಲ್ಲಿ ವಿಮಾನ ಹಾರಾಟ ತರಬೇತಿಗೆ ಪರವಾನಿಗೆ ನೀಡುವಂತೆ ಡೈರೆಕ್ಟರ್‌ ಜನರಲ್‌ ಆಫ್‌ ಸಿವಿಲ್‌ ಎವಿಯೇಶನ್‌ ಅವರಿಗೆ ಪತ್ರ ಬರೆಯಲಾಗುವುದು. ಪರವಾನಗಿ ದೊರೆತ ನಂತರ ವಿಮಾನ ಹಾರಾಟ ತರಬೇತಿ ಪ್ರಾರಂಭಿಸುವುದರ ಜೊತೆಗೆ ವಿಮಾನ ನಿರ್ವಹಣೆಯನ್ನು ಪ್ರಾರಂಭಿಸಲಾಗುವುದು.

ಇದಕ್ಕಾಗಿ ವಿಮಾನ ನಿಲುಗಡೆಗೆ ಹ್ಯಾಂಗರ್‌ ಅವಶ್ಯಕತೆಯಿದ್ದು, ಹ್ಯಾಂಗರ್‌ ನಿರ್ಮಿಸಿ ಕೊಟ್ಟಲ್ಲಿ ಕಲಬುರಗಿ ವಿಮಾನ ನಿಲ್ದಾಣದಿಂದ ಬೇರೆ ಪಟ್ಟಣಗಳಿಗೆ ವಿಮಾನ ಹಾರಾಟ ಸಹಿತ ಪ್ರಾರಂಭಿಸಬಹುದೆಂದು ತಿಳಿಸಿದರು.
 
ಜಿ.ಎಂ.ಆರ್‌. ಕಂಪನಿಯು ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ವಿಮಾನ ನಿಲ್ದಾಣ ನಿರ್ವಹಣೆ ಹಾಗೂ ವಿಮಾನಗಳ ಹಾರಾಟ ನಡೆಸುತ್ತಿದೆ. ಕಲಬುರಗಿ ವಿಮಾನ ನಿಲ್ದಾಣದಿಂದ ಬೇರೆ ಪಟ್ಟಣಗಳಿಗೆ ಅನಿಯಮಿತ ವಿಮಾನ ಹಾರಾಟ ಪ್ರಾರಂಭಿಸಲು ಎನ್‌.ಎಸ್‌.ಓ.ಪಿ. ಪರವಾನಿಗೆ ಪಡೆಯಲಾಗುವುದು. ಡಿ. 1ರಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಎ.ಪಿ.ಎಫ್‌.ಟಿ. ವತಿಯಿಂದ ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲು ಯೋಜನೆ ಹಮ್ಮಿಕೊಂಡಿರುವುದಾಗಿ ವಿವರಿಸಿದರು.  ಎ.ಪಿ.ಎಫ್‌.ಟಿ. ತರಬೇತಿ ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್‌ ಆರ್‌.ವಿ. ಕುಮಾರ, ಇಂಜಿನಿಯರ್‌ ಫೈಸಲ್‌, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next