ದಾವಣಗೆರೆ: ಮತಗಟ್ಟೆ ನೋಂದಣಿ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಕೈಗೊಳ್ಳಬೇಕು. ನಿಯಮಸಾನುರವೇ ಪರಿಷ್ಕರಣೆ ಕಾರ್ಯ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷಾಧಿಕಾರಿ ಡಾ| ಎನ್.ವಿ. ಪ್ರಸಾದ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಗಮನಕ್ಕೆ ತರದೇ ಮತದಾರರ ಪಟ್ಟಿಯಲ್ಲಿ ನಿಷಮಣೆ ಮಾಡಬಾರದು. ಮೃತಪಟ್ಟವರು, ಹೊರಹೊದವರು ಹಾಗೂ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವಾಗ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದರು.
ಮತದಾರರ ಹೆಸರನ್ನು ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಾಗ, ಎಲ್ಲ ನಿಯಮಗಳನ್ನು ಪಾಲಿಸಲಾಗಿದೆಯೇ, ಮಾರ್ಗಸೂಚಿಯನ್ನು ಅನುಸರಿಸಲಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಬೂತ್ ಮಟ್ಟದ ಅಧಿಕಾರಿಗಳು ಡಿಲೀಟ್ ಮಾಡುವವರ ಪಟ್ಟಿ ಕೊಟ್ಟ ಕೂಡಲೇ ತೆಗೆದುಹಾಕುವಂತಿಲ್ಲ, ಪ್ರತಿಯೊಂದಕ್ಕೂ ಕೂಡ ದಾಖಲೆಗಳಿರಬೇಕು. ಮತದಾರರು ಆ ಸ್ಥಳದಲ್ಲಿ, ಕ್ಷೇತ್ರದಲ್ಲಿ ಇದ್ದಾರೆಯೇ ಇಲ್ಲವೋ ಎಂಬುದನ್ನು ಮತ್ತೂಮ್ಮೆ ಪರಿಶೀಲಿಸಿ, ಬಳಿಕ ನಿರ್ಧಾರ ಕೈಗೊಳ್ಳಬೇಕು.ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
30 ಸಾವಿರ ಸೇರ್ಪಡೆ: ಸಭೆಯ ನಂತರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ 1683 ಮತಗಟ್ಟೆಗಳಿವೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಈವರೆಗೆ 30 ಸಾವಿರ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. 81 ಸಾವಿರ ಮತದಾರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ.
ಸದ್ಯ ಮತಪಟ್ಟಿ ಪರಿಷ್ಕರಣೆ ವೇಳೆ 8400 ಫಾರಂ 6, 5156 ಫಾರಂ 7, 4193 ಫಾರಂ 8 ಸೇರಿದಂತೆ 17758 ಅರ್ಜಿಗಳು ಬಂದಿವೆ. ಡಿಸೆಂಬರ್ ಅಂತ್ಯದ ವರೆಗೆ ಮತಪಟ್ಟಿ ಪರಿಷ್ಕರಣೆ ಕಾರ್ಯ ಜಾರಿಯಲ್ಲಿರುತ್ತದೆ ಎಂದು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಪಿ.ಎಲ್.ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮದ್ದಜ್ಜಿ, ಉಪವಿಭಾಗಾಧಿಕಾರಿ ದುರ್ಗಶ್ರೀ ಇನ್ನಿತರರು ಇದ್ದರು.