ಒಂದೊಂದು ಭಾಗದವರು ಸೇರಿಕೊಂಡು ಸಿನಿಮಾ ಮಾಡುವ ಮೂಲಕ ತಮ್ಮ ಊರಿನ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವುದು ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಹುಬ್ಬಳ್ಳಿ ಕಡೆಯವರು ಸಿನಿಮಾ ಮಾಡಿದರೆ, ಆ ಕಡೆಯವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ, ಕರಾವಳಿಯವರು ಮಾಡಿದರೆ ಚಿತ್ರದಲ್ಲಿ ಕರಾವಳಿ ಮೂಲದ ಕಲಾವಿದರು ಹೆಚ್ಚಿರುತ್ತಾರೆ. ಗಾಂಧಿನಗರಕ್ಕೆ ಬರುವ ಹೊಸಬರು ಈ ತರಹ ಸ್ಥಳೀಯ ತಂಡದೊಂದಿಗೆ ಸಿನಿಮಾ ಯಾನ ಆರಂಭಿಸುವುದು ಹೊಸದೇನಲ್ಲ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಮಿಸ್ಟರ್ ಚೀಟರ್ ರಾಮಾಚಾರಿ’. ರಾಯಚೂರಿನ ತಂಡವೊಂದು ಸೇರಿಕೊಂಡು ಈ ಸಿನಿಮಾ ಮಾಡಿದೆ. ರಾಯಚೂರಿನ ರಾಮಾಚಾರಿ ಎನ್ನುವವರು ಈ ಸಿನಿಮಾದ ನಿರ್ದೇಶಕರು. ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಪ್ರವೀಣಾ ರವೀಂದ್ರ ಕುಲಕರ್ಣಿ ಈ ಸಿನಿಮಾದ ನಿರ್ಮಾಪಕರು. ಇವರು ಕೂಡಾ ರಾಯಚೂರಿನವರು.
ಆರಂಭದಲ್ಲಿ ಕಿರುಚಿತ್ರ ಮಾಡಲೆಂದು ಹೊರಟ ತಂಡ ಮುಂದೆ ಕಿರುಚಿತ್ರವನ್ನು ಹಿರಿದಾಗಿಸಿದೆ. ಅದರ ಪರಿಣಾಮ “ಮಿಸ್ಟರ್ ಚೀಟರ್ ರಾಮಾಚಾರಿ’ ಸಿನಿಮಾವಾಗಿದೆ. ನಿರ್ಮಾಪಕಿ ಪ್ರವೀಣಾ ಅವರ ಬಳಿ ನಿರ್ದೇಶಕ ರಾಮಾಚಾರಿ, ಕಥೆ ಹೇಳಿ, ಕಿರುಚಿತ್ರ ನಿರ್ಮಿಸುವಂತೆ ಕೇಳಿಕೊಂಡರಂತೆ. ಅದರಂತೆ ಆರಂಭವಾದ ಕಿರುಚಿತ್ರ ಮುಂದೆ ಕಥೆ ಇಷ್ಟವಾಗಿ, ಬೆಳೆಯುತ್ತಾ ಹೋಗಿ ಸಿನಿಮಾವಾಯಿತಂತೆ. “ರಾಮಾಚಾರಿಯವರು ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ಆರಂಭದಲ್ಲಿ ಕಿರುಚಿತ್ರ ಮಾಡಲು ಹೊರಟೆವು. ಆದರೆ ಕಥೆ ಚೆನ್ನಾಗಿದೆ ಅನಿಸಿ, ಸಿನಿಮಾ ಮಾಡಿದ್ದೇವೆ. ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಈ ಸಿನಿಮಾ ಮಾಡಿದ್ದೇವೆ. ಈ ಮೂಲಕ ನಮ್ಮೂರಿನ ಪ್ರತಿಭೆಗಳಿಗೆ ಅವಕಾಶ ಕೊಟ್ಟ ಖುಷಿ ಇದೆ’ ಎನ್ನುವುದು ಪ್ರವೀಣಾ ಅವರ ಮಾತು.
ನಿರ್ದೇಶಕ ರಾಮಾಚಾರಿಯವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಕಿರುಚಿತ್ರ ಮಾಡಿದ ಅನುಭವಿದೆ. “ಮಿಸ್ಟರ್ ಚೀಟರ್ ರಾಮಾಚಾರಿ’ಯಲ್ಲಿ ನೋಟ್‌ಬ್ಯಾನ್ ಸಂದರ್ಭ ಜನ ಎದುರಿಸಿದ ತೊಂದರೆ ಸೇರಿದಂತೆ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಚಾರಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆಯಂತೆ. ಪ್ರತಿಯೊಬ್ಬರು ಕೂಡಾ ಒಂದಲ್ಲ ಒಂದು ರೀತಿಯಲ್ಲಿ ಮೋಸಗಾರರೇ ಎಂಬ ಅಂಶವನ್ನು ಸಿನಿಮಾದಲ್ಲಿ ಹೇಳಿದ್ದಾರಂತೆ ರಾಮಾಚಾರಿ. ಈ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕನೇ ಬರೆಯುತ್ತಾನೆಂಬುದು ರಾಮಾಚಾರಿ ಮಾತು. ಹಾಗಂತ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಇಲ್ಲವೆಂದಲ್ಲ. ಆದರೆ ಪ್ರೇಕ್ಷಕನ ನಿರ್ಧಾರ, ಆಲೋಚನೆಗೆ ತಕ್ಕಂತೆ ಕ್ಲೈಮ್ಯಾಕ್ಸ್ ನೋಡುತ್ತಾನಂತೆ. “ಇಲ್ಲಿ ಹೀರೋ-ಹೀರೋಯಿನ್ ಎಂದಿಲ್ಲ. ಪ್ರತಿ ಪಾತ್ರಗಳು ಪ್ರಮುಖವಾಗಿದ್ದು, ಕಥೆಯನ್ನು ಮುನ್ನಡೆಸುತ್ತವೆ’ ಎನ್ನಲು ರಾಮಾಚಾರಿ ಮರೆಯಲಿಲ್ಲ. ಚಿತ್ರದಲ್ಲಿ ರಾಯಚೂರು ಕಲಾವಿದ ರಾಮಾಂಜನೇಯ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಅತ್ತ ಕಡೆ ಹೀರೋ ಅಲ್ಲದ ಇತ್ತ ಕಡೆ ವಿಲನ್ ಆಗದಂತಹ ಪಾತ್ರ ಅವರಿಗೆ ಸಿಕ್ಕಿದೆಯಂತೆ. ಚಿತ್ರದಲ್ಲಿ ರಾಶಿ ಮೇಘನಾ ಹಾಗೂ ಮೇಘನಾ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಪ್ರದ್ಯೋತ್ತನ್ ಸಂಗೀತವಿದೆ. ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು.