ಬೆಂಗಳೂರು: ಹಿಂದೂ ಹೆಸರಿನ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿ ಜತೆ ಲಿವಿಂಗ್ ಟುಗೆದರ್(ಸಹಜೀವನ) ನಡೆಸಿ, ಇದೀಗ ಕಿರುಕುಳ ನೀಡಿ, ಪ್ರಾಣ ಬೆದರಿಕೆ ಹಾಕಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಕಾಡುಬೀಸನಹಳ್ಳಿಯ 25 ವರ್ಷದ ಮಹಿಳಾ ಟೆಕಿಯೊಬ್ಬರು ದೂರು ನೀಡಿದ್ದು, ಗುರುಪ್ರಸಾದ್(ರಫೀಕ್ ಬಾದ್ ಶಾ) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಳೆದ 7 ವರ್ಷಗಳ ಹಿಂದೆ ಯುವತಿ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸಾಮಾಜಿಕ ಜಾಲತಾಣದಲ್ಲಿ ಗುರುಪ್ರಸಾದ್ ಎಂಬಾತನ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಕಳೆದ ಐದು ವರ್ಷಗಳಿಂದ ಆತನ ಜತೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಡೆಸುತ್ತಿದ್ದೆ. ಆದರೆ, ಇತ್ತೀಚೆಗೆ ಆತ ಗುರುಪ್ರಸಾದ್ ಅಲ್ಲ, ಆತನ ಹೆಸರು ರಫೀಕ್ ಬಾದ್ ಶಾ ಎಂಬುದು ಗೊತ್ತಾಗಿದೆ. ಅಲ್ಲದೆ, ಆತ ಆಟೋ ಚಾಲಕ ಎಂಬುದು ತಿಳಿದು ಬಂದಿದೆ. ಆದರೂ, ಆತನ ಜತೆ ಪ್ರೀತಿಯಿಂದ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದೆ. ಆದರೆ, ಆರೋಪಿ ಕೆಲ ದಿನಗಳಿಂದ ಕಿರುಕುಳ ನೀಡಲು ಆರಂಭಿಸಿದ್ದಾನೆ.
ಅದರಿಂದ ಬೇಸರಗೊಂಡು ಕಾಡುಬೀಸನಹಳ್ಳಿಯ ಪೋಷಕರ ಮನೆಯಲ್ಲಿ ವಾಸವಾಗಿದ್ದೆ. ಆದರೆ, ಆರೋಪಿ ಆಗಾಗ ಕಚೇರಿ ಹಾಗೂ ಮನೆಯಿಂದ ಹೊರಗಡೆ ಹೋದಾಗ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ. ಸೆ.20ರಂದು ಹೊಸಕೆರೆಹಳ್ಳಿ ಬಳಿ ಅಡ್ಡಗಟ್ಟಿ ಹಲ್ಲೆ ನಡೆಸಿ, ತನ್ನೊಂದಿಗೆ ಬಾರದಿದ್ದರೆ ಇಡೀ ಕುಟುಂಬವನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಹಿಂದೂ ಯುವಕನ ಹೆಸರಿನಲ್ಲಿ ವಂಚಿಸಿದ ರಫೀಕ್ ಬಾದ್ ಶಾ ಎಂಬಾತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಂತ್ರಸ್ತೆ ದೂರಿನಲ್ಲಿ ಕೋರಿದ್ದಾರೆ.
ಆರೋಪಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗಿದೆ. ತನಿಖೆ ಮುಂದವರಿದಿದೆ ಎಂದು ಪೊಲೀಸರು ಹೇಳಿದರು. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.