ಬೆಂಗಳೂರು: ಸಿನಿಮಾಗಳಲ್ಲಿ ಹಿರೋಯಿನ್ ಪಾತ್ರ ಕೊಡಿಸುವುದಾಗಿ ನಂಬಿಸಿ, ರಾಯಚೂರು ಮೂಲದ ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪ ದಡಿ ಸ್ಯಾಂಡಲ್‌ವುಡ್‌ನ ಸಹ ನಟನೊಬ್ಬನ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು ಮೂಲದ 27 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಅತ್ತಿಬೆಲೆಯ ಶಾನಭೋಗನಹಳ್ಳಿ ನಿವಾಸಿ, ಸಹ ನಟ ಸಂತೋಷ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಸಂತ್ರಸ್ತೆ ರಾಯಚೂರಿನ ದೇವದುರ್ಗ ತಾಲೂಕಿನಿಂದ 2014ರಲ್ಲಿ ಬೆಂಗಳೂರಿಗೆ ಬಂದು, ಜ್ಞಾನಭಾರತಿನಗರದಲ್ಲಿ ಪೋಷಕರ ಜತೆ ವಾಸವಾಗಿದ್ದು, ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ 2019ರಲ್ಲಿ ಸ್ನೇಹಿತೆ ಭೂಮಿಕಾ ಎಂಬಾಕೆ ಮೂಲಕ ಸಂತೋಷ್ ಪರಿಚಯವಾಗಿದ್ದು, ಈ ವೇಳೆ ಆರೋಪಿ ತಾನು ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದೇನೆ. ನಿಮಗೂ ಸಿನಿಮಾದಲ್ಲಿ ಹಿರೋಯಿನ್ ಪಾತ್ರ ಕೊಡಿಸುತ್ತೇನೆ ಎಂದು ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಬಳಿಕ ಆಗಾಗ್ಗೆ ಕರೆ ಮತ್ತು ಸಂದೇಶ ಕಳುಹಿಸುತ್ತಿದ್ದ.
ಕೆಲ ದಿನಗಳ ಬಳಿಕ “ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗುತ್ತೇನೆ’ ಎಂದು ನಂಬಿಸಿ, ಬಸವೇಶ್ವರನಗರದ ಕೆಲ ಲಾಡ್ಜ್ಗಳಿಗೆ ಕರೆದೊಯ್ದಿದ್ದಾನೆ. ಅಲ್ಲದೆ, ಊಟಿ, ಮೈಸೂರು, ಧರ್ಮಸ್ಥಳ, ಹಂಪಿ, ಗೋವಾ ಇತರೆ ಕಡೆಗಳಲ್ಲಿ ಕರೆದೊಯ್ದು ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ತನ್ನ ಬಳಿಯಿದ್ದ ಚಿನ್ನಾಭರಣ, ನಗದು, ಐಫೋನ್ ಪಡೆದುಕೊಂಡಿದ್ದಾನೆ. ಅಲ್ಲದೆ, ತನ್ನ ಜತೆಯಿದ್ದ ಖಾಸಗಿ ಕ್ಷಣಗಳನ್ನು ಆತನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಈ ನಡುವೆ ಆರೋಪಿ ಇತ್ತೀಚೆಗೆ ಬೇರೆ ಯುವತಿ ಜತೆ ಮದುವೆಯಾಗಿದ್ದಾನೆ. ಈ ವಿಚಾರ ತಿಳಿದು ಅತ್ತಿಬೆಲೆಯಲ್ಲಿರುವ ಆತನ ಮನೆಗೆ ಹೋಗಿ ಪ್ರಶ್ನಿಸಿದ್ದೆ. ಆಗ ಆರೋಪಿ “ನಿನ್ನ ಖಾಸಗಿ ವಿಡಿಯೋಗಳು ತನ್ನ ಬಳಿ ಇವೆ. ತಾನೂ ಕರೆದಾಗ ಬರಬೇಕು, ಇಲ್ಲವಾದರೆ ವಿಡಿಯೋ ವೈರಲ್ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಹಲ್ಲೆಯೂ ಮಾಡಿದ್ದಾನೆ. ಹೀಗಾಗಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಸಂತೋಷ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಈ ಹಿಂದೆಯೂ ದೂರು, ಪ್ರಕರಣ ವರ್ಗಾವಣೆ: 2023ರ ಜೂನ್ 20ರಂದು ಕೂಡ ಸಂತ್ರಸ್ತೆ, ಸಂತೋಷ್ ವಿರುದ್ಧ ಇದೇ ರೀತಿಯ ಆರೋಪ ಮಾಡಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದರು. ಆಗ ಘಟನೆ ಅತ್ತಿಬೆಲೆಯಲ್ಲಿ ನಡೆದಿದ್ದರಿಂದ ಪ್ರಕರಣವನ್ನು ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಅದೇ ಆರೋಪದಡಿ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.