ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾದ ವಿವಾಹಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಕ್ಯಾಬ್ ಚಾಲಕನೊಬ್ಬ ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಹಿಳೆ ಕಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆಂಗೇರಿ ನಿವಾಸಿ ಕ್ಯಾಬ್ ಚಾಲಕ ಪ್ರಜ್ವಲ್ (28) ಎಂಬಾತನ ವಿರುದ್ದ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ಮೂಲದ ಭೈರವಿ ಎಂಬಾಕೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಚಿತ್ರದುರ್ಗ ಮೂಲದ ಮಹಿಳೆ ಭೈರವಿ, ತನ್ನ ಪತಿ ಕರಿಯಣ್ಣ ಕುಡಿದು ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಗಂಡನನ್ನು ತೊರೆದು ಮಕ್ಕಳ ಜತೆ ತವರು ಮನೆಗೆ ಹೋಗಿದ್ದರು. ನಂತರ ಮಗನನ್ನು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ಗೆ ಸೇರಿಸಿ, ಮಗಳನ್ನು ತವರು ಮನೆಯಲ್ಲಿಯೇ ಬಿಟ್ಟಿದ್ದಾರೆ. 1 ವರ್ಷದಿಂದ ಕೆಂಗೇರಿ ಸಮೀಪದ ಹರ್ಷ ಲೇಔಟ್‌ನಲ್ಲಿ ಸ್ನೇಹಿತೆಯರ ಜತೆ ವಾಸವಾಗಿದ್ದು, ಜೀವನೋಪಾ ಯಕ್ಕಾಗಿ ಪೆಟ್ರೊಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
ಈ ನಡುವೆ ಮಹಿಳೆ ರೀಲ್ಸ್ ಮಾಡುತ್ತಿದ್ದರು. ಈಕೆಯ ರೀಲ್ ನ ನೋಡುತ್ತಿದ್ದ ಮಂಡ್ಯ ಮೂಲದ ಕ್ಯಾಬ್ ಚಾಲಕನೊಬ್ಬ ಲೈಕ್ಸ್, ಕಮೆಂಟ್ ಮಾಡಿನೆ. ಆ ನಂತರ ಇವರಿಬ್ಬರೂ ಪರಿಚಯವಾಗಿ ಮೊಬೈಲ್ ನಂಬರ್ ಬದಲಾಯಿಸಿಕೊಂಡು, ಚಾಟಿಂಗ್ ಹಾಗೂ ಹಲವಾರು ಬಾರಿ ಪರಸ್ಪರ ಭೇಟಿಯಾಗಿದ್ದಾರೆ. ಆ ಸಂದರ್ಭದಲ್ಲಿ ಆ ಮಹಿಳೆ ತನಗೆ ಇಬ್ಬರು ಮಕ್ಕಳಿದ್ದಾರೆ ಎಂದು ತನ್ನ ಕುಟುಂಬದ ಬಗ್ಗೆ ಹೇಳಿಕೊಂಡಿದ್ದಳು ಎಂದು ಹೇಳಲಾಗಿದೆ.
ಆದರೂ ಪರವಾಗಿಲ್ಲ ನಿನ್ನನ್ನು ಮದುವೆಯಾಗುತ್ತೇನೆಂದು ಕ್ಯಾಬ್ ಚಾಲಕ ಹೇಳಿದ್ದಾನೆ. ಆದರಿಂದ ಜತೆಯಲ್ಲಿದ್ದ ಸ್ನೇಹಿತೆಯರು ಬೇರೆ ಮನೆ ಮಾಡಿಕೊಂಡು ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ ಪ್ರಜ್ವಲ್ ತನ್ನೊಂದಿಗೆ ಸಹ ಜೀವ ನಡೆಸುತ್ತಿದ್ದ. ಆದರೆ, ಇದೀಗ ಆತ ಬಿಟ್ಟು ಹೋಗಿ, ತನಗೆ ಮೋಸ ಮಾಡಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪತಿಯಿಂದ ವಿಚ್ಛೇದನ ಪಡೆದರೆ ಮದುವೆಗೆ ಸಿದ್ಧ: ಕ್ಯಾಬ್ ಚಾಲಕ:
ಪೊಲೀಸರು ಕ್ಯಾಬ್ ಚಾಲಕನ ಕರೆಸಿ ವಿಚಾರಣೆ ನಡೆಸಿದ್ದಾರೆ. ಆಗ ಪ್ರಜ್ವಲ್, ಮಹಿಳೆಯು ತನಗೆ ಈಗಾಗಲೇ ಮದುವೆ, ಹಾಗೂ ಮಕ್ಕಳಾಗಿರುವು ದನ್ನು ನನ್ನ ಬಳಿ ಹೇಳಿ ಕೊಂಡಿಲ್ಲ. ನಂತರ ನನಗೆ ವಿಷಯ ಗೊತ್ತಾಗಿದೆ. ಆದರೂ ನಿನ್ನ ಗಂಡನಿಂದ ವಿಚ್ಛೇದನ ಪಡೆದುಕೊಂಡು ಬಾ ವಿವಾಹ ವಾಗುತ್ತೇನೆ ಎಂದು ತಿಳಿಸಿದ್ದೆ. ಅದಕ್ಕೆ ಕೋಪ ಗೊಂಡು ಆಕೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಠಾಣೆಗೆ ದೂರು ನೀಡಿದ್ದಾಳೆ. ಆಕೆ ಗಂಡನಿಂದ ವಿಚ್ಛೇದನ ಪಡೆದರೆ ನಾನು ಮದುವೆಯಾಗಲು ಈಗಲೂ ಸಿದ್ಧನಿದ್ದೇನೆ ಎಂದು ಹೇಳಿಕೆ ದಾಖಲಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.