Advertisement

ವಿದ್ಯುತ್‌ ಬಿಲ್‌ ಬಾಕಿ ಹೆಸರಿನಲ್ಲಿಯೂ ಮೋಸ; ನಕಲಿ ಹೆಲ್ಪ್ ಲೈನ್‌ ಹಾವಳಿ

11:49 PM Aug 18, 2023 | Team Udayavani |

ಮಂಗಳೂರು: “ನೀವು ಮೆಸ್ಕಾಂ ಬಿಲ್‌ ಪಾವತಿಸಿಲ್ಲ. ಇವತ್ತು ನಿಮ್ಮ ಮನೆಯ ಕರೆಂಟ್‌ ಕನೆಕ್ಷನ್‌ ಕಟ್‌ ಮಾಡುತ್ತೇವೆ. ಕೂಡಲೇ ಪಾವತಿಸಿ. ಅದಕ್ಕಾಗಿ ನಾವು ಕಳುಹಿಸುವ ಆ್ಯಪ್‌(ಲಿಂಕ್‌) ನಲ್ಲಿ ತತ್‌ಕ್ಷಣ ಮಾಹಿತಿ ಹಾಕಿ…’
ಆಟೋರಿಕ್ಷಾ ಚಾಲಕರೋರ್ವರಿಗೆ ಈ ರೀತಿ ಕರೆ ಮಾಡಿರುವ ವಂಚಕರು ಅವರ ಖಾತೆಯಲ್ಲಿ ಮಗಳ ಶಾಲೆಯ ಶುಲ್ಕ ಪಾವತಿಸಲೆಂದು ಜಮೆ ಮಾಡಿಟ್ಟಿದ್ದ ಹಣವನ್ನು ಕಿತ್ತುಕೊಂಡಿದ್ದಾರೆ !.

Advertisement

ಇದು ಸೈಬರ್‌ ವಂಚಕರು ಮಂಗಳೂರಿನ ಆಟೋರಿಕ್ಷಾ ಚಾಲಕನೋರ್ವನನ್ನು ವಂಚಿಸಿದ ಪರಿ. ದಿನಕ್ಕೊಂದು ಹೊಸ ತಂತ್ರಗಳ ಮೂಲಕ ವಂಚನೆ ನಡೆಯುತ್ತಿದ್ದು ಅಮಾಯಕರ ಖಾತೆಯಿಂದ ಕ್ಷಣ ಮಾತ್ರದಲ್ಲೇ ಹಣ ವರ್ಗಾಯಿಸಿಕೊಳ್ಳಲಾಗುತ್ತಿದೆ.

ಅರ್ಜೆಂಟ್‌ ಮಾಡುತ್ತಾರೆ, ಹೆದರಿಸುತ್ತಾರೆ
“ಆಟೋರಿಕ್ಷಾ ಚಲಾಯಿಸುತ್ತಿರುವಾಗ ಎರಡು ಬಾರಿ ಕರೆ ಬಂತು. ಹಿಂದಿನ ಮೊತ್ತ ಬಾಕಿ ಇದೆ. ಕೂಡಲೇ ಪಾವತಿಸಿ ಎಂದರು. ನನಗೆ ಏನು ಮಾಡುವುದೆಂದು ತೋಚಲಿಲ್ಲ. ನಾನು ಮೊತ್ತ ಪಾವತಿಸಿದ್ದೇನೆ ಎಂದು ಉತ್ತರಿಸಿದೆ. ಆದರೆ ಅವರು ಒಪ್ಪಲಿಲ್ಲ. ನಮ್ಮ ಅಕೌಂಟ್‌ಗೆ ಕ್ರೆಡಿಟ್‌ ಆಗಿಲ್ಲ. ನಿಮ್ಮ ವಿದ್ಯುತ್‌ ಸಂಪರ್ಕ ಕಟ್‌ ಮಾಡುತ್ತೇವೆ’ ಎಂದರು. ಗೊಂದಲಕ್ಕೊಳಗಾದೆ. ಅನಂತರ ಅವರು ಹೇಳಿದಂತೆ ಮಾಡಿದೆ. ಅತ್ತ ಬಾಡಿಗೆ ಬಿಡುವಂತಿರಲಿಲ್ಲ,

ಅವಸರದಲ್ಲಿಯೇ ಅವರು ಕಳುಹಿಸಿದ ಲಿಂಕ್‌ ಒತ್ತಿದೆ. ಎಟಿಎಂ ಕಾರ್ಡ್‌ನ ಸಂಖ್ಯೆ ತಿಳಿಸಿದೆ. ಬಳಿಕ ಅವರು ಒಟಿಪಿ ಕೇಳಿದರು. ಆಗ ಸಂದೇಹ ಬಂತು. ಒಟಿಪಿ ನೀಡಲಿಲ್ಲ. ಆದರೆ ಅಷ್ಟರಲ್ಲೇ ಖಾತೆಯಿಂದ ಹಣ ಕಡಿತವಾಗುತ್ತಿರುವ ಸಂದೇಶಗಳು ಬರತೊಡಗಿದವು. ಕೂಡಲೇ ಬ್ಯಾಂಕ್‌ಗೆ ತೆರಳಿ ವಿಚಾರ ತಿಳಿಸಿದೆ. ಬ್ಯಾಂಕ್‌ನವರು ಖಾತೆ ಬ್ಲಾಕ್‌ ಮಾಡುವುದರೊಳಗೆ ಖಾತೆಯಲ್ಲಿದ್ದ 32,000 ರೂ.ಗಳನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ. ನಾನು ಮಗಳ ಶಾಲೆಯ ಫೀಸ್‌ಗೆಂದು ಹಣ ಜಮೆ ಮಾಡಿಟ್ಟಿದ್ದೆ. ಶಾಲೆಯವರಿಗೆ ಎಲ್ಲ ವಿಷಯ ತಿಳಿಸಿದ್ದೇನೆ. ಅವರು ಸ್ವಲ್ಪ ದಿನದ ಕಾಲಾವಕಾಶ ನೀಡಿದ್ದಾರೆ. ಏನು ಮಾಡುವುದೆಂದು ತೋಚುತ್ತಿಲ್ಲ’ ಎನ್ನುತ್ತಾರೆ ಮಂಗಳೂರಿನ ಓರ್ವ ಆಟೋರಿಕ್ಷಾ ಚಾಲಕ.

ಕಣ್ಣೀರು ಹಾಕುತ್ತ
ಠಾಣೆಗೆ ಬರುತ್ತಾರೆ…
“ನಾನಾ ರೀತಿಯಲ್ಲಿ ವಂಚನೆಗೊಳಗಾಗಿ ಹಣ ಕಳೆದುಕೊಂಡವರು ಕಣ್ಣೀರು ಹಾಕಿಕೊಂಡೇ ಸೈಬರ್‌ ಪೊಲೀಸ್‌ ಠಾಣೆಗೆ ಬರುತ್ತಾರೆ. ಇತ್ತೀಚೆಗೆ ಒಬ್ಬಳು ಗರ್ಭಿಣಿ ಯುವತಿ ತನ್ನ ತಾಯಿ ಜತೆ ಬಂದಿದ್ದರು. ಲೋನ್‌ ಆ್ಯಪ್‌ನ ಮೂಲಕ ಸಾಲ ಪಡೆದ ಬಳಿಕ ಆಕೆಗೆ ಕಿರುಕುಳ, ಬೆದರಿಕೆಯಿಂದ ಬೇಸತ್ತು ಜೀವ ಕಳೆದುಕೊಳ್ಳಲು ಮುಂದಾಗಿದ್ದರು. ಅವರಿಂದ ದೂರು ಸ್ವೀಕರಿಸಿ ಸಮಾಧಾನ ಮಾಡಿ ಕಳುಹಿಸಿದ್ದೇವೆ. ಇನ್ನೊಂದು ಪ್ರಕರಣದಲ್ಲಿ ವೀಡಿಯೋ ಕಾಲ್‌ ಮಾಡಿ ವಂಚನೆಯ ಸುಲಿಗೆ ಸಿಲುಕಿದ್ದ ತಂದೆಯನ್ನು ಸೈಬರ್‌ ಠಾಣೆಗೆ ಕರೆದುಕೊಂಡು ಮಗಳು ಬಂದಿದ್ದಳು. ಆಕೆಯ ತಂದೆಗೆ ಯಾರೋ ವೀಡಿಯೋ ಕರೆ ಮಾಡಿದ್ದರು. ಅವರು ಮಾತನಾಡಿದ್ದರು. ಅನಂತರ ಅವರ ವೀಡಿಯೋ ಅಶ್ಲೀಲವಾಗಿ ಎಡಿಟ್‌ ಮಾಡಿ ಅವರಿಗೆ ಕಳುಹಿಸಿ ವೈರಲ್‌ ಮಾಡುವ ಬೆದರಿಕೆ ಹಾಕಿದ್ದರು. ಕೆಲವು ಮೊತ್ತದ ಹಣ ಪಡೆದು ಹೆಚ್ಚಿನ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದರು. ಇದು ಒಂದು ದಿನ ಮಗಳಿಗೆ ಗೊತ್ತಾಗಿ ಆಕೆ ತಂದೆಯನ್ನು ಕರೆದುಕೊಂಡು ಠಾಣೆಗೆ ಬಂದಿದ್ದಳು’ ಎಂದು ಪೊಲೀಸ್‌ ಅಧಿಕಾರಿಯೋರ್ವರು ವಿವರಿಸುತ್ತಾರೆ.

Advertisement

ಖಾತೆಗಾಗಿ ಬಾಡಿಗೆ ಮನೆ !
ಪೊಲೀಸರು ಆನ್‌ಲೈನ್‌ ವಂಚಕರ ಜಾಡು ಹುಡುಕುತ್ತ ಹೋದಾಗ ಹಲವಾರು ಬಾರಿ ವಂಚಕರು ಬೇನಾಮಿ ಹೆಸರಿನ ಖಾತೆಯ ಮೂಲಕ ವಂಚನೆ ನಡೆಸುತ್ತಿರುವುದು ಗೊತ್ತಾಗಿದೆ. ಕೆಲವು ಪ್ರಕರಣಗಳಲ್ಲಿ ಪೊಲೀಸರು ದಿಲ್ಲಿಯ ಗಲ್ಲಿಗಳಲ್ಲಿ ತಿರುಗಾಡಿ ಕೊನೆಗೂ ವಂಚಕರು ಸಿಗದೆ ವಾಪಸಾಗಬೇಕಾಯಿತು. ಹೆಚ್ಚಿನ ಸಂದರ್ಭಗಳಲ್ಲಿ ವಂಚನೆಯಿಂದ ಹಣ ವರ್ಗಾಯಿಸುವುದಕ್ಕಾಗಿ ಬ್ಯಾಂಕ್‌ ಖಾತೆ ಮಾಡಿಸಲು ವಿಳಾಸ ನೀಡುವುದಕ್ಕಾಗಿಯೇ ವಂಚಕರು ಬಾಡಿಗೆ ಮನೆಗಳನ್ನು ಪಡೆದುಕೊಳ್ಳುತ್ತಾರೆ. ಅಲ್ಲಿನ ವಿಳಾಸದಲ್ಲಿ ಬ್ಯಾಂಕ್‌ ಖಾತೆ ತೆರೆದು ಆ ಖಾತೆಗೆ ವಂಚನೆಯ ಹಣ ವರ್ಗಾಯಿಸಿಕೊಳ್ಳುತ್ತಾರೆ. ಅನಂತರ ಅಲ್ಲಿಂದ ತೆರಳಿ ಬೇರೊಂದು ಕಡೆ ಬಾಡಿಗೆ ಮನೆ ಪಡೆದು ಮತ್ತಷ್ಟು ಜನರನ್ನು ವಂಚಿಸುತ್ತಾರೆ ಎನ್ನುತ್ತಾರೆ ಓರ್ವರು ಪೊಲೀಸ್‌ ಅಧಿಕಾರಿ.

ಅವಸರ, ಗೊಂದಲಕ್ಕೀಡಾಗದಿರಿ
ಸೈಬರ್‌ ವಂಚಕರು ಹಣ ದೋಚಲು ನಾನಾ ರೀತಿಯ ತಂತ್ರಗಳನ್ನು ಬಳಸುತ್ತಿದ್ದು ಸುಲಭವಾಗಿ ವಂಚಿಸುತ್ತಿದ್ದಾರೆ. ಕೆವೈಸಿ ಅಪ್‌ಡೇಟ್‌, ಪಾರ್ಟ್‌ಟೈಂ ಜಾಬ್‌, ಗಿಫ್ಟ್, ಬಹುಮಾನ, ಸೈನಿಕ ಮೊದಲಾದ ವಿಚಾರಗಳನ್ನು ಮುಂದಿಟ್ಟು ಖೆಡ್ಡಾಕ್ಕೆ ಕೆಡಹುತ್ತಿದ್ದಾರೆ. ಅಪರಿಚಿತರ ಕರೆ, ಇಮೇಲ್‌, ವಾಟ್ಸ್‌ಆ್ಯಪ್‌ ಸಂದೇಶಗಳಿಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಅವಸರ, ಗೊಂದಲಕ್ಕೊಳಗಾಗಬಾರದು. ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಬಾರದು. ವೀಡಿಯೋಕಾಲ್‌ ಸ್ವೀಕರಿಸದಿರುವುದೇ ಉತ್ತಮ. ವೈಯಕ್ತಿಕ ವಿವರ, ಬ್ಯಾಂಕ್‌ ಖಾತೆ ವಿವರ ಹಂಚಿಕೊಳ್ಳಬಾರದು ಎನ್ನುತ್ತಾರೆ ಸೈಬರ್‌ ಪೊಲೀಸರು.

ಹೆಲ್ಪ್ ಲೈನ್‌ ಗಳೇ ನಕಲಿ
ಹಿರಿಯ ನಾಗರಿಕರೊಬ್ಬರು ಮ್ಯೂಚುವಲ್‌ ಫ‌ಂಡ್‌ ಹೂಡಿಕೆ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದಾಗ ಅವರಿಗೆ ಸಿಕ್ಕಿದ
“ಹೆಲ್ಪ್ ಲೈನ್‌/ಕಸ್ಟಮರ್‌ ಕೇರ್‌’ ಸಂಖ್ಯೆಗೆ ಕರೆ ಮಾಡಿದ್ದರು. ಕೆಲವು ಹೊತ್ತಿನ ಬಳಿಕ ಅವರಿಗೆ ಮಹಿಳೆಯೋರ್ವರು ಕರೆ ಮಾಡಿ ತಾವು ಹೇಳಿದಂತೆ ಮಾಡಲು ಸೂಚಿಸಿದರು. ಆಕೆ ಹೇಳಿದನ್ನು ಹಿರಿಯ ನಾಗರಿಕರು ಅನುಸರಿಸಿದರು. ಅವರ ಮೊಬೈಲ್‌ಗೆ ಆ್ಯಪ್‌ವೊಂದು ಡೌನ್‌ಲೋಡ್‌ ಆಯಿತು. ಅನಂತರ ಅವರ ಖಾತೆಯಿಂದ ಹಣ ಕಡಿತವಾಗಲಾರಂಭಿಸಿತು. ಉದ್ಯಮಿಯೋರ್ವರ ಫೋನ್‌ಪೇಯಲ್ಲಿ ಸಮಸ್ಯೆ ಉಂಟಾದಾಗ ಅದರ ಬಗ್ಗೆ ಮಾಹಿತಿಗಾಗಿ ಗೂಗಲ್‌ನಲ್ಲಿ ಹುಡುಕಿದರು. ಅದರಲ್ಲಿ ದೊರೆತ ಹೆಲ್ಪ್ ಲೈನ್‌ ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಆ್ಯಪ್‌ ಡೌನ್‌ಲೋಡ್‌ ಮಾಡಲು ತಿಳಿಸಿದ. ಫೋನ್‌ಪೇ ಮೂಲಕ ಕ್ರೆಡಿಟ್‌ ಕಾರ್ಡ್‌ನ್ನು ಸ್ಕ್ಯಾನ್‌ ಮಾಡಲು ಹೇಳಿದ. ಉದ್ಯಮಿ ಅದೇ ರೀತಿ ಮಾಡಿದ್ದು ಅವರ ಖಾತೆಯಿಂದ ಹಣ ಕಡಿತವಾಗಿತ್ತು.

ಎಲ್ಲ ಠಾಣೆಗಳಲ್ಲಿ
ದೂರಿಗೆ ಅವಕಾಶ
ವಿವಿಧ ರೀತಿಯ ಆನ್‌ಲೈನ್‌ ವಂಚನೆಗಳು ಬೆಳಕಿಗೆ ಬರುತ್ತಿವೆ. ವಂಚಕರು ದಿನಕ್ಕೊಂದು ತಂತ್ರಗಳನ್ನು ಬಳಸುತ್ತಿದ್ದಾರೆ. ಕಳೆದುಕೊಂಡ ಹಣವನ್ನು ವಾಪಸ್‌ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ವಂಚನೆಯಾಗಿರುವುದು ಗೊತ್ತಾದ ಕೂಡಲೇ 1930 ಸಹಾಯವಾಣಿ ಅಥವಾ ಪೊಲೀಸರಿಗೆ ಮಾಹಿತಿ ನೀಡಿದರೆ ಖಾತೆ ಸ್ಥಗಿತಗೊಳಿಸಿ ಹಣ ವರ್ಗಾವಣೆಯಾಗದಂತೆ ತಡೆಯಬಹುದಾದ ಸಾಧ್ಯತೆ ಸುಮಾರು ಶೇ.40ರಷ್ಟಿರುತ್ತದೆ. ಸಾರ್ವಜನಿಕರು ವಂಚನೆಗೊಳಗಾಗದಂತೆ ಗರಿಷ್ಠ ಎಚ್ಚರಿಕೆ ವಹಿಸಬೇಕು. ಸೈಬರ್‌ ಠಾಣೆ ಮಾತ್ರವಲ್ಲದೆ ಇತರ ಯಾವುದೇ ಪೊಲೀಸ್‌ ಠಾಣೆಗಳಲ್ಲಿಯೂ ಇಂತಹ ವಂಚನೆ ಬಗ್ಗೆ ದೂರು ನೀಡಬಹುದಾಗಿದೆ.
-ಕುಲದೀಪ್‌ ಕುಮಾರ್‌ ಆರ್‌.ಜೈನ್‌,
ಪೊಲೀಸ್‌ ಆಯುಕ್ತರು, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next