ಬೆಂಗಳೂರು: ಬ್ರಿಟಿಷರ ಕಾಲದಿಂದಲೂ ಕಾಫಿ, ಟೀ, ರಬ್ಬರ್ ಬೆಳೆಯುತ್ತಿದ್ದ ರಾಜ್ಯದ ಸುಮಾರು 5,500 ಎಕರೆ ಅರಣ್ಯ ಭೂಮಿಯ ಗುತ್ತಿಗೆ ಅವಧಿ ಮುಗಿದು ಹಲವು ವರ್ಷಗಳು ಕಳೆದಿದ್ದು, ಇದುವರೆಗೆ ಅಸಲು ಮತ್ತು ಬಡ್ಡಿ ಸೇರಿ 2 ಸಾವಿರ ಕೋಟಿ ರೂ. ಸರ್ಕಾರಕ್ಕೆ ಬರಬೇಕಿದೆ. ಅಲ್ಲದೆ, ಇದುವರೆಗೆ ಈ ಭೂಮಿಯನ್ನೂ ಹಿಂದಿರುಗಿಸಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ಇಲಾಖೆಯ ಅಧಿಕಾರಿಗಳ ಜತೆಗೆ ನಡೆದ ಸಭೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಸಭೆ ಬಳಿಕ ಸಚಿವ ಈಶ್ವರ್ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಸ್ವಾತಂತ್ರ್ಯಪೂರ್ವದಿಂದ ಕೊಡಗು, ಚಾಮರಾಜನಗರ ಸೇರಿ ವಿವಿಧೆಡೆ ಅರಣ್ಯ ಭೂಮಿಯನ್ನು ಕಾಫಿ, ಟೀ, ರಬ್ಬರ್ ಬೆಳೆಯುವ ಕಂಪನಿಗಳಿಗೆ ಪ್ರತಿ ಎಕರೆಗೆ 2 ರಿಂದ 7 ರೂ.ಗಳಂತೆ 99 ವರ್ಷಗಳ ದೀರ್ಘಾವಧಿ ಗುತ್ತಿಗೆಗೆ ಕೊಡಲಾಗಿತ್ತು. 1997ರಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ಜಾರಿಗೆ ಬಂದ ಬಳಿಕ ಪ್ರತಿ ಹೆಕ್ಟೇರ್‌ಗೆ 5 ಸಾವಿರ ರೂ. ಗುತ್ತಿಗೆ ಮೊತ್ತವನ್ನು ನಿಗದಿಪಡಿಸಿತ್ತು. ಗುತ್ತಿಗೆ ಅವಧಿ ವಿಸ್ತರಿಸಿರಲಿಲ್ಲ. ಕೊಡಗು ಜಿಲ್ಲೆಯ ಪೋರ್ಟ್ ಲ್ಯಾಂಡ್ ರಬ್ಬರ್ ಎಸ್ಟೇಟ್‌ನ ಗುತ್ತಿಗೆ ಅವಧಿಯು 2022ರಲ್ಲಿ ಅಂತ್ಯಗೊಂಡಿದ್ದು, ಉಳಿದ ಬಹುತೇಕ ಕಂಪನಿಗಳ ಗುತ್ತಿಗೆ ಅವಧಿಯು 2015ರಲ್ಲೇ ಮುಗಿದಿದೆ. ಕೊಡಗು ಜಿಲ್ಲೆಯೊಂದರಲ್ಲೇ 1601 ಕೋಟಿ ರೂ. ಬರಬೇಕಿದೆ ಎಂದರು.
ಅರಣ್ಯ ಭೂಮಿ ಮೇಲೆ ಸಾಲ: ಅವಧಿ ಮುಗಿದರೂ ಭೂಮಿ ಬಳಕೆ ಮಾಡುತ್ತಿದ್ದ ಕಂಪನಿಗಳು ಗುತ್ತಿಗೆ ಮೊತ್ತ ಕೂಡ ಪಾವತಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಅರಣ್ಯ ಇಲಾಖೆ ಕೊಟ್ಟ ನೋಟಿಸ್ ಇಟ್ಟುಕೊಂಡು ವಿವಿಧ ನ್ಯಾಯಾಲಯಗಳಲ್ಲಿ ದಾವೆ ಹೂಡಿವೆ. ಕೆಲ ಕಂಪನಿಗಳು 99 ವರ್ಷದ ಗುತ್ತಿಗೆ ಅವಧಿಯನ್ನು 999 ವರ್ಷ ಎಂದು ತಿದ್ದುಪಡಿ ಮಾಡಿಕೊಂಡಿವೆ, ಕೆಲ ಕಂಪನಿಗಳು ಗುತ್ತಿಗೆಗೆ ನೀಡಿದ್ದ ಅರಣ್ಯ ಭೂಮಿಯನ್ನು ಇತರರಿಗೆ ಬಾಡಿಗೆ, ಗುತ್ತಿಗೆಗೆ ನೀಡಿರುವುದಲ್ಲದೆ, ಪರಭಾರೆ ಮಾಡಿಕೊಳ್ಳಲೂ ಪ್ರಯತ್ನಿಸಿವೆ. ಥಾಮ್ಸನ್ ರಬ್ಬರ್ ಕಂಪನಿಯು ಅರಣ್ಯ ಭೂಮಿಯನ್ನು ಸಾಗುವಳಿ ಜಮೀನು ಎಂದು ದಾಖಲೆ ಸೃಷ್ಟಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದಿದೆ. ಆದರೆ ಸಾಲವನ್ನೂ ತೀರಿಸಿಲ್ಲ. ಹೀಗಾಗಿ ಆ ಜಮೀನನ್ನು ಬ್ಯಾಂಕಿನವರು ಹರಾಜು ಹಾಕಿದ್ದಾರೆ ಎಂದರು.
ಕಾನೂನು ಹೋರಾಟಕ್ಕೆ ವಿಶೇಷ ಕೋಶ: ಇಂತಹ ಕಂಪನಿಗಳು ಸಲ್ಲಿಸಿರುವ ಅರ್ಜಿ ಇತ್ಯರ್ಥಪಡಿಸಲು ವಿಶೇಷ ಕಾನೂನು ಕೋಶ ರಚಿಸಲಾಗುತ್ತದೆ. ಈ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಪಿಸಿಸಿಎಫ್ ದರ್ಜೆಯ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲು ತೀರ್ಮಾನಿಸಲಾಗಿದೆ. ಮುಂದಿನ 6 ತಿಂಗಳಿಂದ 1 ವರ್ಷದೊಳಗಾಗಿ ಅಷ್ಟೂ ಮೊತ್ತವನ್ನು ವಸೂಲಿ ಮಾಡಿ, ಗುತ್ತಿಗೆ ಮುಗಿದ ಭೂಮಿಯನ್ನು ಇಲಾಖೆಯ ವಶಕ್ಕೆ ಪಡೆಯುವುದಾಗಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.